Site icon Vistara News

Love Case : ಪ್ರೇಮಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಕೇಸ್‌; ಯುವತಿ ತಂದೆ ಅರೆಸ್ಟ್‌

Love Case in vijayapura

ವಿಜಯಪುರ: ಕಳೆದ ಮೇ 27ರ ಸೋಮವಾರ ಯುವತಿಯ ಮನೆಯವರು ಯುವಕನ ತಲೆಗೆ ರಾಡ್‌ನಿಂದ ಹೊಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ (Love Case) ಎಂಬ ಆರೋಪ ಕೇಳಿ ಬಂದಿತ್ತು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದ್ದ ಘಟನೆ ಸಂಬಂಧ ಎರಡು ಕುಟುಂಬಗಳು ಠಾಣೆ ಮಟ್ಟಿಲೇರಿದ್ದವು. ಇದೀಗ ಯುವತಿ ತಂದೆಯನ್ನು ಮುದೇಬಿಹಾಳ ಪೊಲೀಸರು ಬಂಧಿಸಿದ್ದಾರೆ.

ರಾಹುಲ್ ತಂದೆ ರಾಮನಗೌಡ ನೀಡಿದ ದೂರಿನನ್ವಯ ಐಶ್ವರ್ಯ ತಂದೆ ಪರಶುರಾಮ ಎಂಬುವವರ ಬಂಧನ ಆಗಿದೆ. ನಮ್ಮ ಮಗನಿಗೆ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ್ದಾರೆ ಎಂದು ರಾಹುಲ್‌ ತಂದೆ ರಾಮನಗೌಡ ಆರೋಪಿಸಿದ್ದರು.

ಏನಿದು ಲವ್‌ ಕೇಸ್‌?

ರಾಹುಲ್ ರಾಮನಗೌಡ ಬಿರಾದಾರ ಹಾಗೂ ಐಶ್ವರ್ಯ ಇಬ್ಬರು ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿ ವಿಚಾರ ತಿಳಿದಾಗ ರಾಹುಲ್‌ಗೆ ಮನೆಗೆ ಬರಲು ಐಶ್ವರ್ಯ ತಂದೆ ಹೇಳಿದ್ದರು. ಆದರೆ ಹುಡುಗನ ಮನೆಯವರು ಬಂದಾಗ ಅವನ ಗುಣ ಸರಿ ಇಲ್ಲ, ನಾನು ಮದುವೆ ಆಗಲ್ಲ ಎಂದು ಐಶ್ವರ್ಯ ನಿರಾಕರಿಸಿದ್ದಳು.

ಹುಡುಗಿ ಮದುವೆಗೆ ನಿರಾಕರಣೆ ಮಾಡಿದ್ದಳು ಎಂದು ರಾಹುಲ್‌ ಕುಟುಂಬದವರು ವಾಪಸ್ ಆಗಿದ್ದರು. ಇತ್ತ ಪ್ರೀತಿಸಿದ ಹುಡುಗಿಯೇ ಬೇಕು ಎಂದು ಹಠ ಹಿಡಿದ ರಾಹುಲ್‌ ಮತ್ತೆ ಹುಡುಗಿ ಮನೆಗೆ ಹೋಗಿದ್ದ. ಮದುವೆ ಆಗದಿದ್ದರೆ ನನ್ನೊಟ್ಟಿಗೆ ಇದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದನಂತೆ. ಇತ್ತ ಐಶ್ವರ್ಯ ತಂದೆ ಮಗಳು ಒಪ್ಪಿದರೆ ಮದುವೆ ಮಾಡಿ ಕೊಡುವುದಾಗಿ ಹೇಳಿ ರಾಜಿ ಪಂಚಾಯ್ತಿ ಮಾಡಿ ವಾಪಸ್ ಕಳುಹಿಸಿದ್ದರು.

