ವಿಜಯನಗರ: ಆಂಜನೇಯ ಮೂರ್ತಿಯನ್ನು ವಿರೂಪಗೊಳಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ದುಷ್ಕರ್ಮಿಗಳ ಕೃತ್ಯಕ್ಕೆ ಆಂಜನೇಯ ಪ್ರತಿಮೆ ತುಂಡಾಗಿದೆ. ವಿಜಯನಗರ (Vijayanagara News) ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸ ಹಂಪಿ ಗ್ರಾಮದಲ್ಲಿ ಘಟನೆ ನಡೆದಿದೆ.
ತಡರಾತ್ರಿ ಕಾರ್ಯಸಿದ್ಧಿ ಶ್ರೀ ಆಂಜನೇಯ ಸ್ವಾಮಿ ದೇಗುಲದ ಬೀಗ ಮುರಿದು, ಒಳ ನುಗ್ಗಿರುವ ದುಷ್ಟರು ಮೂರ್ತಿಯನ್ನು ಒಡೆದು ಹಾಕಿದ್ದಾರೆ. ಮುಂಜಾನೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಬೆರಳಚ್ಚು ವಿಭಾಗ ತಜ್ಞರು, ಶ್ವಾನದಳದಿಂದ ಪರಿಶೀಲನೆ ನಡೆಸಲಾಗುತ್ತಿದೆ.
ಹೊಸಪೇಟೆ ಡಿವೈಎಸ್‌ಪಿ ಶರಣಬಸವೇಶ್ವರ, ಹಂಪಿ ಪ್ರವಾಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: Physical Abuse : ಸಂಜೆಯಾದರೆ ರೂಮಿಗೆ ಬಾ ಅಂತಾರೆ! ಕೇಂದ್ರೀಯ ವಿವಿಯ ವಿದ್ಯಾರ್ಥಿನಿಗೆ ಪಿಎಚ್‌ಡಿ ಗೈಡ್ ಮಾನಸಿಕ ಕಿರುಕುಳ
ದೇವರ ಹರಕೆ ಕುರಿಯನ್ನೇ ಕದ್ಯೊಯ್ದ ಕಳ್ಳರು
ದಾವಣಗೆರೆ/ತುಮಕೂರು: ದೇವರ ಹರಕೆಗಾಗಿ ತಂದಿದ್ದ ಕುರಿಯನ್ನೇ ಕಳ್ಳರು (Theft Case) ಹೊತ್ತೊಯ್ದಿದ್ದಾರೆ. ದಾವಣಗೆರೆ (Davanagere news) ತಾಲೂಕಿನ ಮಾಯಾಕೊಂಡದಲ್ಲಿ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ಕಿರಾತಕರು ರಾತ್ರೋ ರಾತ್ರಿ ಕುರಿಯನ್ನು ಕದ್ದಿದ್ದಾರೆ.
ಸುಮಾರು 8 ಮಂದಿ ಖದೀಮರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಯಾಕೊಂಡದ ನಿವಾಸಿ ಪ್ರಭು ಎಂಬುವರಿಗೆ ಸೇರಿದ ಕುರಿಯನ್ನು ಬೆಳಗಿನ ಜಾವ 3ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದು ಎಗರಿಸಿದ್ದಾರೆ. ಸದ್ಯ ಪ್ರಭು ಅವರು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಖದೀಮರನ್ನು ಹಿಡಿಲು ಮುಂದಾಗಿದ್ದಾರೆ.
ತುಮಕೂರಿನ 2 ಸೂಪರ್ ಮಾರ್ಕೆಟ್‌ಗಳಲ್ಲಿ ಕಳ್ಳತನ
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಶ್ರೀನಿವಾಸ ಹೈಪರ್ ಮಾರ್ಕೆಟ್ ಹಾಗೂ ಜಿಎಮ್‌ಆರ್ ಮೆಗಾ ಮಾರ್ಟ್‌ನಲ್ಲಿ ಕಳ್ಳತನವಾಗಿದೆ. ಕಳ್ಳರು ಜಿಎಮ್‌ಆರ್ ಮೆಗಾ ಮಾರ್ಟ್‌ನ ಬೀಗ ಮುರಿಯುವಾಗ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಕಳ್ಳತನ ತಡೆಯಲು ಬಂದವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಂಗಡಿ ಮಾಲೀಕರನ್ನೇ ಹೆದರಿಸಿ ಕಳ್ಳರು ಪರಾರಿಯಾಗಿದ್ದಾರೆ.
50 ಸಾವಿರ ರೂ. ನಗದು ಹಾಗೂ 10ಕ್ಕೂ ಹೆಚ್ಚು ಅಕ್ಕಿ ಚೀಲಗಳನ್ನು ಕದ್ದಿದ್ದು, ಜತೆಗೆ ಸಿಸಿಟಿವಿಯ ಡಿವಿಆರ್ ಕದ್ದಿದ್ದಾರೆ. ಸುಮಾರು ನಾಲ್ಕೈದು ಕಳ್ಳರ ತಂಡ ಲಗ್ಗೆ ಇಟ್ಟ ಪೂರ್ತಿ ದೃಶ್ಯವು ಮತ್ತೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