Site icon Vistara News

Border Dispute | ಮಹಾರಾಷ್ಟ್ರದ ಜತ್‌ನಲ್ಲಿ ಹಾರಿತು ಕನ್ನಡ ಧ್ವಜ; ಕರ್ನಾಟಕ, ಸಿಎಂ ಬೊಮ್ಮಾಯಿ ಪರ ಘೋಷಣೆ

jatta protest ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ

ವಿಜಯಪುರ: ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ (Border Dispute) ದಿನೇ ದಿನೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಮಹಾರಾಷ್ಟ್ರದ ಪುಂಡರ ವರ್ತನೆ ವಿರುದ್ಧ ಕರ್ನಾಟಕದಲ್ಲಿ ಪ್ರತಿಭಟನೆಗಳು, ಆಕ್ರೋಶಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ಈಗ ಮಹಾರಾಷ್ಟ್ರದ ನೆಲದಲ್ಲಿ ಕನ್ನಡ ಧ್ವಜ ಹಾರಾಡಿದೆ. ಜೈ ಕರ್ನಾಟಕ ಜಯಘೋಷ ಮೊಳಗಿದೆ.

ಮಹಾರಾಷ್ಟ್ರದಲ್ಲಿ ಶುಕ್ರವಾರ ಕರ್ನಾಟಕ ಬಸ್‌ಗೆ ಮರಾಠಿ ಪುಂಡರು ಕಲ್ಲು ತೂರಿ, ಜೈ ಮಹಾರಾಷ್ಟ್ರ ಎಂದು ಬರೆದು ಕಳುಹಿಸಿದ್ದರು. ಇದಕ್ಕೆ ಪ್ರತಿಯಾಗಿ ಬೆಳಗಾವಿಯಲ್ಲಿ ವಿವಿಧ ಕನ್ನಡಪರ ಸಂಘಟನೆಯವರು ಪ್ರತಿಭಟನೆ ನಡೆಸಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಭಾವಚಿತ್ರದ ಮೆರವಣಿಗೆ ಮಾಡಿ ಬೆಂಕಿ ಹಚ್ಚಿದ್ದರು. ಈಗ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ತಿಕ್ಕುಂಡಿ ಗ್ರಾಮದಲ್ಲಿ ಕನ್ನಡಿಗರು ಕರ್ನಾಟಕದ ಪರ ಜಯಘೋಷ ಕೂಗಿದ್ದಾರೆ. ತಮ್ಮ ಗ್ರಾಮದ ಮುಖ್ಯದ್ವಾರಕ್ಕೆ ಕನ್ನಡ ಬಾವುಟ ಕಟ್ಟಿದರು.

ಮೊದಲು ಅಭಿವೃದ್ಧಿ ಮಾಡಿ; ಗ್ರಾಮಸ್ಥರ ಆಕ್ರೋಶ
ಜತ್ತ ತಾಲೂಕಿನ ತಿಕ್ಕುಂಡಿ ಗ್ರಾಮದಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಗ್ರಾಮಸ್ಥರು ಮೊದಲು ಅಭಿವೃದ್ಧಿ ಕಡೆಗೆ ಗಮನ ಕೊಡಿ ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ತಿಕ್ಕುಂಡಿ ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯದ ಎದುರು ನಿಂತ ಕೆಲವರು ಕನ್ನಡದ ಬಾವುಟವನ್ನು ಹಿಡಿದು ಪ್ರದರ್ಶನ ಮಾಡಿದರು.

Border Dispute | ಹೇಗೂ ಏಕರೂಪ ನಾಗರಿಕ ಸಂಹಿತೆ ಎನ್ನುತ್ತಿದ್ದೀರಿ; ಬೆಳಗಾವಿ ಇಲ್ಲಿದ್ದರೇನು? ಮಹಾರಾಷ್ಟ್ರದಲ್ಲಿ ಇದ್ದರೇನು?: ಎಚ್‌ಡಿಕೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರವುಳ್ಳ ಕನ್ನಡ ಧ್ವಜವನ್ನು ಜತ್ತ ಗ್ರಾಮದ ಮುಖ್ಯದ್ವಾರಕ್ಕೆ ಕಟ್ಟಿದ ಗ್ರಾಮಸ್ಥರು, ಜೈ ಕರ್ನಾಟಕ ಎಂದು ಜಯಘೋಷ ಕೂಗಿದರು. ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ಹಿಂದೆ ಇಲ್ಲಿನ‌ ಕನ್ನಡಿಗರು, “ನೀರು ಕೊಡಿ ಇಲ್ಲವೇ ನಮ್ಮ ಗ್ರಾಮವನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಹೋರಾಟ ಮಾಡಿ ಪಾದಯಾತ್ರೆ ಮಾಡಿದ್ದರು.

