ವಿಜಯಪುರ: ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತೆ ಕೈ ನಾಯಕರ ಹೇಳಿಕೆಗಳು, ವರ್ತನೆಯಿಂದಾಗಿಯೇ ದೇಶದಲ್ಲಿ 2 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿದೆ. ಬಿಜೆಪಿ 18 ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವುದರ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚನೆ ಮಾಡಲಿದೆ. ಬಿಜೆಪಿಗೆ ಗೆಲುವಿನ ಟ್ರೆಂಡ್ ಇದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ಇಂಡಿ ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, 150 ವಿಧಾನಸಭೆ ಸದಸ್ಯರಲ್ಲಿ ಇಂಡಿ ಮತಕ್ಷೇತ್ರದಿಂದ ಒಬ್ಬ ಬಿಜೆಪಿ ಶಾಸಕ ಇರಬೇಕು, ಇದಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ | Bharath Jodo Yatra | ಕಾಂಗ್ರೆಸ್‌ನ ಟ್ವಿಟರ್ ಹ್ಯಾಂಡಲ್ ಸ್ಥಗಿತ ಆದೇಶ ವಜಾಗೊಳಿಸಿದ ಹೈಕೋರ್ಟ್
ಕಾಂಗ್ರೆಸ್ ದೇಶದಲ್ಲಿ 70 ವರ್ಷ ಆಳ್ವಿಕೆ ಮಾಡಿದೆ. ಆದರೆ ದೇಶದಲ್ಲಿ ಸಾಕಷ್ಟು ಗ್ರಾಮಗಳು ವಿದ್ಯುತ್ ಸಂಪರ್ಕ ಹೊಂದಿರಲಿಲ್ಲ. ಮೋದಿ ಸರ್ಕಾರ ಬಂದ ಮೇಲೆ 10 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ವಿಜಯಪುರದಲ್ಲಿ ಏರ್‌ಪೋರ್ಟ್ ನಿರ್ಮಾಣವಾಗುತ್ತಿದೆ. ವಿಜಯಪುದಲ್ಲಿ 2024ಕ್ಕೆ ನಳ ಇಲ್ಲದ ಯಾವುದೇ ಮನೆ ಇರುವುದಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ರೈತರ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಸುಮಾರು 10 ಲಕ್ಷ ರೈತರ ಮಕ್ಕಳಿಗೆ ಸ್ಕಾಲರ್‌ಶಿಪ್ ನೀಡುವ ಯೋಜನೆ ಜಾರಿಗೆ ತಂದಿದ್ದು, ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಿಸಿದೆ. ನಾವು ಚುನಾವಣೆಗೆ ಭರವಸೆಗಳ ಮೇಲೆ ಹೋಗುವುದಿಲ್ಲ. ಮಾಡಿದ ಸಾಧನೆಗಳ ಮೂಲಕ ಎದುರಿಸುತ್ತೇವೆ ಎಂದರು.
