ವಿಜಯನಗರ: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್ ಗೇಟ್ ಡ್ಯಾಮೇಜ್ ಆದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರನ್ನು ತುಂಗಭದ್ರಾ ನದಿಗೆ ಬಿಡಲಾಗುತ್ತಿದೆ. ಇದರಿಂದ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿರುವುದರಿಂದ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ (DK Shivakumar) ಅವರು ಭೇಟಿ ನೀಡಿ ಪರಿಶೀಲಿಸಿದ್ದು, ದುರಸ್ತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.
ಜಲಾಶಯ ವೀಕ್ಷಣೆ ವೇಳೆ ಡಿಸಿಎಂ ಡಿಕೆಶಿಗೆ ಬಳ್ಳಾರಿ, ವಿಜಯನಗರ, ಕೊಪ್ಪಳದ ಸಂಸದರು, ಶಾಸಕರು, ಟಿಬಿ ಬೋರ್ಡ್ ಅಧಿಕಾರಿಗಳು ಸಾಥ್ ನೀಡಿದ್ದಾರೆ.
ಜಲಾಶಯಕ್ಕೆ ಮಂಗಳವಾರ ಭೇಟಿ ನೀಡದ್ದಾರೆ ಸಿಎಂ
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಟ್ ಘಟನೆ ಕುರಿತಂತೆ ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು, ಮಂಗಳವಾರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸಿಎಂ ನಿರ್ಧರಿಸಿದ್ದಾರೆ.
ಮುಖ್ಯಮಂತ್ರಿಗಳು ಇಂದು ಬೆಳಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಅವರೊಂದಿಗೆ ಮಾತುಕತೆ ನಡೆಸಿ ಸಂಪೂರ್ಣ ವಿವರ ಪಡೆದರು. ಯಾವುದೇ ಹಾನಿ ಸಂಭವಿಸದಂತೆ ಮುಂಜಾಗ್ರತೆ ವಹಿಸುವಂತೆ ಸೂಚಿಸಿದರು. ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರೊಂದಿಗೂ ಸಿಎಂ ಚರ್ಚಿಸಿದರು.
ತುಂಗಭದ್ರಾ ಡ್ಯಾಂ ಗೇಟ್ ಚೈನ್ ಕಟ್; ನದಿಪಾತ್ರದಲ್ಲಿ ಪ್ರವಾಹ ಭೀತಿ
ಕೊಪ್ಪಳ / ವಿಜಯನಗರ: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್ ಗೇಟಿನ ಚೈನ್ ತುಂಡಾಗಿ ಅಪಾರ ಪ್ರಮಾಣ ನೀರು ನದಿ ಪಾತ್ರದಕ್ಕೆ ಹರಿದು ಹೋಗುತ್ತಿದ್ದು, ಆತಂಕ ಸೃಷ್ಟಿಸಿದೆ. ಸ್ಥಳಕ್ಕೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಧಾವಿಸಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.
ಒಂದೇ ಗೇಟ್‌ನಿಂದ 35 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ಜನರಲ್ಲಿ ಆತಂಕ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆಯಾಗಿರುವುಸಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಸಂಪೂರ್ಣ ಭರ್ತಿಯಾಗಿದ್ದ ಜಲಾಶಯ ಗೇಟ್‌ಗೆ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಹೀಗಾಗಿ ತನ್ನಿಂದ ತಾನೇ ಓಪನ್ ಆಗಿದೆ. ಜಲಾಶಯ ಇತಿಹಾಸದಲ್ಲೇ ಗೇಟ್ ಕಿತ್ತೋಗಿರುವುದು ಇದು ಮೊದಲ ಬಾರಿ.
ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು
ಶನಿವಾರ ರಾತ್ರಿ ಗೇಟ್ ಓಪನ್ ಆಗಿದ್ದು, ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ವಿಜಯನಗರ ಜಿಲ್ಲಾ ಎಸ್‌ಪಿ ಶ್ರೀ ಹರಿಬಾಬು ಬಿ.ಎಲ್. ಆಗಮಿಸಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು. ಮಾತ್ರವಲ್ಲ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳು, ಅದಿಕಾರಿಗಳು ಅಲರ್ಟ್ ಆಗಿದ್ದಾರೆ. ವಿಜಯನಗರ ಶಾಸಕ ಗವಿಯಪ್ಪ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಮಧ್ಯರಾತ್ರಿಯಿಂದಲೇ ಡ್ಯಾಂ ಗೇಟ್ ಬಳಿ ಪೊಲೀಸರು ಜಮಾಯಿಸಿದ್ದು, ಪ್ರವೇಶ ನಿರಾಕರಿಸಲಾಗಿದೆ.
ಜಲಾಶಯದ 20 ಗೇಟ್‌ಗಳಿಂದ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಹರಿಬಿಡುವ ಸಾಧ್ಯತೆ ಇದೆ ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ತಿಳಿಸಿದರು. ʼʼಗೇಟ್ ಕಟ್ ಆಗಿರುವ ಕುರಿತು ಜಲ ಸಂಪನ್ಮೂಲ ಸಚಿವರಿಗೆ ಮಾಹಿತಿ ನೀಡಿಲಾಗಿದೆ. ಮುಖ್ಯಮಂತ್ರಿಗೂ ಮಾಹಿತಿ ನೀಡುವ ಪಯತ್ನ ನಡೆದಿದೆ. ಸುಮಾರು 60 ಟಿಎಂಸಿ ನೀರು ಜಲಾಶಯದಿಂದ ನದಿ ಮೂಲಕ ಹೊರ ಬಿಡಬೇಕಿದೆ. ಇಷ್ಟು ಪ್ರಮಾಣದ ನೀರು ಹೊರ ಹೋಗಲು ನಾಲ್ಕಕ್ಕೂ ಹೆಚ್ಚು ದಿನ ಬೇಕು. ಚೈನ್ ಲಿಂಕ್ ಕಟ್ ಆಗಿರುವ ಗೇಟ್ ಸರಿಪಡಿಸುವ ಬಗ್ಗೆ ವಿಶೇಷ ತಾಂತ್ರಿಕ ತಂಡ ಆಗಮಿಸಲಿದೆʼʼ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ | Tungabhadra Dam: ತುಂಗಭದ್ರಾ ಡ್ಯಾಂ ಗೇಟ್ ಚೈನ್ ಕಟ್ ಪ್ರಕರಣ; ಪ್ರವಾಹದ ಭೀತಿ ಇಲ್ಲ ಎಂದ ಗೃಹ ಸಚಿವ ಡಾ. ಜಿ.ಪರಮೇಶ್ವರ್
ತುಂಗಭದ್ರಾ ಜಲಾಶಯದ 19ನೇ ಗೇಟ್ ಸಂಪೂರ್ಣ ಡ್ಯಾಮೇಜ್ ಆಗಿರುವ ಸುದ್ದಿ ತಿಳಿಯುತ್ತಲೇ ವಿಜಯನಗರ ಶಾಸಕ ಗವಿಯಪ್ಪ ಅವರು ಸ್ವತಃ ಕಾರು ಚಲಾಯಿಸಿಕೊಂಡು ಡ್ಯಾಂಗೆ ಬಳಿಗೆ ಮಧ್ಯರಾತ್ರಿಯೇ ಆಗಮಿಸಿದರು. ಸ್ಥಳಕ್ಕೆ ಭೇಟಿ ನೀಡಿದ ವಿಜಯನಗರ ಎಸ್.ಪಿ ಹರಿಬಾಬು ಅವರಿಂದ ಶಾಸಕ ಗವಿಯಪ್ಪ ಮಾಹಿತಿ ಪಡೆದುಕೊಂಡರು.