Site icon Vistara News

Corporation Election | ಹಲವು ದಾಖಲೆಗಳಿಗೆ ಸಾಕ್ಷಿ ಆಯ್ತು ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ!

vijayapura corporation election 6

ವಿಜಯಪುರ: ಇದೇ ಮೊದಲ ಬಾರಿಗೆ ಚುನಾವಣೆ ಕಂಡ ವಿಜಯಪುರ ಮಹಾನಗರ ಪಾಲಿಕೆಯು (Corporation Election) ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಮಾಜಿ ಮೇಯರ್‌ಗಳಿಗೆ ಸೋಲು, ಮಾಜಿ ನಗರಸಭೆ ಅಧ್ಯಕ್ಷರಿಗೆ ಸೋಲು ಸೇರಿದಂತೆ ಹಲವು ವಿಶೇಷತೆಗಳು ಇಲ್ಲಿ ಕಂಡುಬಂದಿವೆ. ಅಲ್ಲದೆ, ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌‌ ಪಕ್ಷದಲ್ಲಿ ತಮ್ಮ ಶಕ್ತಿ ತೋರಿದ್ದಾರೆ.

ಈ ಹಿಂದೆ ಒಂದು ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದ ಸುಫಿಯಾ ವಾಟಿ ಈಗ ಮತ್ತೆ ಎಐಎಂಐಎಂ ಪಕ್ಷದಿಂದ ಆಯ್ಕೆಯಾಗಿದ್ದರೆ, ನಾಮನಿರ್ದೇಶಿತ ಸದಸ್ಯರಾಗಿದ್ದ ಅಶೋಕ ನ್ಯಾಮಗೊಂಡ ಈ ಬಾರಿ ನೇರವಾಗಿ ಜನರಿಂದ ಆಯ್ಕೆಯಾಗಿ ಪಾಲಿಕೆ ಸದಸ್ಯರಾಗಿದ್ದಾರೆ.

ದಾಖಲೆ ಬರೆದ ಕುಮಾರ ಗಡಗಿ
ವಾರ್ಡ್ ನಂ.೨೧ ರಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಉರ್ಫ್ ಕುಮಾರ ಗಡಗಿ ಎರಡು ದಾಖಲೆಗಳನ್ನು ಬರೆದರು. ಅತಿ ಹೆಚ್ಚು ಮತ ಹಾಗೂ ಅತೀ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸಿದ ಎರಡು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಗೆದ್ದ ಅಭ್ಯರ್ಥಿಗಳಲ್ಲಿ ಅತಿ ಹೆಚ್ಚು ಅಂದರೆ ೩೪೪೬ ಮತಗಳನ್ನು ಪಡೆದಿರುವ ದಾಖಲೆ ಒಂದಾದರೆ, ಅತಿ ಹೆಚ್ಚಿನ ೧೯೪೬ ಮತಗಳ ಅಂತರದ ದಾಖಲೆಯೂ ಸಹ ಇವರ ಪಾಲಾಗಿದೆ.

ಇದನ್ನೂ ಓದಿ | Corporation Election | ವಿಜಯಪುರ ಪಾಲಿಕೆ ಫಲಿತಾಂಶ ಅತಂತ್ರ; ಬಿಜೆಪಿಗೆ ಬೇಕು ಇನ್ನೊಂದೇ ಸೀಟು!

೧೮ ಮತಗಳ ಅಂತರದ ಗೆಲುವು
ತೀವ್ರ ಕುತೂಹಲ ಕೆರಳಿಸಿದ್ದ ವಾರ್ಡ್ ನಂ.೨೮ ರ ಚುನಾವಣೆಯಲ್ಲಿ ಎಐಎಂಐಎಂ ಅಭ್ಯರ್ಥಿ ರಿಜ್ವಾನಾಬಾನು ಇನಾಮದಾರ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಬೀನಾ ಬೀಳಗಿ ಅವರನ್ನು ೧೮ ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಇಲ್ಲಿ ಎಐಎಂಐಎಂನ ರಿಜ್ವಾನಾಬಾನು ಅವರಿಗೆ ೧೫೬೦ ಮತಗಳು ಬಂದಿದ್ದರೆ, ಸಬೀನಾ ಅವರಿಗೆ ೧೫೪೨ ಮತಗಳು ಬಂದಿದ್ದು, ಕೇವಲ ೧೮ ಮತಗಳ ಅಂತರದಿಂದ ಎಐಎಂಐಎಂ ಗೆಲುವು ಸಾಧಿಸಿದೆ.

