Site icon Vistara News

H.D. Kumaraswamy : ಜೆಡಿಎಸ್‌ ಮಾಜಿ ನಾಯಕ ಸಿದ್ದರಾಮಯ್ಯ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ಯದ್ವಾತದ್ವ ವಾಗ್ದಾಳಿ

pancharathna Muddebihal

ಮುದ್ದೇಬಿಹಾಳ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ರಾಜಕೀಯ ನಾಯಕರು ಪರಸ್ಪರ ವಾಗ್ದಾಳಿ ನಡೆಸುವ, ಇತಿಹಾಸವನ್ನು ಕೆದಕುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಜೆಡಿಎಸ್‌ ಮಾಜಿ ನಾಯಕ ಹಾಗೂ ಹಾಲಿ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ (H.D. Kumaraswamy) ಯದ್ವಾತದ್ವ ವಾಗ್ದಾಳಿ ನಡೆಸಿದ್ದಾರೆ.

ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ಬಳವಾಟ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆ ನಿಮಿತ್ತ ಗ್ರಾಮ ವಾಸ್ತವ್ಯ ಹೂಡಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಭಾನುವಾರ ಬೆಳಗ್ಗೆ ಮಾಧ್ಯಮಗಳ ಜತೆ ಮಾತನಾಡಿದರು.

ಜನರು ಕಷ್ಟ ಹೇಳಿಕೊಂಡು ನಮ್ಮ ಬಳಿ ನಿರಂತರವಾಗಿ ಜನ ಬರುತ್ತಾರೆ. ಸುಮ್ಮನೆ ಜೆಡಿಎಸ್ ಪಕ್ಷದ ಬಗ್ಗೆ ಏನೇನೋ ಮಾತನಾಡಬೇಡಿ. ಮುಖ್ಯಮಂತ್ರಿ ಆಸೆಗಾಗಿ ಪಕ್ಷ ಬಿಟ್ಟು ಹೋಗಿದ್ದು ನೆನಪು ಇದೆಯೇ ನಿಮಗೆ? ನಿಮ್ಮಿಂದ ನಾನು ಪಾಠವನ್ನು ಹೇಳಿಸಿಕೊಳ್ಳುವ ಅಗತ್ಯ ನನಗೆ ಇಲ್ಲ.

ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಕಟ್ಟಿದ ಪಕ್ಷವ ಉಳಿಸಿಕೊಂಡು ಹೊರಟಿದ್ದೇವೆ ನಾವು. ಅಂಥ ಪಕ್ಷವನ್ನು, ಅವರ ಸಿದ್ದಾಂತವನ್ನು ಗಾಳಿಗೆ ಬಿಟ್ಟು ಸಿಎಂ ಕುರ್ಚಿ ಹಿಂದೆ ಓಡಿ ಹೋದವರು ಯಾರು? ನಿಮ್ಮ ಯೋಗ್ಯತೆ ಏನು ಎಂದು ಗೊತ್ತಿದೆ.

ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಲು ನೀವು ಏನು ಮಾಡಿದಿರಿ ಎನ್ನುವುದು ಗೊತ್ತಿದೆ. ಎಲ್ಲಿ ಕೂತು, ಯಾರ ಜತೆ ಕೂಡಿ ಕುತಂತ್ರ ಮಾಡಿದಿರಿ ಎನ್ನುವುದು ನನಗೆ ತಿಳಿದಿದೆ. ಬಿಜೆಪಿಗೆ ಅಧಿಕಾರ ಹೋಗಬಾರದು ಎಂದು ನಿಮ್ಮ ಪಕ್ಷದ ವರಿಷ್ಠರು ನಮ್ಮ ಬಾಗಿಲಿಗೆ ಬಂದಿದ್ದರು. ಖರ್ಗೆ, ಪರಮೇಶ್ವರ್, ಡಿ.ಕೆ. ಶಿವಕುಮಾರ್ ಇದ್ದಾರೆ. ಅವರಿಗೆ ಇದೆಲ್ಲಾ ಗೊತ್ತಿಲ್ಲವೆ? ಆಗ ನೀವು ಎಲ್ಲಿದ್ದೀರಿ?

