Site icon Vistara News

CM Siddaramaiah : ದೇಗುಲ ಪ್ರವೇಶ ಒಲ್ಲದ ಸಿದ್ಧರಾಮಯ್ಯ;ಇದು ಅಸಲಿ ಮುಖ ಎಂದ ಬಿಜೆಪಿ

Siddaramaiah Temple

ಬೆಂಗಳೂರು: ಮಸೀದಿ, ದರ್ಗಾಗಳ ಕಾರ್ಯಕ್ರಮ ಅಂದರೆ ಹೇಳದೇ ಕೇಳದೆ ನುಗ್ಗುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ದೇವಸ್ಥಾನಗಳಿಗೆ ಹೋದಾಗ (Temple Visit) ಕಾಟಾಚಾರದ ದರ್ಶನ ಮಾಡುತ್ತಾರೆ ಎಂದು ಬಿಜೆಪಿ ಆರೋಪಿಸಿದೆ. ವಿಜಯಪುರದ ದ್ಯಾಬೇರಿ (Dyaberi in Vijayapura) ಗ್ರಾಮದ ವಾಗ್ದೇವಿ ದೇವಿ ದೇವಸ್ಥಾನಕ್ಕೆ (Vagdevi devi Temple) ಭೇಟಿ ನೀಡಿದ ಸಂದರ್ಭದಲ್ಲಿ ಗರ್ಭಗುಡಿ ಪ್ರವೇಶ ಮಾಡಲು ನಿರಾಕರಿಸಿದ್ದನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದೆ.

ಹಿಂದೆ ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದಾರೆ ಎಂಬ ಆಪಾದನೆಗೆ ಒಳಗಾಗಿ ಸುದ್ದಿಯಾಗಿದ್ದ ಸಿದ್ದರಾಮಯ್ಯ ಅವರು ಈ ಬಾರಿ ಗರ್ಭಗುಡಿಯೊಳಗೆ ಬರುವುದಿಲ್ಲ, ಇಲ್ಲಿಂದಲೇ ಕೈ ಮುಗಿಯುತ್ತೇನೆ ಎಂದು ಹೇಳಿದ್ದು ಸದ್ದು ಮಾಡಿದೆ! ಸಿದ್ದರಾಮಯ್ಯ ಅವರು ಕಳೆದ ಮಂಗಳವಾರ ದ್ಯಾಬೇರಿಯ ವಾಗ್ದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ತೆರಳಿದ್ದರು.

ಶ್ರೀ ವಾಗ್ದೇವಿ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಜತೆಗಿದ್ದರು. ಆರಂಭದಲ್ಲಿ ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ನಡೆದ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಗಳ ಗುರುನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ದ್ಯಾಬೇರಿ ಕೆರೆಗೆ ಬಾಗಿನ ಅರ್ಪಿಸಿದರು. ಆ ಬಳಿಕ ದೇವಸ್ಥಾನಕ್ಕೆ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ವೇಳೆ ವಾಗ್ದೇವಿ ದೇವಿಯ ಗರ್ಭಗುಡಿಯ ಬಾಗಿಲ ಬಳಿ ಬಂದ ಸಿಎಂ ಸಿದ್ದರಾಮಯ್ಯ ಅವರನ್ನು ಗರ್ಭಗುಡಿಯೊಳಗೆ ಬರುವಂತೆ ಮನವಿ ಮಾಡಿದರು. ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್‌ ಅವರು ಗರ್ಭಗುಡಿ ಪ್ರವೇಶ ಮಾಡಿದರು. ಮತ್ತು ಒಳಗೆ ಹೋದ ಬಳಿಕ ನೀವೂ ಬನ್ನಿ ಎಂದು ಸಿದ್ದರಾಮಯ್ಯ ಅವರನ್ನು ಕರೆದರು. ಆದರೆ, ಸಿದ್ದರಾಮಯ್ಯ ಅವರು ಒಳಗೆ ಹೋಗದೆ ಕೈ ಸನ್ನೆಯಲ್ಲೇ ಪೂಜೆ ಮಾಡಿ ಎಂದು ಸೂಚಿಸಿದರು. ಸಚಿವ ಎಂ. ಬಿ. ಪಾಟೀಲ ಅವರು ಪರವಾಗಿಲ್ಲ, ಒಳಗೆ ಬನ್ನಿ ಸರ್, ಏನೂ ಸಮಸ್ಯೆ ಇಲ್ಲ ಎಂದು ಹೇಳಿದರೂ ನೀನೇ ಹೋಗು ಎಂದು ಕಳುಹಿಸಿದ್ದರು. ಸಿದ್ದರಾಮಯ್ಯ ಅವರು ನೀಡಿದ ಹೂಮಾಲೆಯನ್ನು ಎಂ.ಬಿ. ಪಾಟೀಲ್‌ ಅವರು ದೇವರಿಗೆ ಹಾಕಿದ್ದರು.

