ಕೂಡ್ಲಿಗಿ: ಕಳೆದ ನಾಲ್ಕು ದಿನಗಳಲ್ಲಿ ಪಟ್ಟಣದ ಹೊರವಲಯದ ಚೋರುನೂರು ರಸ್ತೆಯಲ್ಲಿ ಎರಡು ಮನೆಯಲ್ಲಿ ಸರಣಿ ಕಳ್ಳತನವಾಗಿರುವ (Theft Case) ಘಟನೆ ಜರುಗಿದೆ.
ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಹೈದರ್ ಎಂಬುವರ ಮನೆಗೆ ಹಾಕಿದ್ದ ಬೀಗವನ್ನು ಮುರಿದು ಬೀರುವಿನಲ್ಲಿ ಇದ್ದ 4 ತೊಲೆ ಬಂಗಾರ, 50 ಸಾವಿರ ನಗದು, 250 ಗ್ರಾಂ ಬೆಳ್ಳಿ, 6 ರೇಷ್ಮೆ ಸೀರೆ ಸೇರಿದಂತೆ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಅನ್ನು ಕಳವು ಮಾಡಿದ್ದಾರೆ. ಬೆಂಗಳೂರಿನಿಂದ ಭಾನುವಾರ ಮಧ್ಯಾಹ್ನ ಹೈದರ್ ಅವರು ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ಕೂಡಲೇ ಕೂಡ್ಲಿಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದರಂತೆ ಮಂಗಳವಾರ ಮಧ್ಯಾಹ್ನ ಪಟ್ಟಣದ ಚೋರುನೂರು ರಸ್ತೆ ಬದಿಯ ಕಾಲೋನಿಯಲ್ಲಿ ಲೋಕೋಪಯೋಗಿ ಇಲಾಖೆಯ ನಿವೃತ್ತ ನೌಕರ ಸೋಮಶೇಖರ್ ಅವರು ಮನೆಗೆ ಬೀಗ ಹಾಕಿ ಹೊರಗಡೆ ಹೋದಾಗ ಖದೀಮರು ಮನೆಯ ಮುಖ್ಯ ಬಾಗಿಲಿನ ಚಿಲಕ ಮುರಿದು ಒಳನುಗ್ಗಿ ಮನೆಯಲ್ಲಿದ್ದ 4 ತೊಲೆ ಬಂಗಾರ, 1 ಕೆಜಿ ಬೆಳ್ಳಿ, 10 ಸಾವಿರ ರೂಪಾಯಿ ಕಳ್ಳತನ ಮಾಡಲಾಗಿದೆ.
ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ. ಈ ಸರಣಿ ಕಳ್ಳತನದ ಜಾಡು ಪತ್ತೆ ಹಚ್ಚಲು ಠಾಣೆಯ ಸಿಪಿಐ ವಿನಾಯಕ ಹಾಗೂ ಪೊಲೀಸರು, ಶ್ವಾನ ಮತ್ತು ಬೆರಳಚ್ಚುಗಾರರ ತಂಡ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Bomb threat: ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿ ಬಂದಿತ್ತು ಸಂದೇಶ
ಪಟ್ಟಣದಲ್ಲಿ ಹಾಡಹಗಲೇ ಕಳ್ಳತನ ನಡೆಯುತ್ತಿರುವುದು ಜನ ಭಯಭೀತಿ ಉಂಟು ಮಾಡಿದೆ. ರಾತ್ರಿ ವೇಳೆ ಪಟ್ಟಣದ ಹೊರವಲಯದ ಕಾಲೋನಿಗಳಲ್ಲಿ ಗಸ್ತು ಬರಬೇಕು ಹಾಗೂ ಹಾಡಹಗಲೇ ನಡೆದ ಕಳ್ಳತನವನ್ನು ಪತ್ತೆ ಹಚ್ಚಬೇಕು. ಅನಾಮಧೇಯ ವ್ಯಕ್ತಿಗಳು ಸಂಚರಿಸಿದರೆ ಅವರ ಬಗ್ಗೆ ತೀವ್ರ ನಿಗಾ ಇಡಬೇಕು ಎಂದು ಜನರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.