ಪ್ರಮುಖರಿಗೆ ಸೋಲಿನ ರುಚಿ
ಪ್ರಭಾವಿ ನಾಯಕರಿಗೂ ಈ ಬಾರಿ ಮತದಾರ ಸೋಲಿನ ರುಚಿ ತೋರಿಸಿದ್ದಾನೆ. ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ಪ್ರಭಾವಿ ನಾಯಕ ಗೂಳಪ್ಪ ಶೆಟಗಾರ, ಈ ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದ ಪರಶುರಾಮಸಿಂಗ್ ರಜಪೂತ, ನಗರಸಭೆ ಅಧ್ಯಕ್ಷರಾಗಿದ್ದ ಮಿಲಿಂದ ಚಂಚಲಕರ, ಮೇಯರ್ ಆಗಿದ್ದ ಸಂಗೀತಾ ಪೋಳ, ಶ್ರೀದೇವಿ ಲೋಗಾವಿ, ಉಪಮೇಯರ್ ಆಗಿದ್ದ ಆನಂದ ಧುಮಾಳೆ ಅವರಿಗೆ ಮತದಾರ ಈ ಬಾರಿ ಸೋಲಿನ ರುಚಿ ತೋರಿದ್ದಾನೆ.

ಆಮ್ ಆದ್ಮಿ, ಬಿ.ಎಸ್.ಪಿ, ಜನತಾಪಕ್ಷಗಳು ಖಾತೆಯನ್ನೇ ತೆರೆದಿಲ್ಲ
ಎಸ್‌ಡಿಪಿಐ, ಕೆ.ಆರ್.ಎಸ್. ಈ ಎಲ್ಲ ಪಕ್ಷಗಳಿಂದ 25 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ, ಯಾವೊಬ್ಬ ಅಭ್ಯರ್ಥಿಯೂ ಗೆಲುವಿನ ದಡ ತಲುಪಿಲ್ಲ. ಒಂದು ಕ್ಷೇತ್ರದಲ್ಲಿ ಮಾತ್ರ ಎಎಪಿ ಎರಡನೇ ಸ್ಥಾನ ತಲುಪಿದ್ದೇ ಸಾಧನೆ ಎಂಬಂತೆ ಇದೆ.

ಪಕ್ಷೇತರರ ಸಾಧನೆ
ಒಟ್ಟು 58 ಅಭ್ಯರ್ಥಿಗಳು ಪಕ್ಷೇತರರಾಗಿ ಕಣದಲ್ಲಿದ್ದರು. ಇದರಲ್ಲಿ ಐವರು ಜಯಗಳಿಸಿದ್ದಾರೆ. ವಾರ್ಡ್ ನಂಬರ್‌ 2,8,17,19 ಹಾಗೂ 24ರಲ್ಲಿ ಪಕ್ಷೇತರರು ಜಯ ಸಾಧಿಸಿದ್ದಾರೆ. ಗಮನಾರ್ಹ ಅಂಶ ಅಂದರೆ 9 ವಾರ್ಡ್‌ಗಳಲ್ಲಿ ಪಕ್ಷೇತರರು ಎರಡನೇ ಸ್ಥಾನದಲ್ಲಿದ್ದಾರೆ.

