ವಿಜಯಪುರ: ವಿಜಯಪುರದಲ್ಲಿ ಕಾನೂನು ಬಾಹಿರ ಮಕ್ಕಳ ಸಾಕುವಿಕೆ ಹಾಗೂ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‌ಪಿನ್ ಸ್ಟಾಫ್‌ನರ್ಸ್ ಜಯಮಾಲಾ ಮಾಧ್ಯಮದ ಕ್ಯಾಮೆರಾ ಕಂಡು ಕಿರುಚಾಡಿದ್ದಾಳೆ. ವೈ ಗಿವ್ ದ ಬ್ಯಾಡ್ ರಿಪೋರ್ಟ್ ಎಂದು ಕೂಗಾಡಿದ್ದಾಳೆ.
ವಿಜಯಪುರ ನಗರದ ಅಥಣಿ ಗಲ್ಲಿಯಲ್ಲಿ ಜಯಮಾಲಾ ವಾಸವಿದ್ದು, ಐದು ಮಕ್ಕಳನ್ನು ಅನಧಿಕೃತವಾಗಿ ಸಾಕಿದ ಹಾಗೂ ಮಕ್ಕಳನ್ನು ಸಾಗಾಟ ಮಾಡಿರುವ ಆರೋಪದಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದರು. ತಾಯಿಯಿಂದ, ಪೋಷಕರಿಂದ ಪರಿತ್ಯಕ್ತರಾಗಿರುವ ಐದು ಮಕ್ಕಳನ್ನು ಪೊಲೀಸರು ರಕ್ಷಣೆ ಮಾಡಿ ಸಿದ್ದೇಶ್ವರ ದತ್ತು ಕೇಂದ್ರದಲ್ಲಿ ಇರಿಸಿದ್ದರು.
ಇದನ್ನೂ ಓದಿ | ಮಕ್ಕಳನ್ನು ಕದ್ದು ಮಾರುತ್ತಿದ್ದ ಸ್ಟಾಫ್ ನರ್ಸ್?: ನಾಲ್ಕು ಮಕ್ಕಳ ರಕ್ಷಣೆ
ವಿವಾಹ ಪೂರ್ವದಲ್ಲಿ ಜನನವಾದ ಮಕ್ಕಳ ಸಾಗಾಣಿಕೆ ದಂಧೆ ಆರೋಪದಲ್ಲಿ ಚಡಚಣ ತಾಲೂಕಿನ ಜಿಗಜಿಣಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಪ್ ನರ್ಸ್ ಜಯಮಾಲಾ ವಿರುದ್ಧ ದೂರು ದಾಖಲಾಗಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಜಿಲ್ಲಾ ಮಕ್ಕಳ ಸಹಾಯವಾಣಿ ಯೋಜನಾ ನಿರ್ದೇಶಕಿ ಸುನಂದಾ ತೋಳಬಂದಿ ವಿಜಯಪುರ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಘಟನೆ ಕುರಿತು ತನಿಖೆ ಮುಂದುವರಿದಿದ್ದು, ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧನದ ನಂತರ ವಿಚಾರಣೆ ಪ್ರಕ್ರಿಯೆಯ ಭಾಗವಾಗಿ ಸ್ಥಳ ಪರಿಶೀಲನೆಗೆ ಆಕೆ ವಾಸವಿದ್ದ ಮನೆಗೆ ಪೊಲೀಸರು ಕರೆ ತಂದಿದ್ದರು. ಪೊಲೀಸ್ ವಾಹನದಿಂದ ಇಳಿಯುತ್ತಿದ್ದಂತೆಯೇ ಈಕೆ ಮಾಧ್ಯಮಗಳ ಕ್ಯಾಮೆರಾ ಕಂಡು ಸಿಟ್ಟಾಗಿದ್ದಾಳೆ. ನನ್ನ ಬಗ್ಗೆ ಕೆಟ್ಟದಾಗಿ ಏಕೆ ಬರೆಯುತ್ತೀರಿ ಎನ್ನುತ್ತ ಅರಚಾಡಿದ್ದಾಳೆ.
ಇದನ್ನೂ ಓದಿ | ಇಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿವಿ ಘಟಿಕೋತ್ಸವ, ರಾಜ್ಯಪಾಲ ಗೆಹ್ಲೋಟ್ ಭಾಗಿ