ವಿಜಯನಗರ: ರಾಮ ದೇವರೇ ಅಲ್ಲ (Rama is not god), ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಮ ಭಕ್ತನೇ ಅಲ್ಲ ಎಂದು ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ (VS Ugrappa) ಅವರು ವಾಗ್ದಾಳಿ ನಡೆಸಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ ನಿಂದಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಹಿಂದುಗಳು ಶ್ರದ್ಧಾ ಭಕ್ತಿಯಿಂದ ಆರಾಧಿಸುವ, ಪೂಜಿಸುವ ಶ್ರೀರಾಮ ದೇವರಲ್ಲ, ದೇವರಲ್ಲ, ದೇವರಲ್ಲ ಎಂದ ಹಲವು ಬಾರಿ ಒತ್ತಿ ಹೇಳಿದ ಉಗ್ರಪ್ಪ ಆತ ಒಬ್ಬ ಮನುಷ್ಯ ಅಷ್ಟೆ ಎಂದಿದ್ದಾರೆ.
ಹೊಸಪೇಟೆಯಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಉಗ್ರಪ್ಪ ಅವರು, ನಿಮಗೇನಾದರೂ ಭಕ್ತಿ ಇದೆಯಾ ಅಂತ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಲ್ಲದೆ, ರಾಮ ದೇವರಲ್ಲ, ಆತ ಮನುಷ್ಯ. ಆತ ರಾಜ, ರಾಜಕುಮಾರ ಎಂದಿದ್ದಾರೆ. ಆದರೆ, ತನ್ನ ಆದರ್ಶಗಳ ಮೂಲಕ ರಾಮ ದೈವತ್ವವನ್ನು ಪಡೆದಿರುವುದು ನಿಜ ಎಂದು ಉಗ್ರಪ್ಪ ಹೇಳಿದರು.
ಇದನ್ನೂ ಓದಿ: CM Siddaramaiah : ರಾಮನಿಂದ ಸೀತೆಯನ್ನು ದೂರ ಮಾಡಿದ ಬಿಜೆಪಿ; ಮತ್ತೆ ಜೈ ಶ್ರೀರಾಮ್ ಎಂದ ಸಿದ್ದರಾಮಯ್ಯ
ಮೋದಿ ಹೇಗೆ ರಾಮ ಭಕ್ತನಾಗುತ್ತಾರೆ? ಅವರು ಆದರ್ಶ ಪಾಲಿಸ್ತಾರಾ?
ʻʻದೇಶ ಕಂಡ ಅತ್ಯಂತ ಸುಳ್ಳುಗಾರ ಪ್ರಧಾನಿ ನರೇಂದ್ರ ಮೋದಿ. ಭ್ರಷ್ಟಾಚಾರಕ್ಕೆ ಇವರೇ ದಾರಿ ತೋರಿಸುತ್ತಾರೆ. ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರ ಏನು ಸಾಧನೆ ಮಾಡಿದೆ? ಭ್ರಷ್ಟಾಚಾರ ನಿರ್ಮೂಲನೆ ಮಾಡಿದ್ರಾ, 2 ಕೋಟಿ ಉದ್ಯೋಗ ಸೃಷ್ಟಿಸಿದ್ರಾ? ವಿದೇಶಿದಲ್ಲಿರೋ ಕಪ್ಪು ಹಣ ವಾಪಾಸ್ ತಂದ್ರಾ? ಪುಲ್ವಾಮಾ ದಾಳಿಗೆ ಕಾರಣ ಯಾರು?ʼʼ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ ಅವರು, ವಚನ ಭ್ರಷ್ಟ ಪ್ರಧಾನಿ ನರೇಂದ್ರ ಮೋದಿ ಮಾತ್ರ ಎಂದರು.
ನರೇಂದ್ರ ಮೋದಿ ಸುಳ್ಳು ಹೇಳುವುದು ಕಡಿಮೆ ಮಾಡಲಿ. ಶ್ರೀರಾಮನ ಅದರ್ಶಗಳನ್ನು ಪ್ರಧಾನಿ ಮೋದಿ ಪಾಲಿಸಲಿ ಎಂದು ಹೇಳಿದ ಉಗ್ರಪ್ಪ, ನರೇಂದ್ರ ಮೋದಿ ರಾಮನ ಆದರ್ಶ ಪಾಲಿಸುತ್ತಿಲ್ಲ ಎಂದರು.
ಕಳೆದ ಬಾರಿ ಪುಲ್ವಾಮಾ, ಈ ಬಾರಿ ರಾಮ!
ಕಳೆದ ಬಾರಿ ಪುಲ್ವಾಮಾ ಹೆಸರಲ್ಲಿ ಚುನಾವಣೆ ಮಾಡಿದ್ದಿರಿ, ಈ ಬಾರಿ ರಾಮನ ಹೆಸರಲ್ಲಿ ಚುನಾವಣೆಗೆ ಹೊರಟಿದ್ದಿರಿ. ಆದರೆ ರಾಮನ ಹೆಸರು ಹೇಳೋದಕ್ಕೆ ನಿಮಗೆ ಯೋಗ್ಯತೆ ಇಲ್ಲ. ರಾಮನ ಹೆಸರು ಹೇಳೋದಕ್ಕೆ ಯೋಗ್ಯರಿರುವರು ಕಾಂಗ್ರೆಸ್‌ನವರು. ರಾಮ ಕೊಟ್ಟ ವಚನವನ್ನು ಈಡೇರಿಸಿದನು, ಆದರೆ ನರೇಂದ್ರ ಮೋದಿ ವಚನ ಭ್ರಷ್ಟ ಇದ್ದಾರೆ ಎಂದು ಉಗ್ರಪ್ಪ ಹೇಳಿದರು. ಚೀನಾ, ಪಾಕಿಸ್ತಾನ, ಮಾಲ್ಡೀವ್ಸ್ ಸೇರಿ ಅಕ್ಕ ಪಕ್ಕದ ದೇಶಗಳು ನಮ್ಮ ವಿರುದ್ಧ ಇವೆ ಎಂದು ನೆನಪಿಸಿದರು.