10 ಸ್ಥಾನಗಳಲ್ಲಿ ಬಿಜೆಪಿ 2ನೇ ಸ್ಥಾನ
ಈಗಾಗಲೇ ಬಿಜೆಪಿ ೩೫ ವಾರ್ಡ್‌ಗಳಲ್ಲಿ ೧೭ ಸ್ಥಾನವನ್ನು ಗೆದ್ದುಕೊಂಡಿದ್ದರೆ, ಇನ್ನು 10 ಸ್ಥಾನಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಎರಡನೇ ಸ್ಥಾನದಲ್ಲಿದ್ದಾರೆ. ಇವುಗಳಲ್ಲಿ ಮಾಜಿ ನಗರಸಭಾ ಸದಸ್ಯ ಗೂಳಪ್ಪ ಶೇಟಗಾರ ಅತಿ ಕಡಿಮೆ ಅಂತರದಿಂದ ಅಂದರೆ ಕೇವಲ 40 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಅತಿ ಹೆಚ್ಚು ಅಂದರೆ ವಾರ್ಡ್ ನಂಬರ್ 34ರ ರೇಣುಕಾ ಜೆಟ್ಟೆಪ್ಪ ಗುನ್ನಾಪುರ 1685 ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಇವುಗಳಲ್ಲಿ 6 ಜನ ಮಹಿಳೆಯರು ಹಾಗೂ 4 ಪುರುಷ ಅಭ್ಯರ್ಥಿಗಳಿದ್ದಾರೆ.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಗೆ ಸೋಲು
ಇನ್ನು ವಾರ್ಡ್ ನಂಬರ್ 24ರಲ್ಲಿ ಸ್ಪರ್ಧಿಸಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಹೀನಾಯವಾಗಿ ಸೋತಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದೆ ಕಾಂಗ್ರೆಸ್ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಮಲಾ ರಫೀಕ್ ಕಾಣೆ ಅವರ ವಿರುದ್ಧ ತುಂಗಳ ಅವರು 1041 ಮತಗಳ ಅಂತರದಿಂದ ಹೀನಾಯವಾಗಿ ಸೋತು, ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಇದನ್ನೂ ಓದಿ | ಕೊಳ್ಳೇಗಾಲ ನಗರಸಭೆ ಬೈ ಎ‌ಲೆಕ್ಷನ್, ವಿಜಯಪುರ ಪಾಲಿಕೆ ಗೆಲುವು ಮುಂದಿನ ಚುನಾವಣೆಗೆ ದಿಕ್ಸೂಚಿ: ಸಿಎಂ

ಯತ್ನಾಳ್‌ಗೆ ಆನೆಬಲ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರಿಗೆ ಮೊದಲ ಬಾರಿ ನಡೆಯುತ್ತಿರುವ ವಿಜಯಪುರ ಪಾಲಿಕೆ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ನಿರಂತರ ಕಾರ್ಯತಂತ್ರದಲ್ಲಿ ತೊಡಗಿದ್ದರು. ಅಲ್ಲದೆ, ಸ್ವಪಕ್ಷೀಯರೇ ಈ ಚುನಾವಣೆಯಲ್ಲಿ ತಮ್ಮ ಬಲ ಕುಗ್ಗಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದೂ ಆರೋಪ ಮಾಡಿದ್ದರು. ಆದರೆ, ಈ ಎಲ್ಲ ಬೆಳವಣಿಗೆಗಳನ್ನು ಹೊರತುಪಡಿಸಿಯೂ ಬಿಜೆಪಿ ಅಭ್ಯರ್ಥಿಗಳು ೧೭ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿರುವುದು ಯತ್ನಾಳ್‌ಗೆ ಆನೆಬಲ ಬಂದಂತೆ ಆಗಿದೆ. ಈ ಮೂಲಕ ಅವರು ತಮ್ಮ ಶಕ್ತಿ ಪ್ರದರ್ಶನವನ್ನು ಮಾಡಿದ್ದಾರೆ.

ಹಿಂದುತ್ವದ ಆಧಾರದ ಮೆಲೇಯೇ ಮತಯಾಚನೆ ಮಾಡಿದ್ದ ಶಾಸಕ ಯತ್ನಾಳ ಅವರು, ಬಿಜೆಪಿ ಪಾಲಿಕೆ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದರು. ಈಗ ಉತ್ತಮ ಫಲಿತಾಂಶವನ್ನು ತಂದುಕೊಡುವ ಮೂಲಕ ತಮ್ಮ ವಿರೋಧಿಗಳಿಗೆ ಸ್ಪಷ್ಟ ಸಂದೇಶವನ್ನೂ ಯತ್ನಾಳ್‌ ರವಾನಿಸಿದ್ದಾರೆ.

ಇದನ್ನೂ ಓದಿ | ʼಯತ್ನಾಳ್‌ ಬಾಯಲ್ಲಿ ಬರುತ್ತಿರುವುದು B.L. ಸಂತೋಷ್‌ ಮಾತುʼ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ಲೇವಡಿ

Exit mobile version