Site icon Vistara News

ವಿಜಯಪುರದಲ್ಲಿ ಶೈತ್ಯ ಸಂಗ್ರಹಾಗಾರ: ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಿಎಂ ಸೂಚನೆ

ವಿಜಯಪುರ

ಬೆಂಗಳೂರು ವಿಜಯಪುರ ಜಿಲ್ಲೆಯ ತೊರವಿ ಗ್ರಾಮದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಅತ್ಯಾಧುನಿಕ ಶೈತ್ಯ ಸಂಗ್ರಹಾಗಾರ (cold storage) ಸ್ಥಾಪಿಸಲು ಟೆಂಡರ್ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ದ್ರಾಕ್ಷಿ ಬೆಳೆಗಾರರಿಗೆ ವಿವಿಧ ಸೌಲಭ್ಯ ಒದಗಿಸುವ ಕುರಿತು ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆಯನ್ನು ಶುಕ್ರವಾರ ನಡೆಸಿ ಬೊಮ್ಮಾಯಿ ಚರ್ಚಿಸಿದರು. ವಿಜಯಪುರ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ 1 ಲಕ್ಷ ಟನ್ ದ್ರಾಕ್ಷಿ ಉತ್ಪಾದನೆಯಾಗುತ್ತಿದ್ದು, ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ಅಗತ್ಯ ಎಂದು ಸಭೆಯಲ್ಲಿ ದ್ರಾಕ್ಷಿ ಬೆಳೆಗಾರರು ತಿಳಿಸಿದರು.

ಮಂಡಳಿಯ ಹೆಸರಿನಲ್ಲಿ ವೈನ್ ಪಾರ್ಕಿನಲ್ಲಿ ಒಟ್ಟು 141.28 ಎಕರೆ ಜಮೀನು ಇದ್ದು, ಇದರಲ್ಲಿ ಶೈತ್ಯ ಸಂಗ್ರಹಾಗಾರ ನಿರ್ಮಿಸಲು 6 ಎಕರೆ ಜಮೀನು ಗುರುತಿಸಲಾಗಿದೆ. ಇದಲ್ಲದೆ ದ್ರಾಕ್ಷಿ ಬೆಳೆಗಾರರ ಸಂಘಗಳ ಮೂಲಕವೂ ಶೈತ್ಯ ಸಂಗ್ರಹಾಗಾರ ನಿರ್ಮಿಸಲು ಹಾಗೂ ಈ ಸಂಘಗಳಿಗೆ ಎನ್‌ಎಚ್‌ಎಂ ಅಡಿ ಸಹಾಯಧನ ನೀಡಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇದನ್ನೂ ಓದಿ | ಪ್ರೀತಿಗೆ ಎಲ್ಲಿಯ ಗಡಿ? ಕೆನಡಾ ಯುವತಿ ಈಗ ವಿಜಯಪುರದ ಸೊಸೆ

ಹಸಿದ್ರಾಕ್ಷಿಗೆ ಮಾರುಕಟ್ಟೆ ಸೌಲಭ್ಯ ವಿಸ್ತರಿಸಲು ರೆಫ್ರಿಜರೇಟರ್ ಕಂಟೇನರ್ ಇರುವ ರೈಲು ಸೇವೆ ಒದಗಿಸಲು ರೈಲ್ವೆ ಸಚಿವಾಲಯದೊಂದಿಗೆ ಮಾತುಕತೆ ನಡೆಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು. ಇದರೊಂದಿಗೆ ಒಣದ್ರಾಕ್ಷಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಹಾಗೂ ರಫ್ತು ಉತ್ತೇಜನಕ್ಕೆ ಕ್ರಮ ವಹಿಸಲಾಗುವುದು. ಬ್ರಾಂಡಿಂಗ್, ಪ್ಯಾಕೇಜಿಂಗ್ ಮೊದಲಾದ ವಿಷಯಗಳಲ್ಲಿ ಬೆಂಬಲ ನೀಡಲಾಗುವುದು ಎಂದರು.

ವೈನ್ ತಯಾರಿಕೆಗೆ ಹಾಗೂ ಮಾರಾಟಕ್ಕೆ ಉತ್ತೇಜನ ನೀಡಲು ಹಾಗೂ ರಫ್ತು ಅವಕಾಶ ಹೆಚ್ಚಿಸಲಾಗುವುದು. ವೈನ್ ಪಾರ್ಕ್‌ನಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕೆರೆಯಲ್ಲಿ ಬೋಟಿಂಗ್ ಮತ್ತಿತರ ಮನರಂಜನೆ ಹಾಗೂ ರೆಸಾರ್ಟ್ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಸೂಚಿಸಲಾಯಿತು. ನೂತನವಾಗಿ ನಿರ್ಮಾಣವಾಗುತ್ತಿರುವ ವಿಜಯಪುರ ವಿಮಾನ ನಿಲ್ದಾಣದಲ್ಲಿ ಕಾರ್ಗೊ ವಿಮಾನ ಸೇವೆ ಒದಗಿಸಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಸಭೆಯಲ್ಲಿ ಸಚಿವರಾದ ಗೋವಿಂದ ಎಂ. ಕಾರಜೋಳ, ಆನಂದ್ ಸಿಂಗ್, ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಕೇವಲ್ ಚಂದ್ ಬನ್ಸಾಲಿ, ಶಾಸಕ ಬಸನಗೌಡ ಆರ್. ಪಾಟೀಲ ಯತ್ನಾಳ ಭಾಗವಹಿಸಿದ್ದರು.

ಇದನ್ನೂ ಓದಿ | ಥೈಲ್ಯಾಂಡ್‌ನಲ್ಲಿ ಬಂಗಾರದ ಪದಕ ಗೆದ್ದ ವಿಜಯಪುರದ ಕುಸ್ತಿಪಟು

Exit mobile version