ನಿಮಗೆ ಯಾವ ಪುರುಷಾರ್ಥಕ್ಕೆ 400 ಸೀಟು ನೀಡಬೇಕು?
ಬಿಜೆಪಿ ಈ ಬಾರಿ 400 ಸೀಟು ಕೊಡಬೇಕು ಎಂದು ಕೇಳುತ್ತಿದ್ದಾರೆ. ಆದರೆ, ಯಾಕೆ 400 ಸೀಟು ಕೊಡಬೇಕು? 140 ಕೋಟಿ ಜನರಲ್ಲ ಸಾಲಗಾರರನ್ನಾಗಿ ಮಾಡಿದ್ದೇ ಅವರ ಸಾಧನೆ. ಅದಕ್ಕಾಗಿ 400 ಸೀಟ್ ಕೊಡಬೇಕಾ? ಸ್ಕಾಲರ್‌ಷಿಪ್ ಕೊಡುವುದನ್ನು ನಿಲ್ಲಿಸಿದ್ದೀರಿ. ಅದಕ್ಕೆ 400 ಸ್ಥಾನ ಕೊಡಬೇಕಾ ಎಂದು ಉಗ್ರಪ್ಪ ಪ್ರಶ್ನಿಸಿದರು. ಇವಿಎಂ ಹೈಜಾಕ್ ಮಾಡಿದರೆ ಮಾತ್ರ 400 ಸ್ಥಾನ ಪಡೆಯಬಹುದು ಎಂದು ಗೇಲಿ ಮಾಡಿದರು.
ಬಳ್ಳಾರಿಗೆ ನೀವು ಸ್ಥಳೀಯರಲ್ಲ, ಟಿಕೆಟ್ ಕೊಡಲ್ಲ ಅಂತಾರಲ್ಲ!
ನೀವು ಸ್ಥಳೀಯರಲ್ಲದೆ ಇರುವುದರಿಂದ ಈ ಬಾರಿ ನಿಮಗೆ ಲೋಕಸಭಾ ಟಿಕೆಟ್ ಕೊಡುವುದು ಕಷ್ಟ ಎಂಬ ಅಭಿಪ್ರಾಯವಿದೆಯಲ್ವಾ ಎಂದು ಕೇಳಿದಾಗ ಭಾವುಕರಾಗಿ ಉತ್ತರಿಸಿದರು ಉಗ್ರಪ್ಪ, ನಾನು ಸ್ಥಳೀಯನಲ್ಲ ಅಂತ ಯಾಕ್ ಹೇಳ್ತೀರಿ? ಕಳೆದ ಐದು ವರ್ಷಗಳಿಂದ ಬಳ್ಳಾರಿ – ವಿಜಯನಗರ ಜಿಲ್ಲೆಯಲ್ಲಿ ಇದ್ದೇನೆ. ಹಂಪಿಯ ಜನತಾ ಪ್ಲಾಟ್ ನೂರಾರು ಕುಟುಂಬಗಳ ಪರ ಹೋರಾಟ ಮಾಡಿದ್ದೇನೆ, ನ್ಯಾಯ ಕೊಡಿಸಿದ್ದೇನೆ. ಹಂಪಿ ಕನ್ನಡ ವಿವಿಯ ಮಕ್ಕಳ ಸಮಸ್ಯೆ ಬಗ್ಗೆ ಹೋರಾಟ ಮಾಡಿದ್ದೇನೆ, ನ್ಯಾಯ ಕೊಡಿಸಿದ್ದೇನೆ ಎಂದರು.
ʻʻರಾಮುಲು ಬಳ್ಳಾರಿಯಿಂದ ಎಲ್ಲಿಗೆ ಹೋಗಿದ್ರು, ನಾಗೇಂದ್ರ ಎಲ್ಲಿಗೆ ಹೋಗಿದ್ರು, ಶಾಸಕ ಗಣೇಶ್ ಎಲ್ಲಿಗೆ ಹೋಗಿದ್ದಾರೆ, ಗೋಪಾಲಕೃಷ್ಣ ಎಲ್ಲಿಗೆ ಹೋಗಿದ್ದಾರೆ? ಸೋನಿಯಾ ಗಾಂಧಿ ಎಲ್ಲಿಂದಲೋ ಬಂದು ಬಳ್ಳಾರಿಯಲ್ಲಿ ಸ್ಪರ್ಧೆ ಮಾಡಿದ್ರು. ಆದರೆ, ನಾನು ಐದಾರು ವರ್ಷದಿಂದ ಬಳ್ಳಾರಿ ಜಿಲ್ಲೆಯಲ್ಲಿ ಓಡಾಟ ಮಾಡ್ತಿದ್ದೇನೆ. ಹತ್ತಾರು ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದ್ದೇನೆ. ನನ್ನನ್ನ ಸ್ಥಳೀಯ ಅಲ್ಲ ಅಂತ ಹೇಳಬೇಡಿ, ನಾನು ಇಲ್ಲಿ ಪ್ರಬಲ ಆಕಾಂಕ್ಷಿ ಇದ್ದೇನೆ. ನಾನು ಒಂಭತ್ತು ಬಾರಿ ಬೇರೆ, ಬೇರೆ ಎಲೆಕ್ಷನ್ ಎದುರಿದ್ದೇನೆʼʼ ಎಂದು ಹೇಳಿದರು.