Site icon Vistara News

Snake Bites: ಹಾವು ಕಡಿತಕ್ಕೆ ವ್ಯಕ್ತಿ ಸಾವು; ಸಕಾಲಕ್ಕೆ ಆಂಬ್ಯುಲೆನ್ಸ್‌ ಸಿಕ್ಕಿದ್ದರೆ ಉಳಿತಿತ್ತು ಜೀವ

snake bite in Vijayanagar

ವಿಜಯನಗರ : ಹಾವು ಕಡಿದು (Snake Bites) ವ್ಯಕ್ತಿ ಮೃತಪಟ್ಟಿರುವ ಘಟನೆ ವಿಜಯನಗರ (Vijayanagar News) ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಹೊನ್ನೇಹಳ್ಳಿ ಗ್ರಾಮದ (33) ನಿಂಗರಾಜ್ ಮೃತ ದುರ್ದೈವಿ.

ಅಡಕೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದಾಗ ನಿಂಗರಾಜ್‌ಗೆ ಹಾವು ಕಡಿದಿದೆ. ಕೂಡಲೇ ಉರಿ ಉರಿ ಎಂದು ಕಿರುಚಾಡಿದ್ದಾರೆ. ಕೂಡಲೇ ಅಕ್ಕ -ಪಕ್ಕದ ಹೊಲದವರು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮನೆಗೆ ಕರೆತಂದಿದ್ದಾರೆ. ಇತ್ತ ನಿಂಗರಾಜ್ ತೀವ್ರ ಒದ್ದಾಡುತ್ತಿದ್ದ ಕಾರಣಕ್ಕೆ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಲು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ.

ಆದರೆ ಆಂಬ್ಯುಲೆನ್ಸ್‌ ಬೇರೆ ಕಡೆ ಇದೆ ಬರುವುದು ತಡವಾಗಲಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಇತ್ತ ಸಮಯಕ್ಕೆ ಸರಿಯಾಗಿ ಬೇರೆ ಖಾಸಗಿ ವಾಹನಗಳು ಇಲ್ಲದೇ, ಸೂಕ್ತ ಚಿಕಿತ್ಸೆ ಸಿಗದೇ ಮನೆಯಲ್ಲಿಯೇ ನಿಂಗರಾಜ್ ಕೊನೆಯುಸಿರೆಳೆದಿದ್ದಾರೆ.

ತುರ್ತು ಎಂದಾಗ ಒಂದು ಆಂಬ್ಯುಲೆನ್ಸ್‌ ಕಳಿಸುವುದಕ್ಕೆ ಆರೋಗ್ಯ ಇಲಾಖೆಯಿಂದ ಆಗಲಿಲ್ಲ. ಸರ್ಕಾರ ಅಷ್ಟೆಲ್ಲ ಖರ್ಚು ಮಾಡಿ ಕೆಲಸ ಮಾಡುವವರನ್ನು ನೇಮಿಸಿದರೂ ಏನು ಪ್ರಯೋಜನ ಎಂದು ಆರೋಗ್ಯ ಇಲಾಖೆ ವಿರುದ್ಧ ನಿಂಗರಾಜ್ ಕುಟುಂಬಸ್ಥರು, ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಸದ್ಯ ಈ ಸಂಬಂಧ ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case : ಬೆಂಗಳೂರಲ್ಲಿ ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರವೆಸಗಿ, ವಿಕೃತವಾಗಿ ಕೊಂದ 18 ವರ್ಷದ ಕಾಮುಕ

ಹೊಲದಲ್ಲಿ ಅವಿತಿದ್ದ ಚಿರತೆಗೆ ಕಲ್ಲಿಂದ ಹೊಡೆದು ಹಿಡಿದರು!

ದಾವಣಗೆರೆ: ಆಹಾರಕ್ಕಾಗಿ ಕಾಡುಪ್ರಾಣಿಗಳು ನಾಡಿಗೆ ಬರುತ್ತಿದ್ದು, ಜನರಲ್ಲಿ ಆತಂಕ (Wild Animals Attack) ಹೆಚ್ಚಿಸಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೋಟೆ ಮಲ್ಲೂರು ಗ್ರಾಮದಲ್ಲಿ ಭಯ ಹುಟ್ಟಿಸಿದ ಚಿರತೆಯನ್ನು (leopard Attack) ಗ್ರಾಮಸ್ಥರೇ ಸೆರೆಹಿಡಿದಿದ್ದಾರೆ.

