ವಿಜಯಪುರ: ಸಿಂಧಗಿ ವಿಧಾನಸಭೆ ಕ್ಷೇತ್ರದಿಂದ ಜೆಡಿಎಸ್ (JDS Politics) ಅಭ್ಯರ್ಥಿಯಾಗಿ, ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಮಾಜಿ ಸೈನಿಕ ಶಿವಾನಂದ ಸೋಮಜ್ಯಾಳ ಅವರ ಪತ್ನಿ ವಿಶಾಲಾಕ್ಷಿ ಅವರನ್ನು ಅಭ್ಯರ್ಥಿಯನ್ನಾಗಿ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ಸಿಂಧಗಿಯಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಈಗಾಗಲೆ ಬಿಡುಗಡೆಯಾಗಿರುವ ಜೆಡಿಎಸ್ ಪಟ್ಟಿಯಲ್ಲಿ ಮಾಜಿ ಸೈನಿಕ ಶಿವಾನಂದ ಸೋಮಜ್ಯಾಳ ಅವರ ಹೆಸರಿತ್ತು. ಇತ್ತೀಚೆಗೆ ಸಿಂಧಗಿಯಲ್ಲಿ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಿದ್ದ ಶಿವಾನಂದ ಅವರು, ಹೃದಯಾಘಾತದಿಂದ ಮೃತಪಟ್ಟಿದ್ದರು.
ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ವಿಶಾಲಾಕ್ಷಿಯವರು ಮದುವೆಯಾಗಿ ಯಾವ ವಯಸ್ಸಿನಲ್ಲಿ ಸೈನಿಕ ವೃತ್ತಿಗೆ ಹೋದರೋ ಗೊತ್ತಿಲ್ಲ ನನಗೆ. ಶಿವಾನಂದ ಪಾಟೀಲ್ ಸೈನಿಕರಾಗಿ ದೇಶ ಕಾಯಲು ಹೋದಾಗ ಈ ತಂಗಿ ವಿಶಾಲಾಕ್ಷಿ ಒಬ್ಬಂಟಿಯಾಗಿ ಮನೆ ಕಾಯ್ದಿದ್ದಾರೆ. ನಿಮ್ಮನ್ನ ಕಾಯಲು, ಈ ದೇಶದ ಗಡಿ ಕಾಯಲು ತಮಗೆ ತಾಳಿ ಕಟ್ಟಿದ ಪತಿಯನ್ನು ಕಳಿಸಿದಂತಹ ತ್ಯಾಗಮಯಿ ಈ ಸಹೋದರಿ.
ದಯವಿಟ್ಟು ನಿಮ್ಮಲ್ಲಿ ಕೈಜೋಡಿಸಿ ಮನವಿ ಮಾಡ್ತೇನೆ, ನಿಮಗೆ ಅನುಕಂಪ ಏನಾದ್ರೂ ಇದ್ರೆ, ಈ ದೇಶಕ್ಕೆ ಏನು ತ್ಯಾಗವನ್ನು ಮಾಡಿದ್ದಾರೆಯೋ ಅದನ್ನು ಸ್ಮರಿಸಿರಿ. ಕೋವಿಡ್ ಸಂದರ್ಭದಲ್ಲಿ ಸಿಂದಗಿ ಮತಕ್ಷೇತ್ರದ ಬಡಕುಟುಂಬಗಳಿಗೆ ಸ್ಪಂದಿಸಿದ ಶಿವಾನಂದ ಪಾಟೀಲ್ ಕುಟುಂಬದ ನೆನಪು ತ್ಯಾಗಸ್ಮರಣೆ ನಿಮಗಿರಲಿ. ನಿಮ್ಮ ಸ್ಮರಣೆಯಲ್ಲಿ, ನಿಮ್ಮ ಹೃದಯದಲ್ಲಿ ಈ ಸ್ಮರಣೆ ಇದ್ದಲ್ಲಿ, ನಾನು ಜಿಲ್ಲೆಯ ತಾಲೂಕಿನ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಒಪ್ಪಿಗೆ ಇದೆ ಎಂದು ಭಾವಿಸಿ ತೀರ್ಮಾನ ಮಾಡಿದ್ದೇನೆ.
