Site icon Vistara News

Prajadhwani Yatre : ಬಿಜೆಪಿ ನಾಯಕರ ವಿಡಿಯೋ ರಕ್ಷಣೆಗೆ ಡ್ರಗ್ಸ್‌ ದಾಳಿ ನಡೆಸಲಾಗಿತ್ತು: ಸರ್ಕಾರದ ವಿರುದ್ಧ ಸುರ್ಜೆವಾಲ ಆರೋಪ

prajadhwani-yatre-aicc general secretary alleges raid on drugs is to protect bjp leaders videos

ಹೊಸಪೇಟೆ: ಡ್ರಗ್ಸ್‌ ಅಡ್ಡೆಗಳ ಮೇಲೆ ದಾಳಿ ಹೆಸರಿನಲ್ಲಿ ನಡೆಸಿದ್ದು, ಬಿಜೆಪಿ ನಾಯಕರ ವಿಡಿಯೋಗಳು ಹೊರಬರದಂತೆ ತಡೆಯುವ ಸಲುವಾಗಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಆರೋಪ ಮಾಡಿದ್ದಾರೆ. ಹೊಸಪೇಟೆಯಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ (Prajadhwani Yatre) ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಮಾದಕದ್ರವ್ಯ ವಿಚಾರವಾಗಿ ನಡೆದ ದಾಳಿ ಯುವಕರ ಮೇಲೆ, ಸಿನಿಮಾ ತಾರೆಯರ ಮೇಲೆ ನಡೆದ ದಾಳಿ ಅಲ್ಲ. ಅದು ಬಿಜೆಪಿ ನಾಯಕರ ವಿಡಿಯೋ ರಕ್ಷಿಸಲು ಮಾಡಲಾದ ದಾಳಿಯಾಗಿತ್ತು. ಈ ಸರ್ಕಾರ ಎಂತಹ ನೀಚ ಹಂತಕ್ಕೆ ತಲುಪಿದೆ ಎಂದರೆ ವಶ್ಯಾವಾಟಿಕೆ ದಂಧೆ ನಡೆಸುವ ಸ್ಯಾಂಟ್ರೋ ರವಿ ಎಂಬ ವ್ಯಕ್ತಿ ವ್ಯಕ್ತಿ ಪೊಲೀಸ್ ಎಸ್ಪಿ, ಡಿವೈಎಸ್ಪಿಗೆ ಕರೆ ಮಾಡುತ್ತಾರೆ. ಇದು ಸರ್ಕಾರ ನಡೆಸುವ ರೀತಿಯೇ? ಇವರು ನಿಮ್ಮ ಮಕ್ಕಳಿಗೆ ನೆರವು ನೀಡುವರೇ? ಎಂದು ಪ್ರಶ್ನಿಸಿದರು.

ಪ್ರಜಾಧ್ವನಿ ಎಂದರೆ ಬಸ್ ನ ಹೆಸರಲ್ಲ, ಇಲ್ಲಿರುವ ನಾಯಕರ ಹೆಸರಲ್ಲ, ಇದು ರಾಜ್ಯದ ಜನರ ಧ್ವನಿಯ ಹೆಸರಾಗಿದೆ. ವಿಜಯನಗರವಾಗಲಿ, ಬಳ್ಳಾರಿಯಾಗಲಿ ಅಥವಾ ರಾಜ್ಯದ ಇತರ ಪ್ರದೇಶವಾಗಲಿ, ಈ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತಿವೆ. ಹಿಂದೂಸ್ಥಾನದ ಅತ್ಯಂತ ಭ್ರಷ್ಟ ಸರ್ಕಾರ ಎಂದರೆ ಅದು ಬೊಮ್ಮಾಯಿ ಸರ್ಕಾರ. ಹಿಂದೂಸ್ಥಾನದಲ್ಲಿ ರಾಜ್ಯದ ಖಜಾನೆಯನ್ನು ಹೆಚ್ಚಾಗಿ ಲೂಟಿ ಮಾಡಿರುವ ಸರ್ಕಾರ ಎಂದರೆ ಅದು ರಾಜ್ಯ ಬಿಜೆಪಿ ಸರ್ಕಾರ.

ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಬಿಜೆಪಿ ಶಾಸಕನ ವಿರುದ್ಧ 90 ಲಕ್ಷ ಲಂಚದ ಆರೋಪ ಮಾಡಿದ್ದಾರೆ. ಗುತ್ತಿಗೆದಾರರ ಸಂಘದ ಆರೋಪ, ಕಾಂಗ್ರೆಸ್ ಪಕ್ಷದ ಆರೋಪವನ್ನು ಬಿಟ್ಟುಬಿಡಿ. ಬಿಜೆಪಿ ಶಾಸಕ ಯತ್ನಾಳ್ ಪ್ರತಿನಿತ್ಯ ಸಾರ್ವಜನಿಕವಾಗಿ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು 2500 ಕೋಟಿಗೆ ಮಾರಾಟ ಮಾಡಿದೆ. ಸಿಎಂ ಕುರ್ಚಿಯನ್ನು ಮಾರಾಟ ಮಾಡಿದರೆ ನಿಮ್ಮನ್ನು ಸುಮ್ಮನೇ ಬಿಡುವರೇ? ಬಿಜೆಪಿಯ ಕೈಗಾರಿಕ ಸಚಿವರನ್ನು ಯತ್ನಾಳ್ ಅವರು ದಳ್ಳಾಳಿ ಎಂದು ಕರೆದರು. ಈ ಸರ್ಕಾರ ಅಧಿಕಾರದಲ್ಲಿ ಕೂತು ದಳ್ಳಾಳಿಗಿರಿ ಮಾಡುತ್ತಿದೆಯೇ? ಇದನ್ನು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ.

