ವಿಜಯಪುರ: ನಗರದಲ್ಲಿ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಕೃಷ್ಣಾ ಜಲಾಂದೋಲನ ಸಮಾವೇಶದಲ್ಲಿ ಕುರ್ಚಿ ಮತ್ತು ಬ್ಯಾನರ್ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಇಬ್ಬರಿಗೆ (Vijayapura Stabbing) ಚಾಕು ಇರಿಯಲಾಗಿದೆ.
ನಯುಮ್ ತಾಂಬೋಳಿ, ನಿಹಾಲ್ ತಾಂಬೋಳಿ ಗಾಯಾಳುಗಳು. ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಶುಕ್ರವಾರ ಕಾಂಗ್ರೆಸ್ ಸಮಾವೇಶ ಆಯೋಜಿಸಲಾಗಿತ್ತು. ಮೈದಾನದಲ್ಲಿ ಬ್ಯಾನರ್ ಹಾಕುವ ವಿಚಾರ ಹಾಗೂ ವೇದಿಕೆ ಮೇಲೆ ಕುರ್ಚಿಗಾಗಿ ಸಮಾವೇಶ ಆರಂಭಕ್ಕೂ ಮುನ್ನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಇರ್ಫಾನ್ ಶೇಖ್ ಹಾಗೂ ಎಂ.ಆರ್. ತಾಂಬೋಳಿ ಮಧ್ಯೆ ಗಲಾಟೆ ನಡೆದಿತ್ತು.
ನಂತರ ಎಂ.ಆರ್. ತಾಂಬೋಳಿ ಅವರ ಮಕ್ಕಳಾದ ನಯುಮ್ ತಾಂಬೋಳಿ, ನಿಹಾಲ್ ತಾಂಬೋಳಿ ಎಂಬ ಯುವಕರ ಮೇಲೆ ಸಮಾವೇಶ ಆಯೋಜಿಸಿದ್ದ ಸ್ಥಳದ ಸಮೀಪದಲ್ಲಿ ಹಲ್ಲೆ ಮಾಡಿ ಚಾಕು ಇರಿಯಲಾಗಿದೆ. ಇರ್ಫಾನ್ ಶೇಖ್, ಹನ್ನಾನ್ ಶೇಖ್, ಕನ್ನಾನ್ ಮುಶ್ರೀಫ್ ಎಂಬುವವರ ವಿರುದ್ಧ ಚಾಕು ಇರಿತ ಆರೋಪ ಕೇಳಿಬಂದಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಎಸ್‌ಪಿ
ಗಾಯಾಳುಗಳಿರುವ ಖಾಸಗಿ ಆಸ್ಪತ್ರೆಗೆ ಎಸ್‌ಪಿ ಎಚ್.ಡಿ. ಆನಂದ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಗಾಯಾಳುಗಳ ಬಳಿ ಮತ್ತು ವೈದ್ಯರ ಬಳಿ ಮಾಹಿತಿ ಪಡೆಯಲಾಗಿದೆ. ಸಮಾವೇಶದಲ್ಲಿ ಯಾವುದೇ ಚಾಕು ಇರಿತ ಅಗಿಲ್ಲ, ಪೆನ್ನಿನಿಂದ ಹಲ್ಲೆ ಆಗಿದೆ. ಗಾಯಾಳುಗಳಿಗೆ ತೀವ್ರ ಗಾಯಗಳೇನೂ ಆಗಿಲ್ಲ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದ ಅವರು, ಈ ಪ್ರಕರಣದಲ್ಲಿ ಒಬ್ಬ ರೌಡಿಶೀಟರ್ ಕೂಡ ಇದ್ದಾನೆ. ಇರ್ಫಾನ್ ಶೇಖ್ ಸೇರಿದಂತೆ ಮೂವರು ಹಲ್ಲೆ ಮಾಡಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ | Karwar News | ಕ್ಷುಲ್ಲಕ ಕಾರಣಕ್ಕೆ ಬೈಕ್ ಸವಾರನಿಂದ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ; ವಿಡಿಯೊ ವೈರಲ್