Site icon Vistara News

Krishna Janmashtami : ಉರ್ದು ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ; ಕೃಷ್ಣ, ರಾಧೆ, ರುಕ್ಮಿಣಿ, ಯಶೋಧೆಯರಾಗಿ ಮಿಂಚಿದ ಮುಸ್ಲಿಂ ಮಕ್ಕಳು

krishna Janmashtami Thambrahalli school

ಹಗರಿಬೊಮ್ಮನಹಳ್ಳಿ: ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಕಂದಕಗಳನ್ನು ಸೃಷ್ಟಿಸುವ ಪ್ರಯತ್ನಗಳು ಒಂದೆಡೆಯಾದರೆ ಭಾವೈಕ್ಯತೆಯೇ ಬದುಕು (life of unity) ಎಂದು ಸಾರುವ ಅಪರೂಪದ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ವಿಜಯನಗರ ಜಿಲ್ಲೆ (Vijayanagara News) ಹಗರಿಬೊಮ್ಮನಹಳ್ಳಿ ತಾಲೂಕು ತಂಬ್ರಹಳ್ಳಿ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ (Thambrahalli urdu School) ನಡೆದ ಈ ಕಾರ್ಯಕ್ರಮ ಸೌಹಾರ್ದತೆಗೆ (Communal Harmony) ಮೇರು ಉದಾಹರಣೆಯಾಗಿ ಸ್ಥಿರವಾಗಿದೆ.

ಹೇಳಿ ಕೇಳಿ ಇದು ಉರ್ದು ಶಾಲೆ. ಎಲ್ಲರಿಗೂ ಗೊತ್ತಿರುವ ಹಾಗೆ ಇಲ್ಲಿ ಓದುವ 101 ಮಕ್ಕಳಲ್ಲಿ ಶೇಕಡಾ 90ರಷ್ಟು ಮಂದಿ ಮುಸ್ಲಿಂ ಸಮಾಜದ ಮಕ್ಕಳೇ. ಅಂಥ ಶಾಲೆಯಲ್ಲಿ ಗುರುವಾರ ರಕ್ಷಾಬಂಧನ (Raksha Bandhana) ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ (Krishna Janmashtami) ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು ಮಾತ್ರವಲ್ಲ, ಹೆತ್ತವರು ಕೂಡಾ ಈ ಹಬ್ಬದಲ್ಲಿ ಖುಷಿಯಿಂದ ಭಾಗವಹಿಸಿದರು. ಎಸ್‌ಡಿಎಂಸಿ ಸದಸ್ಯರೂ ಸಂಭ್ರಮಿಸಿದರು.

ಈ ಶಾಲೆಯಲ್ಲಿರುವ 101 ಮಕ್ಕಳಲ್ಲಿ ಬಹುತೇಕ ಮಕ್ಕಳು ಕೃಷ್ಣ, ರಾಧೆ, ರುಕ್ಮಿಣಿ, ಯಶೋಧೆ ವೇಷ ಧರಿಸಿದ್ದರು. ಮುಸ್ಲಿಂ ಮಕ್ಕಳಿಗೆ ಅವರ ಹೆತ್ತವರೇ ವೇಷ ಹಾಕಿಸಿ ತಮ್ಮ ಮಕ್ಕಳನ್ನು ಕೃಷ್ಣ ರಾಧೆಯರಾಗಿ ನೋಡಿ ಹಿರಿಹಿರಿ ಹಿಗ್ಗಿದರು.

ಇದು ಕೇವಲ ಶಾಲೆಯಲ್ಲಿ ನಡೆದ ಕಾರ್ಯಕ್ರಮವಲ್ಲ. ಕೃಷ್ಣ ವೇಷ ಧರಿಸಿದ ಮಕ್ಕಳು ಹಾಗೂ ಅವರ ಪಾಲಕರು ಅತ್ಯಂತ ಶಿಸ್ತುಬದ್ಧವಾಗಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಮುಸ್ಲಿಂ ಹೆಣ್ಮಕ್ಕಳು ಕೂಡಾ ಮಕ್ಕಳೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾಗಿ ಖುಷಿಪಟ್ಟರು.

ಮಕ್ಕಳ ಮೆರವಣಿಗೆಯನ್ನು ಕಣ್ತುಂಬಿಕೊಂಡ ಗ್ರಾಮಸ್ಥರು ಕೋಮು ಸೌಹಾರ್ದತೆ ಮತ್ತು ಧಾರ್ಮಿಕ ಸಾಮರಸ್ಯ ಮೂಡಿಸುವ ಈ ಶಾಲೆಯ ಕಾರ್ಯವನ್ನು ಚಪ್ಪಾಳೆ ತಟ್ಟಿ ಶ್ಲಾಘಿಸಿದರು.

