ವಿಜಯನಗರ: ಬೈಕ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ (Road Accident) ಸವಾರ ಸ್ಥಳದಲ್ಲೇ ಮೃತಪಟ್ಟರೆ, ಇನ್ನೋರ್ವ ಗಂಭೀರ ಗಾಯಗೊಂಡಿದ್ದಾನೆ. ಶಂಕರ್ (26) ಮೃತ ದುರ್ದೈವಿ.
ವಿಜಯನಗರದ ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮದಲ್ಲಿ ಅಪಘಾತ ನಡೆದಿದೆ. ಶಂಕರ್, ಸುಂಕಪ್ಪ ಇಬ್ಬರೂ ಪಿಕೆ ಹಳ್ಳಿ ಗ್ರಾಮದವರು. ಲಾರಿ ಗಂಗಾವತಿಯಿಂದ ಬುಕ್ಕಸಾಗರಕ್ಕೆ ಬರುತ್ತಿತ್ತು. ಬುಕ್ಕಸಾಗರಿಂದ ಗಂಗಾವತಿಯತ್ತ ಬೈಕ್ ಬರುವಾಗ ಮುಖಾಮುಖಿ ಡಿಕ್ಕಿ ಆಗಿದೆ.
ಕಮಲಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗಾಯಾಳು ಸುಂಕಪ್ಪನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆತನೂ ಚಿಕಿತ್ಸೆ ಫಲಿಸದೇ ಶುಕ್ರವಾರ ಸಂಜೆ ಮೃತಪಟ್ಟಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
ಇದನ್ನೂ ಓದಿ: Fraud Case: ಆರ್‌ಬಿಐ ಹಾಗೂ ಇಡಿ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ; ಖತರ್ನಾಕ್ ಗ್ಯಾಂಗ್ ಅರೆಸ್ಟ್
ಕೊಡಗಿನಲ್ಲಿ ಮರಕ್ಕೆ ಬೈಕ್ ಡಿಕ್ಕಿ; ಸವಾರರ ದುರ್ಮರಣ
ಕೊಡಗಿನ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬೈಕ್‌ವೊಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರರು ಇಬ್ಬರು ದುರ್ಮರಣ ಹೊಂದಿದ್ದಾರೆ. ಕೊಡಗಿನ ಸುಂಟಿಕೊಪ್ಪ ಬಳಿಯ ಶಾಂತಿಗೇರಿಯಲ್ಲಿ ರಾತ್ರಿ ಅಪಘಾತ ನಡೆದಿದೆ. ಪ್ರಸನ್ನ(24), ಆಕಾಶ್(24) ಮೃತ ದುರ್ದೈವಿಗಳು.
ಮೃತರು ಪಿರಿಯಾಪಟ್ಟಣ ತಾಲೂಕಿನ ಹಾಲೇನಹಳ್ಳಿ ನವಲೂರು ಗ್ರಾಮದವರು. ಪಿರಿಯಾಪಟ್ಟಣದಿಂದ ಮಡಿಕೇರಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿದ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ತುಮಕೂರಿನಲ್ಲಿ ಬೈಕ್‌ಗಳ ನಡುವೆ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು
ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಜೈಪುರ ಗೇಟ್ ಬಳಿ ಘಟನೆ ನಡೆದಿದೆ. ಹೊಳೆ ನರಸೀಪುರ ತಾಲೂಕಿನ ಹಳ್ಳಿ ಮೈಸೂರು ಹೋಬಳಿಯ ಕಲ್ಲಳ್ಳಿ ನಿವಾಸಿ ನವೀನ್ (28) ಹಾಗೂ ತಿಪಟೂರು ತಾಲೂಕಿನ ಗಂಗನಘಟ್ಟ ಗ್ರಾಮದ ಶೇಷಾದ್ರಿ (47) ಮೃತ ದುರ್ದೈವಿಗಳು.
ನವೀನ್ ಎಂಬಾತ ಚನ್ನರಾಯಪಟ್ಟಣ ಕಡೆಯಿಂದ ತಿಪಟೂರು ಮಾರ್ಗವಾಗಿ ಅಪಾಚಿ ಬೈಕ್‌ನಲ್ಲಿ ಹೋಗುತ್ತಿದ್ದ. ಈ ವೇಳೆ ಶೇಷಾದ್ರಿ ಹಾಗೂ ಸಚಿನ್ ಎಂಬುವವರು ಹಿಂಬದಿಯಿಂದ ಜುಪಿಟರ್ ಬೈಕ್‌ನಲ್ಲಿ ಬರುತ್ತಿದ್ದರು. ಮುಂದೆ ಹೋಗುತ್ತಿದ್ದ ನವೀನ್ ಏಕಾಏಕಿ ಬೈಕ್ ತಿರುಗಿಸಿದ ಪರಿಣಾಮ, ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿದೆ.
ಡಿಕ್ಕಿ ರಭಸಕ್ಕೆ ನವೀನ್, ಶೇಷಾದ್ರಿ ಸ್ಥಳದಲ್ಲೇ ಮೃತಪಟ್ಟರೆ, ಸಚಿನ್ ಎಂಬಾತನಿಗೆ ಗಂಭೀರ ಗಾಯವಾಗಿದೆ. ಸ್ಥಳಕ್ಕೆ ನೊಣವಿನಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ತಿಪಟೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