ಕರ್ನಾಟಕಕ್ಕೆ ಸೇರಿಸಲು ಜತ್ತ ತಾಲೂಕಿಗರ ಒತ್ತಾಯ
ಕುಡಿಯುವ ನೀರು ಹಾಗೂ ನೀರಾವರಿ ಸೌಲಭ್ಯವನ್ನು ನೀಡುವ ಸಂಬಂಧ ಜತ್ತ ತಾಲೂಕಿನ ೪೨ ಹಳ್ಳಿಗಳ ಜನರು ೬ ದಶಕಗಳಿಂದ ಪ್ರತಿಭಟನೆ ನಡೆಸುತ್ತಾ ಬಂದಿದ್ದರು. ಸೌಲಭ್ಯ ಕಲ್ಪಿಸಿ ಇಲ್ಲವೇ ಕರ್ನಾಟಕಕ್ಕೆ ಸೇರಿಸಿ ಎಂದು ಒತ್ತಾಯಿಸಿದ್ದರು.

ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ 42 ಹಳ್ಳಿಗಳ ಜನರೆಲ್ಲ ಒಗ್ಗಟ್ಟಾಗಿದ್ದು, ಈಗ ಪುನಃ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ನೀರಿಗಾಗಿ ಹೋರಾಟ ನಡೆಸಲು ಪ್ರಾರಂಭಿಸಿದ್ದಾರೆ. ‘ನಮಗೆ ನೀರು ಕೊಡಿ, ಇಲ್ಲ ಅಂದ್ರೆ ಕರ್ನಾಟಕಕ್ಕೆ ಹೋಗುತ್ತೇವೆ’ ಎಂದು ಒಕ್ಕೊರಲಿನಿಂದ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ | Border dispute | ಗಡಿನಾಡಿನಲ್ಲಿ ಬೀದಿಗಿಳಿದ ಕನ್ನಡಪರ ಸಂಘಟನೆಗಳು; ಪ್ರತಿಕೃತಿ ದಹಿಸಿ ಆಕ್ರೋಶ

ಈ ಜತ್ತ ತಾಲೂಕಿನ 42 ಗ್ರಾಮಗಳಲ್ಲಿ ಕಳೆದ 6 ದಶಕಗಳಿಂದಲೂ ನೀರಿನ ಸಮಸ್ಯೆ ಇದೆ. ಜತ್ತ ತಾಲೂಕು ನೀರಾವರಿ ಸಂಘರ್ಷ ಸಮಿತಿ ನೀರಿಗಾಗಿ ಹೋರಾಟ ಮಾಡಿಕೊಂಡೇ ಬರುತ್ತಿದೆ. ಈಗ ಗಡಿ ವಿವಾದ ಭುಗಿಲೆದ್ದ ಬೆನ್ನಲ್ಲೇ ಈ ಸಮಿತಿ ನೇತೃತ್ವದಲ್ಲಿ, ಜತ್ತ ತಾಲೂಕಿನ ಉಮದಿ ಗ್ರಾಮದಲ್ಲಿ ಸಭೆ ನಡೆದಿತ್ತು. 42 ಹಳ್ಳಿಗಳ ಪ್ರಮುಖರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಇನ್ನು ಎಂಟು ದಿನಗಳಲ್ಲಿ ನೀರು ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಗಡುವು ನೀಡಿದ್ದಾರೆ.

‘ಇನ್ನು ಎಂಟು ದಿನಗಳ ಒಳಗೆ ಮಹಾರಾಷ್ಟ್ರ ಸಿಎಂ, ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ಜತ್ತ ತಾಲೂಕಿಗೆ ಬರಬೇಕು. ಇಲ್ಲಿನ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು. 8 ದಿನಗಳ ಒಳಗೆ ನೀರಿನ ಕೊರತೆ ನೀಗಿಸದೆ ಇದ್ದರೆ, ಮಹಾರಾಷ್ಟ್ರ ಸರ್ಕಾರದ ಪ್ರಮುಖರು ಇಲ್ಲಿಗೆ ಬರದೆ ಇದ್ದರೆ, ನಾವು ಇಲ್ಲಿಗೆ ಕರ್ನಾಟಕ ಮುಖ್ಯಮಂತ್ರಿಯನ್ನು ಆಹ್ವಾನಿಸುತ್ತೇವೆ. ಜತ್ತ ತಾಲೂಕನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬ ಒತ್ತಡ ಹೇರುತ್ತೇವೆ’ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ತಿರುಗೇಟು ಕೊಟ್ಟಿದ್ದ ಸಿಎಂ ಬೊಮ್ಮಾಯಿ
ಗಡಿಯಲ್ಲಿರುವ ಹಳ್ಳಿಗಳು ತಮಗೆ ಬೇಕು ಎಂದು ಮಹಾರಾಷ್ಟ್ರ ಹೇಳುತ್ತಿರುವುದಲ್ಲದೆ, ಸುಪ್ರೀಂ ಕೋರ್ಟ್‌ನಲ್ಲಿ ದಾವೆಯನ್ನೂ ಹೂಡಿದೆ. ಇದಕ್ಕೆ ತಿರುಗೇಟು ಎಂಬಂತೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ, ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು’ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಜತ್ತ ತಾಲೂಕಿನಲ್ಲಿ ನೀರಿನ ಹೋರಾಟವೂ ಶುರುವಾಗಿದೆ.

ಇದನ್ನೂ ಓದಿ | Border dispute | ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‌ಗೆ ಕಲ್ಲು ತೂರಾಟ; 150 ಬಸ್‌ಗಳ ಕಾರ್ಯಾಚರಣೆ ಸ್ಥಗಿತ

Exit mobile version