ಶಾಲೆಯಲ್ಲಿ ಎಲ್ಲ ಹಬ್ಬ ಆಚರಿಸುತ್ತೇವೆ ಎಂದ ಶಿಕ್ಷಕರಾದ ಎಲ್‌ ರೆಡ್ಡಿ ನಾಯ್ಕ

ಶಾಲೆಯಲ್ಲಿ ಹಬ್ಬದ ಸಂಭ್ರಮ ಆಚರಣೆಯ ವೇಳೆ ಮಾತನಾಡಿದ ತಂಬ್ರಹಳ್ಳಿ ಉರ್ದು ಶಾಲೆಯ ಮುಖ್ಯ ಗುರುಗಳಾದ ಎಲ್.ರೆಡ್ಡಿ ನಾಯ್ಕ ಅವರು ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಜೊತೆ ಜೊತೆಗೆ ಧಾರ್ಮಿಕ ಹಬ್ಬಗಳನ್ನೂ ಆಚರಿಸುತ್ತಿರುವುದಾಗಿ ಹೇಳಿದರು.

ಮಕ್ಕಳಲ್ಲಿ ಭ್ರಾತೃತ್ವ, ಸೌಹಾರ್ದತೆ, ಭಾವೈಕ್ಯತೆ ಭಾವಗಳನ್ನು ಮೂಡಿಸುವ ಉದ್ದೇಶದಿಂದ ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆ. ಶ್ರೀ ಕೃಷ್ಣ ಜನ್ಮಾಷ್ಟಮಿ, ರಕ್ಷಾಬಂಧನ ಗಣೇಶೋತ್ಸವ ಇತ್ಯಾದಿ ಹಬ್ಬಗಳನ್ನು ಪಾಲಕರ ಸಹಕಾರದೊಂದಿಗೆ ಆಚರಿಸಲಾಗುತ್ತಿದೆ ಎಂದು ಎಲ್‌. ರೆಡ್ಡಿ ನಾಯ್ಕ ತಿಳಿಸಿದರು.

ಇದನ್ನೂ ಓದಿ: Krishna janmastami: ಫೆಸ್ಟಿವ್‌ ಸೀಸನ್‌ನಲ್ಲಿ ಹೆಚ್ಚಾಯ್ತು ಕೃಷ್ಣ ಜನ್ಮಾಷ್ಟಮಿ ಥೀಮ್‌ ಫೋಟೋಶೂಟ್ಸ್

ಎಲ್ಲರೂ ಸರ್ವಧರ್ಮ ಸಮನ್ವಯ ಮಹತ್ವವನ್ನು ಗೌರವಿಸಿ ಭಾರತದ ಪ್ರಜೆಗಳಾಗಿ ನಾವೆಲ್ಲರೂ ಭಾವೈಕ್ಯತೆಯಿಂದ ಪರಸ್ಪರ ಸಹಕಾರ ಸೌಹಾರ್ದತೆಯಿಂದ ಬದುಕಬೇಕು ಎನ್ನುವುದೇ ಈ ಸಂಭ್ರಮದ ಆಚರಣೆಯ ಉದ್ದೇಶ ಎಂದರು.

ಅಣ್ಣ-ತಂಗಿಯರ ಹಬ್ಬವೆಂದೇ ಹೆಸರಾದ ರಕ್ಷಾ ಬಂಧನದ ನಿಮಿತ್ತವಾಗಿ ಶಾಲೆಯ ಎಲ್ಲಾ ಮಕ್ಕಳು ಪರಸ್ಪರ ರಾಖಿಯನ್ನು ಕಟ್ಟಿಕೊಂಡರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿಯ ಸದಸ್ಯರಾದ ಶಮೀಮ್ ಬಾನು, ರೇಷ್ಮಾಬಿ, ಹಜರತ್ ಬೇಗಂ, ಪಿಂಜಾರ್ ರಾಜಭಕ್ಷಿ, ಜಿಲ್ಲಾನ, ಗಂಗಮ್ಮ ಶ್ರೀನಿವಾಸ ಪರಸಪ್ಪ ಗವಿಸಿದ್ದಪ್ಪ ಶಿಕ್ಷಕರಾದ ಶಾಕಿರಾಬೇಗಂ, ಮುಮ್ತಾಜ್ ಬೇಗಂ ಹಮೀದಾ ಖಾತುನ್, ಶೈನಾಜ್ ಬೇಗಂ ರವಿಕುಮಾರ ಸಕ್ರಹಳ್ಳಿ, ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

Exit mobile version