ಬೆಂಗಳೂರು: ಹೊಸಪೇಟೆಯಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೃಷ್ಣ ಭಟ್ ಎನ್ನುವವರು ಸೇರ್ಪಡೆಯಾಗಿದ್ದಾರೆ. ಈ ಕುರಿತು ಈಗ ಗೊಂದಲಗಳು ನಿರ್ಮಾಣವಾಗಿವೆ.
ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಭಾಷಣ ಮಾಡಿದ ನಂತರ ಆಗಮಿಸಿದ ಸ್ಥಳೀಯ ಮುಖಂಡರೊಬ್ಬರು, “ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಸಹೋದರನ ಪುತ್ರ ಕೃಷ್ಣ ಭಟ್ ಅವರು ಕಾಂಗ್ರೆಸ್‌ನ ತತ್ವ, ಸಿದ್ಧಾಂತವನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ” ಎಂದು ಘೋಷಣೆ ಮಾಡಿದರು.
ಈ ವೇಳೆ ಬಿಳಿಯ ಪಂಚೆ ಹಾಗೂ ಅಂಗಿ ತೊಟ್ಟ ಯುವಕರೊಬ್ಬರು ವೇದಿಕೆಗೆ ಆಗಮಿಸಿದರು. ಅವರಿಗೆ ಪಕ್ಷದ ಧ್ವಜವನ್ನು ಹೊದಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕೆ ಬರಮಾಡಿಕೊಂಡರು.
ಧರ್ಮಸ್ಥಳ ಧರ್ಮಾಧಿಕಾರಿಗಳಿಗೆ ಈ ಹೆಸರಿನ ಸಂಬಂಧಿಕರು ಇದ್ದಾರೆಯೇ ಎಂಬ ಚರ್ಚೆ ನಡೆಯುತ್ತಿದೆ. ಈ ಕುರಿತ ವಿಡಿಯೋಗಳು ಹರಿದಾಡುತ್ತಿವೆ. ಈ ವಿಡಿಯೋ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಅವರಿಗೂ ತಲುಪಿದೆ. ಈ ಕುರಿತು ʼವಿಸ್ತಾರ ನ್ಯೂಸ್ʼಗೆ ಪ್ರತಿಕ್ರಿಯಿಸಿದ ವೀರು ಶೆಟ್ಟಿ ಅವರು, ಇಂತಹ ಯಾವುದೇ ವ್ಯಕ್ತಿ ಹೆಗ್ಗಡೆ ಅವರ ಕುಟುಂಬದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೆಲ್ಲದರ ನಡುವೆ, ಕಾಂಗ್ರೆಸ್ ಸೇರ್ಪಡೆಯಾದ ಕೃಷ್ಣ ಭಟ್ ಯಾರು ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.
ಇದನ್ನೂ ಓದಿ | Defection politics | ಜಿ.ಟಿ. ದೇವೇಗೌಡರ ಐವರು ಆಪ್ತ ನಾಯಕರು ಜೆಡಿಎಸ್‌ಗೆ ರಾಜೀನಾಮೆ, ಕಾಂಗ್ರೆಸ್ ಸೇರ್ಪಡೆ ಫಿಕ್ಸ್