ವಿಜಯನಗರ: ಖಾಸಗಿ ಸ್ಲೀಪರ್ ಬಸ್ ಮತ್ತು ಲಾರಿ ನಡುವೆ ಡಿಕ್ಕಿಯಾಗಿದ್ದು, ಗುದ್ದಿರುವ ರಭಸಕ್ಕೆ ಪ್ರಯಾಣಿಕನೊಬ್ಬ ಮಲಗಿದ್ದಲೇ ಉಸಿರು ಚೆಲ್ಲಿದ್ದಾನೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಜಂಬಯ್ಯನ ಕೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಪಘಾತ (Road Accident) ನಡೆದಿದೆ.
ರಾಯಚೂರು ಮೂಲದ ವ್ಯಕ್ತಿ ಮೃತಪಟ್ಟಿದ್ದು, ಅಪಘಾತದ ರಭಸಕ್ಕೆ ಮುಖದ ಭಾಗ ಪೂರ್ತಿ ನಜ್ಜುಗುಜ್ಜಆಗಿದೆ. ಸದ್ಯ ಮೃತನ ಹೆಸರು ಗುರುತು ಪತ್ತೆ ಆಗಿಲ್ಲ. ಖಾಸಗಿ ಬಸ್ ಬೆಂಗಳೂರಿನಿಂದ ಹೊಸಪೇಟೆ ಕಡೆಗೆ ಬರುತ್ತಿದ್ದರೆ, ಲಾರಿಯು ಹೊಸಪೇಟೆ ಕಡೆಯಿಂದ ಕೂಡ್ಲಿಗಿ ಕಡೆ ಹೊರಟಿತ್ತು.
ನಿದ್ರೆ ಮಂಪರಿನಲ್ಲಿ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿರಬಹುದು ಶಂಕಿಸಲಾಗಿದೆ. ಸದ್ಯ ಲಾರಿಯಲ್ಲಿದ್ದವರಿಗೆ ಹಾಗೂ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಗಾಯವಾಗಿದ್ದು, ಎಲ್ಲರನ್ನೂ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಚೆಲ್ಲಾಪಿಲ್ಲಿಯಾಗಿದ್ದ ವಾಹನಗಳನ್ನು ಪೊಲೀಸರು ತೆರವು ಮಾಡಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತನ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಧಗ ಧಗನೆ ಹೊತ್ತಿ ಉರಿದ ಕಾರು
ರಾಯಚೂರಿನ ಹಟ್ಟಿ ಚಿನ್ನದ ಗಣಿಯ ಮುಖ್ಯ ದ್ವಾರದಲ್ಲಿ ಕಾರೊಂದು ಧಗಧಗನೆ ಹೊತ್ತಿ ಉರಿದಿದೆ. ಏಕಾಏಕಿ ಬೆಂಕಿ ತಗುಲಿದ್ದು ಕ್ಷಣಾರ್ಧದಲ್ಲೇ ಕಾರು ಸುಟ್ಟು ಕರಕಲಾಗಿದೆ. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ಕಾರನ್ನು ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದರು. ಅನಿಲ್ ಫೋರಮೆನ್ ಎಂಬುವರಿಗೆ ಸೇರಿದ ಕಾರಿಗೆ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಸುಟ್ಟು ಕರಕಲಾಗಿದೆ. ತಕ್ಷಣ ನೀರು ಎರಚಿ ಬೆಂಕಿ ನಂದಿಸಿಲು ಸ್ಥಳೀಯರು ಪ್ರಯತ್ನಿಸಿದರು. ಆದರೆ ಬೆಂಕಿಯ ಕೆನ್ನಾಲಿಗೆಗೆ ಕಾರು ಸುಟ್ಟು ಭಸ್ಮವಾಗಿತ್ತು. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Ira Khan: ಬಿಕಿನಿ ಧರಿಸಿ ಕುಣಿದು ಕುಪ್ಪಳಿಸಿದ ಆಮೀರ್ ಪುತ್ರಿ; ಟ್ರೋಲ್ ಆದ ಇರಾ ಖಾನ್!
ಭೀಕರ ಕಾರು ಅಪಘಾತಕ್ಕೆ ಮೂವರು ಸಾವು; ಮರದಲ್ಲಿ ನೇತಾಡಿದ ಪ್ರಯಾಣಿಕನ ಶವ
ಚಿಕ್ಕಬಳ್ಳಾಪುರ: ಭೀಕರ ಕಾರು ಅಪಘಾತವೊಂದರಲ್ಲಿ (Road Accident) ಕಾರು ಕಾಲುವೆಗೆ ಬಿದ್ದು (car Accident) ಮೂವರು ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಪ್ರಯಾಣಿಕರೊಬ್ಬರ ಶವ ಮರದಲ್ಲಿ ನೇತಾಡುತ್ತಿದ್ದುದು ಕಂಡುಬಂದಿದ್ದು, ಇದನ್ನು ನೋಡಿದವರೇ ಬೆಚ್ಚಿಬಿದ್ದಿದ್ದಾರೆ.
ಗೌರಿಬಿದನೂರು (Gauribidanur) ತಾಲ್ಲೂಕಿನ ವಾಟದಹೊಸಹಳ್ಳಿ ಬಳಿ ದುರ್ಘಟನೆ ನಡೆದಿದೆ. ರಾತ್ರಿಯೇ ಅಪಘಾತ ನಡೆದಿದೆ ಎಂದು ಶಂಕಿಸಲಾಗಿದ್ದು, ಮುಂಜಾನೆವರೆಗೆ ಯಾರ ಗಮನಕ್ಕೂ ಬಂದಿರಲಿಲ್ಲ. ಬ್ರೆಝಾ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಲುವೆಗೆ ಉರುಳಿಕೊಂಡಿದೆ. ಕಾರಿನಲ್ಲಿ ನಾಲ್ವರಿದ್ದು, ಮೂವರು ಮೃತಪಟ್ಟಿದ್ದಾರೆ. ಒಬ್ಬ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತಪಟ್ಟವರು ಬೆಸ್ಕಾಂ ಸಿಬ್ಬಂದಿ ಎಂದು ತಿಳಿದುಬಂದಿದೆ. ಇವರನ್ನು ಕೆಪಿಟಿಸಿಎಲ್ ವೇಣಗೋಪಾಲ್ (34), ಶ್ರೀಧರ್ (35) ಹಾಗೂ ಬೆಸ್ಕಾಂ ಲೈನ್‌ಮ್ಯಾನ್ ಮಂಜಪ್ಪ (35) ಎಂದು ಗುರುತಿಸಲಾಗಿದೆ. ಕಾರು ಕಾಲುವೆಗೆ ಉರುಳುವಾಗ ಬಾಗಿಲು ತೆರೆದ ಕಾರಿನಿಂದ ಚಿಮ್ಮಿದ ಒಬ್ಬ ಪ್ರಯಾಣಿಕನ ದೇಹ ಮರದಲ್ಲಿ ಸಿಕ್ಕಿಹಾಕಿಕೊಂಡಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