ಇದನ್ನೂ ಓದಿ: Assault Case : ಆಸ್ತಿ ವಿಚಾರಕ್ಕೆ ಕಿರಿಕ್‌; ನಡುರಸ್ತೆಯಲ್ಲಿ ಯುವತಿಯನ್ನು ಮನಸೋ ಇಚ್ಛೆ ಥಳಿಸಿದ ಗ್ರಾಪಂ ಸದಸ್ಯ

ಹಲವು ಬಾರಿ ರಾಜಿ ಪಂಚಾಯತಿ ಮಾಡಿದರೂ ಮತ್ತೆ ಮೇ 27ರ ಸೋಮವಾರ ಐಶ್ಚರ್ಯ ಮನೆಗೆ ಹೋಗಿ ಫೋಟೋ ಹಾಕುವುದಾಗಿ ರಾಹುಲ್‌ ಬೆದರಿಕೆ ಹಾಕಿದ್ದಾನೆ. ಐಶ್ವರ್ಯ ಮನೆಗೆ ಹೋಗುವಾಗಲೇ ಪೆಟ್ರೋಲ್ ತೆಗೆದುಕೊಂಡು ಹೋಗಿದ್ದನಂತೆ. ನಮ್ಮ ಕುಟುಂಬದವರನ್ನು ಸುಡಲೆಂದೇ ಪೆಟ್ರೋಲ್ ತಂದಿದ್ದ ಎಂದು ಐಶ್ಚರ್ಯ ತಂದೆ ಪರಶುರಾಮ ಆರೋಪಿಸಿದ್ದರು. ಆತನೇ ನಮಗೆ ಫೋನ್‌ ಮಾಡಿ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿದ್ದ. ಆದರೆ ಮನೆಗೆ ಬಂದಾಗ ಪೆಟ್ರೋಲ್‌‌ ತಂದು ನಮಗೆ ಬೆಂಕಿ ಹಚ್ಚಲು ಯತ್ನಿಸಿದ್ದ. ಪೆಟ್ರೋಲ್‌ ಎರಚಿ ಸುಡಲು ಬಂದಾಗ ನಮ್ಮ ಸಹೋದರ ಮುತ್ತಣ್ಣ, ಆತನ ಪತ್ನಿ ಸೀಮಾ ಹಾಗೂ ಮನೆಯ ಕಾರು ಚಾಲಕ ನೀಲಕಂಠ ಎಂಬುವವರಿಗೆ ಗಾಯವಾಗಿತ್ತು ಎಂದಿದ್ದರು.

ಇದೀಗ ಆರೋಪ ಮಾಡಿದ್ದ ಯುವತಿ ತಂದೆ ಪರಶುರಾಮ‌ ಮದರಿಯನ್ನೇ ಪೊಲೀಸರು ಬಂಧಿಸಿದ್ದಾರೆ. ಪರಶುರಾಮ ಪತ್ನಿ ರೇಖಾ ಮದರಿ ಕೂಡಾ ಪ್ರತಿ ದೂರು ನೀಡಿದ್ದರು. ಆದರೆ ರಾಹುಲ್ ಕುಟುಂಬಸ್ಥರನ್ನು ಬಂಧಿಸಿಲ್ಲ.

ರಾಹುಲ್‌ ಕುಟುಂಬಸ್ಥರು ಹೇಳೋದು ಏನು?

ರಾಹುಲ್‌ ತಂದೆಯ ಆರೋಪವೇ ಬೇರೆಯಾಗಿದೆ. ನಮ್ಮ ಮಗನನ್ನು ಮನೆಗೆ ಕರೆದು ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು. ನಮ್ಮ ಮಗನಿಗೆ ಮೊದಲು ಮೊಬೈಲ್ ಕೊಡು ಎಂದು ಕೇಳಿದ್ದರು. ಮೊಬೈಲ್ ಕೊಡದೇ ಇದ್ದಾಗ ರಾಡ್‌ನಿಂದ ತಲೆಗೆ ಹೊಡೆದು ಪೆಟ್ರೋಲ್ ಸುರಿದಿದ್ದಾರೆ ಎಂದಿದ್ದರು. ಸುಟ್ಟು ಗಾಯದಿಂದ ಬಳಲುತ್ತಿರುವ ರಾಹುಲ್‌ಗೆ ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ರಾಹುಲ್‌ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಶೇ 70ರಷ್ಟು ದೇಹ ಸುಟ್ಟು ಹೋಗಿದೆ ಎಂದು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version