ನನ್ನ ತೀರ್ಮಾನಕ್ಕೆ ಅಂತಿಮವಾಗಿ ನೀವೆಲ್ಲ ಒಪ್ಪಿಗೆ ಕೊಡಬೇಕು. ಇವತ್ತು ಕೇವಲ ಬೂಟಾಟಿಕೆಗೆ ನಾವು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರೆ ಅವರ ಆತ್ಮಕ್ಕೆ ಶಾಂತಿ ದೊರಕುವುದಿಲ್ಲ. ಅವರ ಜತೆಯಲ್ಲಿ ಹಲವಾರು ಕಾರ್ಯಕರ್ತರು, ಸ್ನೇಹಿತರು, ಹಿತೈಷಿಗಳು, ಮುಖಂಡರುಗಳು ಈ ಸಭೆಯಲ್ಲಿ ತೀರ್ಮಾನ ಮಾಡಿ. ನಿಮ್ಮಲ್ಲಿ ಕೈಜೋಡಿಸಿ ಮನವಿ ಮಾಡಿ ನಿಮ್ಮ ಮನವಿಗೆ ಹಾಕುತ್ತಿದ್ದೇನೆ.
ಮತಕ್ಷೇತ್ರವನ್ನ ಲೂಟಿಮಾಡುವ ಶಾಸಕರುಗಳನ್ನ ನೋಡ್ತಾ ಇದ್ದೀರಿ. ನಿಮ್ಮ ಬದುಕನ್ನು ಹಾಳು ಮಾಡುವ ಸರ್ಕಾರಗಳನ್ನು ನೋಡ್ತಾ ಇದ್ದೀರಿ. ಇವತ್ತು ನಾನು ತೀರ್ಮಾನ ಮಾಡಿದ್ದೇನೆ, ಎಲ್ಲಾ ರೀತಿಯ ಚುನಾವಣೆ ನಡೆಸಲು ಒಬ್ಬ ಅಣ್ಣನಾಗಿ ಆ ತಂಗಿಯ ಜೊತೆಗೆ ನಾನಿದ್ದೇನೆ. ಅವರಿಗೆ ರಾಜಕೀಯ ಗೊತ್ತಿಲ್ಲ, ನೀವೆಲ್ಲಾ ತೀರ್ಮಾನ ಮಾಡಿ. ಶಿವಾನಂದ ಪಾಟೀಲ್ ಶಾಸಕನಾಗಲೇಬೇಕು ಎನ್ನುವ ಛಲ ಹೊಂದಿದ್ದರು, ಅದು ಇವತ್ತು ನೆರವೇರದಿದ್ದರೆ, ನಿಜಕ್ಕೂ ಅವರ ಆತ್ಮಕ್ಕೆ ಶಾಂತಿ ದೊರಕುವುದಿಲ್ಲ.
ಇದನ್ನೂ ಓದಿ : Shivanand Patil Somajal: ಸ್ವಗ್ರಾಮದಲ್ಲಿ ಸಿಂದಗಿ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜಾಳ ಅಂತ್ಯಸಂಸ್ಕಾರ
ನಿಮಗೆ ಈ ನಾಡಿನ ಮೇಲೆ, ಈ ಸೈನಿಕನರ ಮೇಲೆ ನಿಜವಾದ ಅಭಿಮಾನ ಇದ್ರೆ. ಈ ವೇದಿಕೆ ಮುಖಾಂತರ ಸಿಂದಗಿ ತಾಲೂಕಿನ ಮಹಾಜನತೆಗೆ ನಾನು ಮನವಿ ಮಾಡ್ತೇನೆ, ಈ ನನ್ನ ಸಹೋದರಿಯನ್ನ ನಿಮ್ಮ ಕುಟುಂಬದ ಮಗಳಾಗಿ ಸ್ವೀಕಾರ ಮಾಡಿ. ನಿಮ್ಮ ಕುಟುಂಬದ ಅಕ್ಕ ಮತ್ತು ತಂಗಿಯಾಗಿ ಸ್ವೀಕಾರ ಮಾಡಿ. ನಿಮ್ಮಲ್ಲಿ ಕೈಜೋಡಿಸಿ ಮನವಿ ಮಾಡ್ತೇನೆ, ಈ ತಂಗಿಯನ್ನ ಕಾಪಾಡುವಂಥಾದ್ದು ನಿಮ್ಮೆಲ್ಲರ ಜವಾಬ್ದಾರಿ. ಅವರ ಬದುಕು ಹಾಗೂ ಶಿವಾನಂದ ಪಾಟೀಲ್ ಸೋಮಜ್ಯಾಳರ ಸೇವೆಯನ್ನ ಉಳಿಸುವಂತಹ ಕೆಲಸವನ್ನ ಸಿಂದಗಿ ಮತಕ್ಷೇತ್ರದ ತಂದೆ – ತಾಯಂದಿರು ಮಾಡಬೇಕು ಎಂದರು.