ಕೊಟ್ಟೂರು: ಶಾಲೆಗೆಂದು ಮಕ್ಕಳನ್ನು ಕೊಟ್ಟೂರಿಗೆ ಕರೆ ತರುತ್ತಿದ್ದ ಶಾಲಾ ಬಸ್‌ಗೆ (School bus) ಹಠಾತ್ತನೆ ಬೆಂಕಿ (Fire) ಹೊತ್ತಿಕೊಂಡಿದ್ದು, ಅದೃಷ್ಠವಶಾತ್ ಬಸ್ಸಿನಲ್ಲಿದ್ದ 40 ಮಕ್ಕಳು (children) ಮತ್ತು 3 ಶಿಕ್ಷಕರಿಗೆ (Teachers) ಯಾವುದೇ ಸಣ್ಣ ಗಾಯವಾಗದೇ, ಅಪಾಯದಿಂದ ಪಾರಾದ ಘಟನೆ ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮದ ಹೊರವಲಯದಲ್ಲಿ ಗುರುವಾರ ಬೆಳಿಗ್ಗೆ ಜರುಗಿದೆ.
ಶಾಲಾ ಬಸ್ ಎಂದಿನಂತೆ ಮಕ್ಕಳನ್ನು ತಾಲೂಕಿನ ವಿವಿಧ ಹಳ್ಳಿಗಳಿಂದ ಕರೆದುಕೊಂಡು ಬರುತ್ತಿರುವ ವೇಳೆಯಲ್ಲಿ ಈ ಅವಘಡ ಸಂಭವಿಸಿದ್ದು ಬಸ್‌ನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಹೋಗಿದೆ. ಇಂಜಿನ್‌ನಲ್ಲಿ ಸುಟ್ಟ ವಾಸನೆ ಚಾಲಕನಿಗೆ ತಾಕುತ್ತಿದ್ದಂತೆ ಎಚ್ಚರಗೊಂಡು ಕೂಡಲೇ ರಸ್ತೆಯ ಮಗ್ಗಲಲ್ಲಿ ಬಸ್‌ನ್ನು ನಿಲ್ಲಿಸಿ ಬಸ್‌ನಲ್ಲಿದ್ದ ಎಲ್ಲ ಮಕ್ಕಳನ್ನು ಮತ್ತು ಶಿಕ್ಷಕರನ್ನು ಕೆಳಗಿಳಿಸಿದ್ದಾರೆ. ಇದಾದ ಕೆಲಹೊತ್ತಿನಲ್ಲಿ ಬಸ್ ಸಂಪೂರ್ಣ ಸುಟ್ಟುಹೋಗಿದೆ.
ಇದನ್ನೂ ಓದಿ: Cabinet Meeting : ಸಾರಿಗೆ ನೌಕರರ ವೇತನ 15% ಹೆಚ್ಚಳ; ನೌಕರರ ಸಂಘಟನೆ ಒಪ್ಪುವುದೇ?
ಕೊಟ್ಟೂರು ಪಟ್ಟಣದ ತರಳಬಾಳು ಶಾಲೆಗೆಂದು ಮಕ್ಕಳನ್ನು ಬಸ್‌ನಲ್ಲಿ ಕರೆದುಕೊಂಡು ಬರಲಾಗುತ್ತಿತ್ತು. ಘಟನೆ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ ಘಟನ ಸ್ಥಳಕ್ಕೆ ಭೇಟಿ ನೀಡಿ ಬಸ್‌ಗೆ ಹತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: Gruha Lakshmi Scheme: ಜೂ.16ರಿಂದ ಗೃಹಲಕ್ಷ್ಮಿ ಯೋಜನೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ
ಕೊಟ್ಟೂರು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನ ಸ್ಥಳಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವೆಂಕಟಸ್ವಾಮಿ ಇತರರು ಇದ್ದರು. ಶಿಕ್ಷಣ ಇಲಾಖೆಯ ಪ್ರಭಾರಿ ಶಿಕ್ಷಣಾಧಿಕಾರಿ ಸಿ.ಬಸವರಾಜ್ ಪ್ರತ್ಯೇಕವಾಗಿ ಭೇಟಿ ನೀಡಿ ಪರಿಶೀಲಿಸಿದರು.