ನನ್ನ ಸರ್ಕಾರ ಹೇಗೆ ಹೋಯಿತು? ಅದನ್ನು ತೆಗೆಯಲು ನಿಮ್ಮ ಕಾಣಿಕೆ ಏನು? ಬಿಜೆಪಿಯವರ ಜತೆ ಹೇಗೆಲ್ಲಾ ಕುಮ್ಮಕ್ಕಾಗಿದ್ದಿರಿ? ಯಾರನ್ನೆಲ್ಲ ಎಲ್ಲೆಲ್ಲಿಗೆ ಕಲಿಸಿದಿರಿ ಎನ್ನುವುದು ನನಗೆ ತಿಳಿದಿದೆ. ಆದರೆ, ಜಾತ್ಯತೀತ ತತ್ವ ಆಸ್ತಿ ಎನ್ನುವ ರೀತಿ ವರ್ತಿಸುತ್ತಿದ್ದೀರಿ. ಜಯಪ್ರಕಾಶ್ ನಾರಾಯಣ್ ಅವರ ಸಿದ್ದಾಂತಕ್ಕೆ ನೀವು ಬದ್ಧರಾಗಿ ಇದ್ದಿದರೆ ನೀವು ಅಧಿಕಾರಕ್ಕಾಗಿ ಮಾತೃ ಪಕ್ಷವನ್ನು ಕಾಲಿನಲ್ಲಿ ಒದ್ದು ಹೋಗುತ್ತಿರಲಿಲ್ಲ.

ಬಿಜೆಪಿ ಪಕ್ಷದವರಿಗಿಂತ ಭ್ರಷ್ಟಾಚಾರದಲ್ಲಿ ನಿವೇನೂ ಕಮ್ಮಿ ಇಲ್ಲ. ನೀವು ಬೇಕಾದಷ್ಟು ಅಕ್ರಮಗಳನ್ನು ನಡೆಸಿದ್ದೀರಿ. ನಾನು ಎತ್ತಿದ ಪ್ರಶ್ನೆಗಳಿಗೆ ಈವರೆಗೆ ಉತ್ತರ ಕೊಡಲು ನಿಮ್ಮಿಂದ ಆಗಿಲ್ಲ. ಮತ್ತೆ ನಮ್ಮ ಪಕ್ಷದ ಬಗ್ಗೆ ನಾಲಿಗೆ ಜಾರಿ ಬಿಡುತ್ತಿರಾ? ನಾಚಿಕೆ ಇಲ್ಲವೇ? ಎಂದು ಹೇಳಿದರು.

ಇದನ್ನೂ | Prajadwani Yatra : ಕೊಟ್ಟ ಭರವಸೆಗಳನ್ನು ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ: ಮಾಜಿ ಸಿಎಂ ಸಿದ್ದರಾಮಯ್ಯ

ನಾನು ಹೋಟೆಲ್‌ನಲ್ಲಿ ಇದ್ದೆ ಎಂದು ಹೇಳುತ್ತೀರಲ್ಲ, ನಿಮ್ಮ ಸರ್ಕಾರ ಹೋದ ಕೂಡಲೇ ಸರ್ಕಾರಿ ಮನೆ ಖಾಲಿ ಮಾಡಿಕೊಡಬೇಕಿತ್ತು. ನೀವು ಹಾಗೆ ಮಾಡಲಿಲ್ಲ. ನಾನು ಹೋಟೆಲ್‌ನಲ್ಲಿಯೇ ಇದ್ದಿದ್ದರೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೂರಾರು ಕೋಟಿ ರೂ. ಹಣ ಹೇಗೆ ಬಿಡುಗಡೆ ಆಯಿತು? ನಿಮ್ಮ ಪಕ್ಷದ ಶಾಸಕರಿಗೆ ಸಾವಿರಾರು ಕೋಟಿ ರೂ. ಅನುದಾನ ಹೇಗೆ ಬಿಡುಗಡೆ ಆಯಿತು? ಎಂದು ಹೇಳಿ ಎಂದು ತರಾಟೆಗೆ ತೆಗೆದುಕೊಂಡರು.

ನಾನು ಸದಾ ಜನಗಳ ಮಧ್ಯೆ ಇರುವ ಸಾಮಾನ್ಯ ವ್ಯಕ್ತಿ. ಆದರೆ ನೀವು ಸಂಜೆ 6 ಗಂಟೆಯಾದ ಮೇಲೆ ಯಾರ ಕೈಗೆ ಸಿಗುತ್ತಿದ್ದಿರಿ? ಮಧ್ಯಾಹ್ನ ಊಟಕ್ಕೆಂದು ಹೋದರೆ ನಾಪತ್ತೆ ಆಗಿಬಿಡುತ್ತಿದ್ದಿರಿ! ಈ ಬಗ್ಗೆ ಕೂಡ ನೀವು ಭಾಷಣ ಮಾಡಬೇಕಲ್ಲವೇ? ಎಂದು ಪ್ರಶ್ನೆ ಮಾಡಿದರು.

Exit mobile version