ದೇಶದ ಗೃಹಮಂತ್ರಿ ಅಮಿತ್ ಶಾ ಅವರನ್ನು ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್ ರೌಡಿ ಎಂದು ಕರೆದಿದ್ದಾರೆ. ಇದು ರೌಡಿಗಳ ಪಕ್ಷವೇ? ಗೂಂಡಾಗಳ ಸರ್ಕಾರದ ಬಗ್ಗೆ ಮಾತನಾಡುವುದಾದರೆ ಅದರ ಒಂದು ಭಾಗ ಈ ಜಿಲ್ಲೆಯಲ್ಲೂ ಇದೆ. ನಮ್ಮ ಪರಿಶಿಷ್ಟ ಜಾತಿಯ ಸಹೋದರರ ಮೇಲೆ ಮಂತ್ರಿ ಆನಂದ್ ಸಿಂಗ್ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಮೊಕದ್ದಮೆ ದಾಖಲಾದರೂ ಆತ ಜೈಲಿನಲ್ಲಿರುವ ಬದಲು ಮಂತ್ರಿ ಕುರ್ಚಿ ಮೇಲೆ ಕೂತಿದ್ದಾರೆ.

ನಿಮ್ಮ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಎಲ್ಲ ಭ್ರಷ್ಟ ಮಂತ್ರಿಗಳನ್ನು ಜೈಲಿಗೆ ಅಟ್ಟಲಿದೆ. ಬಡವರು, ದಲಿತರು, ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇನ್ನು 70 ದಿನಗಳಲ್ಲಿ ಈ ಸರ್ಕಾರ ಅಂತ್ಯವಾಗಿ ನಿಮಗೆ ನ್ಯಾಯ ಸಿಗಲಿದೆ. ಇಲ್ಲಿರುವ ಯುವಕರಿಗೆ ಉದ್ಯೋಗ ನಷ್ಟವಾಗಿದ್ದು, ಬಿಜೆಪಿ ಸರ್ಕಾರದ ನಾಯಕರು ಇಲ್ಲಿನ ಗಣಿಯನ್ನು ಲೂಟಿ ಮಾಡಿದ್ದಾರೆ. ಪರಿಸರ ಕಾಪಾಡುತ್ತಾ ಗಣಿಗಾರಿಕೆ ಮಾಡಿದರೆ ನಮ್ಮ ಲಕ್ಷಾಂತರ ಜನರಿಗೆ ಮತ್ತೆ ಉದ್ಯೋಗ ಸಿಗಲಿದೆ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಸರಿ ನಾವು ಗಣಿ ಮಾಫಿಯಾವನ್ನು ಬಿಡುವುದಿಲ್ಲ, ಜತೆಗೆ ನಮ್ಮ ಜನರ ಉದ್ಯೋಗವನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ. ಇದು ನಮ್ಮ ವಾಗ್ದಾನ.

ಕಾಂಗ್ರೆಸ್ ಪಕ್ಷ ಕೆಲವು ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಿದೆ. ಕಾಂಗ್ರೆಸ್ ಕೊಟ್ಟ ವಚನದಂತೆ ನಡೆಯುತ್ತದೆ. ಕಾಂಗ್ರೆಸ್ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದರೆ ಅದು ಜಾರಿಗೆ ಬರುತ್ತದೆ. ರಾಜ್ಯದ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಣವನ್ನು ನೀಡಲಾಗುವುದು. ಆಮೂಲಕ ನವ ಕರ್ನಾಟಕ ನಿರ್ಮಾಣ ಮಾಡಲಾಗುವುದು. ಈ ನವ ಕರ್ನಾಟಕದಲ್ಲಿ ಯುವಕರು, ಮಹಿಳೆಯರು, ರೈತರು, ಶ್ರಮಜೀವಿ ಕಾರ್ಮಿಕರಿಗೆ ಜಾಗ ಇರುತ್ತದೆ. ರಾಜ್ಯವನ್ನು ಪ್ರಗತಿಯತ್ತ ಮುನ್ನಡೆಸಲಾಗುವುದು.

ಇದನ್ನೂ ಓದಿ | Karnataka Election | ಅಮಿತ್​ ಶಾ ರೌಡಿ ಇದ್ದ ಹಾಗೆ, ಒಳಗೊಂದು, ಹೊರಗೊಂದು; ಸಿಪಿವೈ ವೈರಲ್​ ಆಡಿಯೊದಲ್ಲಿದೆ ಈ ಹೇಳಿಕೆ

Exit mobile version