ಬಿಜೆಪಿ ಈ ವಿಚಾರವನ್ನು ಇಟ್ಟುಕೊಂಟು ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ನಡೆಸಿದೆ.

ಹಿಂದೂ ದೈವ, ದೇವರ ಮೇಲೆ ಇಷ್ಟೊಂದು ಅಸಡ್ಡೆ ಏಕೆ?

ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದರ್ಶನವನ್ನು ಕಾಟಾಚಾರಕ್ಕೆ ಮಾಡಿದ ಹಿಂದೂ ವಿರೋಧಿ ಸಿದ್ದರಾಮಯ್ಯರವರು ಪ್ರಭು ಶ್ರೀರಾಮರ ಅಪರಾವತಾರವಂತೆ. ಸಿಎಂ ಸಿದ್ದರಾಮಯ್ಯ ಅವರೇ ಮಸೀದಿ, ದರ್ಗಾಗಳಿಗೆ ಹೋಗಿ ಅವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಂಡು ಫೋಸು ಕೊಡುವ ನಿಮಗೆ, ದೇವಿಯ ಬಳಿ ನಾಡಿನ ಒಳಿತಿಗಾಗಿ ಭಕ್ತಿಯಿಂದ ಕೈ ಮುಗಿಯುವಷ್ಟು ಸಮಯವಿಲ್ಲ. ಹಿಂದೂ ಧರ್ಮ, ಹಿಂದೂ ದೈವ ಹಾಗೂ ಹಿಂದೂಗಳನ್ನು ಕಂಡರೆ ಈ ಪರಿ ಅಸಡ್ಡೆ ಏಕೆ..? ಎಂದು ಬಿಜೆಪಿ ಟ್ವೀಟ್‌ ಮೂಲಕ ಪ್ರಶ್ನೆ ಮಾಡಿದೆ.

ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ನೀಡಿ, ರಾಮಮಂದಿರಕ್ಕೆ ಒಂದು ರೂ ಸಹ ದೇಣಿಗೆ ನೀಡದ ಚುನಾವಣಾ ಹಿಂದೂ ಸಿಎಂ ಸಿದ್ದರಾಮಯ್ಯರವರ ಅಸಲಿ ಮುಖ ಇದು ಎಂದು ಟೀಕಿಸಿದೆ.

ಸಿದ್ದರಾಮಯ್ಯ ದೇವಸ್ಥಾನಕ್ಕೆ ಹೋಗುವುದೇ ಚುನಾವಣೆಗಾಗಿ ಎಂದ ಬೊಮ್ಮಾಯಿ

ಸಿದ್ದರಾಮಯ್ಯ ದೇವಸ್ಥಾನ ಗರ್ಭಗುಡಿ ಪ್ರವೇಶ ನಿರಾಕರಣೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ʻʻಸಿದ್ಧರಾಮಯ್ಯ ಈ ರೀತಿ ಮಾಡುವುದು ಇದು ಮೊದಲನೇ ಬಾರಿಯಲ್ಲ. ಅವರು ಹಿಂದೆ ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದು ಎಲ್ಲಾ ಇದೆ. ಚುನಾವಣೆ ಬಂದಾಗ ಮಾತ್ರ ದೇವರ ಹತ್ತಿರ ಹೋಗಿ ಆರತಿ ತೆಗೆದುಕೊಳ್ಳುವುದು ನೋಡಿದ್ದೇವೆ. ಸಿದ್ದರಾಮಯ್ಯ ಚುನಾವಣೆಗೋಸ್ಕರ ಅಷ್ಟೇ ದೇವಸ್ಥಾನಕ್ಕೆ ಹೋಗುತ್ತಾರೆ. ಬೇರೆ ಯಾವುದಕ್ಕೂ ಕೂಡಾ ಅವರು ದೇವಸ್ಥಾನಕ್ಕೆ ಹೋಗಿಲ್ಲʼʼ ಎಂದು ಮಾಜಿ ಸಿಎಂ ಬಸವರಾಜು ಬೊಮ್ಮಾಯಿ ಹೇಳಿದ್ದಾರೆ.

ಮಸೀದಿಗೆ ಹೋಗ್ತೀರಿ, ದೇವಸ್ಥಾನ ಪ್ರವೇಶಿಸಲು ಏನು ಕಷ್ಟ ಎಂದು ಕೇಳಿದ ಅಶೋಕ್‌

ಈ ನಡುವೆ, ಸಿದ್ದರಾಮಯ್ಯ ಅವರು ದರ್ಗಾ, ಮಸೀದಿಗಳಿಗೆ ಕರೆಯದೆ ಇದ್ದರೂ ಹೋಗುತ್ತಾರೆ. ಆದರೆ, ದೇವಸ್ಥಾನದೊಳಗೆ ಬನ್ನಿ ಅಂದರೂ ಬಾರದೆ ಉಡಾಫೆತನ ತೋರಿಸುತ್ತಾರೆ ಎಂದು ‌ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Exit mobile version