ಕೋಟೆ ಮಲ್ಲೂರು ಗ್ರಾಮದಲ್ಲಿ ಮೂರ್ನಾಲ್ಕು ದಿನಗಳಿಂದ ಚಿರತೆಯೊಂದು ಭಯ ಹುಟ್ಟಿಸಿತ್ತು. ಮಾತ್ರವಲ್ಲ ನಾಲ್ವರ ಮೇಲೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದರು. ಅರಣ್ಯಾಧಿಕಾರಿಗಳನ್ನು ನಂಬಿಕೊಂಡರೆ ಚಿರತೆ ಸೆರೆಹಿಡಿಯುವುದಿಲ್ಲ ಎಂದುಕೊಂಡು, ತಾವೇ ಕೈಯಲ್ಲಿ ದೊಣ್ಣೆ ಹಿಡಿದು ಚಿರತೆ ಸೆರೆ ಹಿಡಿದಿದ್ದಾರೆ.

ಮೆಕ್ಕೆಜೋಳ ಹೊಲದಲ್ಲಿ ಚಿರತೆಯು ಅವಿತು ಕುಳಿತಿದೆ ಎಂದು ವಿಚಾರ ತಿಳಿಯುತ್ತಿದ್ದಂತೆ, ದೊಣ್ಣೆ ಹಿಡಿದು ನುಗ್ಗಿದ್ದರು. ಇವರಿಂದ ತಪ್ಪಿಸಿಕೊಂಡು ಓಡಲು ಶುರು ಮಾಡಿದ ಚಿರತೆಗೆ ಕಲ್ಲುಗಳಿಂದ ಹೊಡೆದಿದ್ದಾರೆ. ನಂತರ ಚಿರತೆಯನ್ನು ಹಿಡಿದು ಕಾಲು ಕಟ್ಟಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರ ತಂಡ ಚಿರತೆಯನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: Begging Case : ಕುಡುಕ ಗಂಡನ ಮಾತು ಕೇಳಿ ಮಗು ಜತೆಗೆ ಭಿಕ್ಷಾಟನೆಗಿಳಿದ ತಾಯಿ

ಚಿಕ್ಕಮಗಳೂರಲ್ಲಿ ಒಂಟಿ ಸಲಗ ಓಡಾಟ

ಚಿಕ್ಕಮಗಳೂರಿನ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಒಂಟಿ ಸಲಗವು ಕೆಲಕಾಲ ಆತಂಕವನ್ನು ಸೃಷ್ಟಿಸಿತ್ತು. ಕಾಡಿನಿಂದ ಏಕಾಏಕಿ ನಾಡಿಗೆ ಬಂದ ಒಂಟಿ ಸಲಗವು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೇ ನಿಂತಿತ್ತು. ರಸ್ತೆ ಬದಿಯ ಮರಗಳ ಎಲೆಗಳನ್ನು ಕಿತ್ತು, ಅತ್ತಿಂದಿತ್ತ ಓಡಾಡಿಕೊಂಡು ರಸ್ತೆ ಪೂರ್ತಿ ಆವರಿಸಿತ್ತು.

ಕಳಸದಿಂದ ಮಂಗಳೂರಿಗೆ ಸಂಪರ್ಕಿಸುವ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಘಟನೆ ನಡೆದಿದೆ. ಹೆದ್ದಾರಿಯಲ್ಲಿ ಸಂಚಾರ ಮಾಡಲು‌ ಆತಂಕಗೊಂಡ ವಾಹನ ಸವಾರರು ನಿಂತಲ್ಲೇ ನಿಲ್ಲುವಂತಾಯಿತು.

ಕೊಡಗಿನಲ್ಲೂ ಆನೆಗಳ ವಾಕಿಂಗ್‌

ಕೊಡಗಿನಲ್ಲಿ ಕಾಡಾನೆಗಳ ಮಾರ್ನಿಂಗ್ ವಾಕ್ ಮುಂದುವರಿದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾ. ಐಗೂರು ಬಳಿ ಆನೆಗಳು ಪ್ರತ್ಯಕ್ಷವಾಗಿದ್ದವು. ಬೆಳ್ಳಂಬೆಳಗ್ಗೆ ಹೆದ್ದಾರಿಗೆ ಬಂದ ಎರಡು ಕಾಡಾನೆಗಳು, ಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದವು. ಆಹಾರಕ್ಕಾಗಿ ಕಾಡು ಬಿಟ್ಟು ಜನವಸತಿ ಪ್ರದೇಶದಲ್ಲೇ ಕಾಡಾನೆಗಳು ಓಡಾಡುತ್ತಿವೆ. ಕಾಡಾನೆಗಳ ಮಾರ್ನಿಂಗ್ ವಾಕಿಂಗ್‌ ಅನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version