ವಿಜಯನಗರ: ರಸ್ತೆ ಅಪಘಾತವೊಂದರಲ್ಲಿ (Road Accident) ರಾಜ್ಯ ವ್ಯಾಪ್ತಿಯ ರೈತ ನಾಯಕ (Farmer Leader) ಜೆ. ಕಾರ್ತಿಕ್ (40) ಮೃತಪಟ್ಟಿದ್ದಾರೆ. ಅಪಘಾತ ನಡೆದ ರೀತಿ ನಿಗೂಢವಾಗಿದ್ದು, ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ. ಕೊಲೆ ಸಾಧ್ಯತೆಗಳನ್ನೂ (Murder Case) ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಬೂದಗುಂಪಾ ಕ್ರಾಸ್ ಬಳಿಯಲ್ಲಿ ಜೆ. ಕಾರ್ತಿಕ್ ಅವರು ಚಲಾಯಿಸುತ್ತಿದ್ದ ಬೈಕ್ ಹೆದ್ದಾರಿ ಬಳಿ ಬಿದ್ದಿದ್ದು, ಅದರ ಪಕ್ಕದಲ್ಲಿ ತೀವ್ರ ಗಾಯಗೊಂಡು ತಲೆಯಿಂದ ರಕ್ತ ಸೋರುತ್ತಿದ್ದ ಕಾರ್ತಿಕ್ ಕಂಡುಬಂದಿದ್ದರು. ಗಾಯಗೊಂಡಿದ್ದ ಕಾರ್ತಿಕ್ ಅವರನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ 4.30ರ ವೇಳೆ ಅವರು ಕೊನೆಯುಸಿರು ಎಳೆದಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ನಿವಾಸಿಯಾದ ಜೆ. ಕಾರ್ತಿಕ್ ಅವರು ಹೊಸಪೇಟೆಯಿಂದ ಕೊಪ್ಪಳದತ್ತ ಬೈಕ್ ಮೇಲೆ ತೆರಳುತ್ತಿದ್ದರು ಎನ್ನಲಾಗಿದೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ಅಪಘಾತದ ಪ್ರತ್ಯಕ್ಷದರ್ಶಿಗಳು ಯಾರೂ ಇಲ್ಲವಾದುದರಿಂದ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೋ, ಹಿಟ್ ಆ್ಯಂಡ್ ರನ್ ಆಗಿದೆಯೋ ತಿಳಿದುಬಂದಿಲ್ಲ.
ಹೊಸಪೇಟೆಯ ನಿವಾಸಿ ಕಾರ್ತಿಕ್ ನಾನಾ ರೈತರ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಈ ಹಿಂದೆ ಕೋಡಿಹಳ್ಳಿ ಚಂದ್ರಶೇಖರ ಬಣದ ರೈತ ಸಂಘದಲ್ಲಿದ್ದರು. ನಂತರ ಕೋಡಿಹಳ್ಳಿ ಚಂದ್ರಶೇಖರ್ ಬಣದಿಂದ ಹೊರಬಂದು ಸ್ವತಃ ಸಂಘವೊಂದನ್ನು ಕಟ್ಟಿದ್ದರು. ಕರ್ನಾಟಕ ರಾಜ್ಯ ರೈತರ ಸಂಘ ಹಸಿರು ಸೇನೆ ಅನ್ನುವ ಸಂಘದಲ್ಲಿ ಸಕ್ರಿಯರಾಗಿದ್ದರು.
ಹಲವು ಹೋರಾಟಗಳಲ್ಲಿ ಭಾಗಿಯಾಗಿದ್ದ ಕಾರ್ತಿಕ್ ಸಾವಿನ ಹಿಂದೆ ಹಲವು ಅನುಮಾನ ಎದ್ದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ. ಎಲ್ಲಾ ಆಯಾಮಗಳಿಂದ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಮರಕ್ಕೆ ಕಾರು ಡಿಕ್ಕಿ, ಇಬ್ಬರು ಸಾವು
ಚಿತ್ರದುರ್ಗ: ರಸ್ತೆ ಬದಿಯ ಮರಕ್ಕೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಲಂಬಾಣಿಹಟ್ಟಿ ಸಮೀಪ ಘಟನೆ ನಡೆದಿದೆ.
ಚಿತ್ರಯ್ಯನಹಟ್ಟಿ ನಿವಾಸಿ ವೆಂಕಟೇಶ (55), ಸೂಜಿಮಲ್ಲೇಶ ನಗರದ ವೆಂಕಟೇಶ (55) ಮೃತರು. ಮತ್ತೊಬ್ಬರಿಗೆ ಗಾಯಗಳಾಗಿವೆ. ಗಾಯಾಳು ಕಿಶೋರ್ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ಆಕಸ್ಮಿಕ, ಕೊಬ್ಬರಿ ಗೋದಾಮು ಭಸ್ಮ
ಚಿತ್ರದುರ್ಗ: ಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಗುಡ್ಡದ ಪಕ್ಕದಲ್ಲಿ ಇದ್ದ ಕೊಬ್ಬರಿ ಗೋದಾಮಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಅಗ್ನಿ ಜ್ವಾಲೆಗೆ ಲಕ್ಷಾಂತರ ಮೌಲ್ಯದ ಕೊಬ್ಬರಿ ಭಸ್ಮವಾಗಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದ ಕೆರೆಯಲ್ಲಿ ಘಟನೆ ನಡೆದಿದೆ. ಗುಡ್ಡದಿಂದ ಬೆಂಕಿ ತಗುಲಿ ಜಗದೀಶ್ ಎಂಬ ವ್ಯಕ್ತಿಗೆ ಸೇರಿದ್ದ ಗೋದಾಮು ಹೊತ್ತಿ ಉರಿದಿದೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road accident : ಭಯಾನಕ ಅಪಘಾತ; MBBS ವಿದ್ಯಾರ್ಥಿ ಸಹಿತ ಇಬ್ಬರು ಸಾವು