ನಾನು ಒಬ್ಬ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಅವರು ಹಿಂದು ಎಂಬ ಪದ ಪರ್ಶಿಯನ್ ಭಾಷೆಯಿಂದ ಬಂದಿದೆ ಎಂದು ಹೇಳಿದ್ದಾರೆ. ನೀವು ಗೂಗಲ್, ವಿಕಿಪೀಡಿಯಾ ನೋಡಿ ಹೇಳಬೇಡಿ ಎಂದ ಅವರು, ಎಲ್ಲ ಕಾಂಗ್ರೆಸ್ ನಾಯಕರು ಹಿಂದುಗಳನ್ನು ಟೀಕೆ ಮಾಡುತ್ತಾರೆ. ಸಿದ್ದರಾಮಯ್ಯ ಸರ್ಕಾರ ಇತ್ತು, ಆವಾಗ ಗೋ ಹತ್ಯೆ, ಹಿಂದುಗಳ ಹತ್ಯೆಯಾಗುತ್ತಿತ್ತು. ಯಡಿಯೂರಪ್ಪ ಸರ್ಕಾರ ಬಂದ ಮೇಲೆ ನಾವು ಗೋ ಹತ್ಯೆಗೆ ತಡೆ ಬಿದ್ದಿದೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಚುನಾವಣೆಯಲ್ಲಿ ಆ ಜಾತಿ ಈ ಜಾತಿ, ನಮ್ಮವ ನಿಂತಿದ್ದಾನೆ, ನಿಮ್ಮವ ನಿಂತಿದ್ದಾನೆ ಎಂಬುವುದನ್ನು ಬಿಡಿ. ಅಭಿವೃದ್ಧಿ ದೃಷ್ಟಿಯಿಂದ ನಾವೆಲ್ಲರೂ ಒಂದೇ, ಅದು ಬಿಜೆಪಿ ಎಂದು ಭಾವಿಸಿ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದ ಅವರು, 3 ಸಾವಿರ ಕೋಟಿ ರೂಪಾಯಿ ವೆಚ್ಚದ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯನ್ನು ಸಚಿವ ಗೋವಿಂದ ಕಾರಜೋಳ ಅವರ ಜತೆಗೂಡಿ ಬಹಳ ಪ್ರಯಾಸದಿಂದ ಜಾರಿಗೊಳಿಸಿದ್ದೇವೆ. ಇನ್ನೂ ಒಂದೇ ವಾರದಲ್ಲಿ ಟೆಂಡರ್ ಕೂಡ ಆಗಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮುಖಂಡರಾದ ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ಅನಿಲ ಜಮಾಧಾರ, ಸಿದ್ದಲಿಂಗ ಹಂಜಗಿ, ರಾಜಶೇಖರ್ ಪೂಜಾರಿ, ಅಪ್ಪಸಾಹೇಬ್ ಪಟ್ಟಣಶೆಟ್ಟಿ, ಎಸ್. ಕೆ. ಬೆಳ್ಳುಬ್ಬಿ, ವಿವೇಕಾನಂದ ಡಬ್ಬಿ, ಶಿವರುದ್ರ ಬಾಗಲಕೋಟ, ಮಲ್ಲಿಕಾರ್ಜುನ ಜೋಗುರ, ವಿಜಯ ಜ್ಯೋಶಿ, ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ ಮತ್ತಿತರರು ಇದ್ದರು.
ಯತ್ನಾಳ್, ಅರುಣ್ ಸಿಂಗ್ ಮಹತ್ವದ ಸಭೆ
ವಿಜಯಪುರ ನಗರದ ಹೊರ ಭಾಗದಲ್ಲಿರುವ ಹೈಪರ್ ಮಾರ್ಟ್‌ನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜತೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಂಗಳವಾರ ಸಂಜೆ ಮಾತುಕತೆ ನಡೆಸಿದರು. ಬೆಳಗ್ಗೆಯಿಂದ ಅರುಣ್ ಸಿಂಗ್ ಅವರಿಂದ ಯತ್ನಾಳ್ ಅವರು ಅಂತರ ಕಾಯ್ದುಕೊಂಡಿದ್ದರು. ಆದರೆ ಸಂಜೆ ಏಕಾಏಕಿ ಇಬ್ಬರು ನಾಯಕರು ಭೇಟಿಯಾಗಿ ಚರ್ಚೆ ನಡೆಸಿದ್ದು ಕುತೂಹಲ ಮೂಡಿಸಿತು. ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಯತ್ನಾಳ್ ಕೇವಲ ಒಬ್ಬ ಶಾಸಕ ಎಂದು ಹೇಳಿಕೆ ನೀಡಿದ್ದ ಅರುಣ್ ಸಿಂಗ್, ಬೆಳಗ್ಗೆ ಬಿಜೆಪಿ ಕಾರ್ಯಕ್ರಮದಲ್ಲಿ ಯತ್ನಾಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು.
ಇದನ್ನೂ ಓದಿ | ಕಾಂಗ್ರೆಸ್‌ನಂತೆ ಬಿಜೆಪಿ ಓಲೈಕೆ ರಾಜಕಾರಣ ಮಾಡಿಲ್ಲ ಎಂದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್