ವಿಜಯಪುರ: ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ (Visvesvarayya Museum) ಸೇರಿದಂತೆ ದೇಶದ ಹಲವು ಪುರಾತತ್ವ ಹಾಗೂ ಬಹು ಮುಖ್ಯ ಕಟ್ಟಡಗಳಿಗೆ ಈ ಮೇಲ್ ಮೂಲಕ ಬೆದರಿಕೆ ಹಾಕಿದ ಮಾದರಿಯಲ್ಲೇ ವಿಜಯಪುರದ ಗೋಲಗುಂಬಜ್ (Golgumbaz Vijayapura) ಆವರಣದಲ್ಲಿರುವ ವಸ್ತು ಸಂಗ್ರಹಾಲಯಕ್ಕೂ (Bijapura Museum) ಬಾಂಬ್ ಬೆದರಿಕೆ (Bomb Threat) ಹಾಕಲಾಗಿದೆ. ಇಲ್ಲಿ ಕಳೆದ ಎರಡು ದಿನಗಳಿಂದ ಬಿಗಿ ಭದ್ರತೆಯ ನಡುವೆ ತಪಾಸಣೆ ನಡೆಸಲಾಗಿದ್ದು, ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ.
ಪುರಾತತ್ವ ಇಲಾಖೆ ಅಧೀನದ ಮ್ಯೂಸಿಯಂನಲ್ಲಿ ಬಾಂಬ್ ಇಡಲಾಗಿದೆ ಎಂದು ಶುಕ್ರವಾರ ಈಮೇಲ್ ಬಂದಿತ್ತು. ವಿಜಯಪುರದ ಗೋಲಗುಂಬಜ್ ಆವಣದ ಮ್ಯೂಸಿಯಂನಲ್ಲಿ ತಪಾಸಣೆ ಮಾಡಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ತಪಾಸಣೆ ಮಾಡಲಾಗಿದೆ. ಆದರೆ ಯಾವುದೇ ಸ್ಫೋಟಕ ಕಂಡುಬಂದಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ.ಬೂಬಾಲನ್ ಹೇಳಿದ್ದಾರೆ.
ಬಾಂಬ್ ಬೆದರಿಕೆಯಿಂದ ಸಾರ್ವಜನಿಕರು ಗಾಬರಿಯಾಗುವ ಅವಶ್ಯಕತೆಯಿಲ್ಲ. ಇಮೇಲ್‌ನಲ್ಲಿ ಬಂದ ಬೆದರಿಕೆ ಸುಳ್ಳು. ಜನರು ಆತಂಕಪಡಬಾರದು ಎಂದು ಮನವಿ ಮಾಡಿದ ಜಿಲ್ಲಾಧಿಕಾರಿ ಟಿ. ಬೂಬಾಲನ್ ಅವರು ಮಾಹಿತಿ ನೀಡಿದರು.
morgue999lolನಿಂದ enquiries@museumofindia.org ಸೇರಿದಂತೆ ನೂರಕ್ಕೂ ಆಧಿಕ ಇಮೇಲ್ ಗಳಿಗೆ ಬೆದರಿಕೆ ಮೇಲ್‌ಗಳು ಬಂದಿವೆ. ಭಾರತೀಯ ಪುರಾತತ್ವ ಇಲಾಖೆಯ ಆಧೀನಲ್ಲಿರುವ ಮ್ಯೂಸಿಯಂಗಳಿಗೆ ಬಾಂಬ್ ಇಟ್ಟಿರುವ ಬೆದರಿಕೆ ಹಾಕಲಾಗಿತ್ತು.. Terrorizers 111 ಎಂಬ ಉಗ್ರ ಸಂಘಟನೆಯ ಹೆಸರು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ರಾಜಭವನಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆರೋಪಿ ಆಂಧ್ರದಲ್ಲಿ ಬಂಧನ
ಬೆಂಗಳೂರಿನ ಮೂರು ಮ್ಯೂಸಿಯಂಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿತ್ತು ಎಂದು ಕೇಂದ್ರ ವಿಭಾಗದ ಪೊಲೀಸ್ ಮುಖ್ಯಸ್ಥ ಶೇಖರ್ ಎಚ್.ಟಿ. ತಿಳಿಸಿದ್ದಾರೆ. ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ವಿಶ್ವೇಶ್ವರಯ್ಯ ಮ್ಯೂಸಿಯಂ, ವಿಧಾನಸೌಧ ಠಾಣಾ ವ್ಯಾಪ್ತಿಯ ನೆಹರು ತಾರಾಲಯ, ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಗೆ ಬೆದರಿಕೆ ಮೇಲ್ ಬಂದಿತ್ತು. ಪೊಲೀಸರಿಗೆ ಮಾಹಿತಿ ಬಳಿಕ ಡಾಗ್ ಸ್ಕ್ವಾಡ್ ಮೂಲಕ ಪರಿಶೀಲನೆ ಮಾಡಲಾಯಿತು. ಮೂರು ಮ್ಯೂಸಿಯಂಗಳಲ್ಲಿ ಯಾವುದೇ ಬಾಂಬ್ ಪತ್ತೆ ಆಗಿಲ್ಲ ಎಂದು ಅವರು ತಿಳಿಸಿದರು.
ಈ ಬಗ್ಗೆ ಮೂರು ಠಾಣೆಗಳಲ್ಲಿ ದೂರು ದಾಖಲಾಗಿದೆ. ಮೇಲ್ ಮೂಲ ಹುಡುಕುತ್ತಿದ್ದೀವಿ, ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.