ವಿಜಯಪುರ: ಪ್ರೀತಿ ವಿಚಾರಕ್ಕೆ (Love Case) ಎರಡು ಕುಟುಂಬಗಳು ಠಾಣೆ ಮೆಟ್ಟಿಲೇರಿವೆ. ಪ್ರೀತಿಸಿದ ಹುಡುಗಿಯೇ ಬೇಕು ಎಂದು ಪ್ರೇಯಸಿಯ ಮನೆಗೆ ಹೋದ ಪ್ರಿಯಕರ ಸುಟ್ಟಗಾಯದಿಂದ ಆಸ್ಪತ್ರೆ ಪಾಲಾಗಿದ್ದಾನೆ. ಯುವತಿಯ ಮನೆಯವರೇ ತಲೆಗೆ ರಾಡ್‌ನಿಂದ ಹೊಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಘಟನೆ ನಡೆದಿದೆ.
ರಾಹುಲ್ ರಾಮನಗೌಡ ಬಿರಾದಾರ ಹಾಗೂ ಐಶ್ವರ್ಯ ಇಬ್ಬರು ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿ ವಿಚಾರ ತಿಳಿದಾಗ ರಾಹುಲ್ ಮನೆಯವರಿಗೆ ಐಶ್ವರ್ಯ ತಂದೆ ಬರಲು ಹೇಳಿದ್ದರು. ಆದರೆ ಹುಡುಗನ ಮನೆಯವರು ಬಂದಾಗ ಅವನ ಗುಣ ಸರಿ ಇಲ್ಲ, ನಾನು ಮದುವೆ ಆಗಲ್ಲ ಎಂದು ಐಶ್ವರ್ಯ ನಿರಾಕರಿಸಿದ್ದಳು.
ಯುವತಿಗೆ ಬ್ಲ್ಯಾಕ್‌ಮೇಲ್?
ಹುಡುಗಿ ಮದುವೆಗೆ ನಿರಾಕರಣೆ ಮಾಡಿದ್ದಳು ಎಂದು ರಾಹುಲ್ ಕುಟುಂಬದವರು ವಾಪಸ್ ಆಗಿದ್ದರು. ಇತ್ತ ಪ್ರೀತಿಸಿದ ಹುಡುಗಿಯೇ ಬೇಕು ಎಂದು ಹಠ ಹಿಡಿದ ರಾಹುಲ್ ಮತ್ತೆ ಹುಡುಗಿ ಮನೆಗೆ ಹೋಗಿದ್ದ. ಮದುವೆ ಆಗದಿದ್ದರೆ ನನ್ನೊಟ್ಟಿಗೆ ಇದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದನಂತೆ. ಇತ್ತ ಐಶ್ವರ್ಯ ತಂದೆ ಮಗಳು ಒಪ್ಪಿದರೆ ಮದುವೆ ಮಾಡಿ ಕೊಡುವುದಾಗಿ ಹೇಳಿ ರಾಜಿ ಪಂಚಾಯ್ತಿ ಮಾಡಿ ವಾಪಸ್ ಕಳುಹಿಸಿದ್ದಾರೆ.
ಹಲವು ಬಾರಿ ರಾಜಿ ಪಂಚಾಯತಿ ಮಾಡಿದರೂ ಮತ್ತೆ ನಿನ್ನೆ ಸೋಮವಾರ ಹುಡುಗಿ ಮನೆಗೆ ಹೋಗಿ ಫೋಟೋ ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಐಶ್ವರ್ಯ ಮನೆಗೆ ಹೋಗುವಾಗಲೇ ಪೆಟ್ರೋಲ್ ತೆಗೆದುಕೊಂಡು ಹೋಗಿದ್ದನಂತೆ. ನಮ್ಮ ಕುಟುಂಬದವರನ್ನು ಸುಡಲೆಂದೇ ಪೆಟ್ರೋಲ್ ತಂದಿದ್ದ ಎಂದು ಐಶ್ಚರ್ಯ ತಂದೆ ಆರೋಪಿಸಿದ್ದಾರೆ. ಪೆಟ್ರೋಲ್ ಎರಚಿ ಸುಡಲು ಬಂದಾಗ ನಮ್ಮ ತಮ್ಮ ಹಾಗೂ ತಮ್ಮನ ಹೆಂಡತಿ, ಮನೆ ಕೆಲಸದವನ ಮಗ ಬಿಡಿಸಲು ಬಂದವನಿಗೂ ಬೆಂಕಿ ತಗುಲಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Physical Abuse: 7ನೇ ಕ್ಲಾಸ್ ಹುಡುಗಿ 3 ತಿಂಗಳ ಗರ್ಭಿಣಿ! ಅತ್ಯಾಚಾರವೆಸಗಿದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಅರೆಸ್ಟ್
ಇತ್ತ ರಾಹುಲ್ ತಂದೆಯ ಆರೋಪವೇ ಬೇರೆಯಾಗಿದೆ. ನಮ್ಮ ಮಗನನ್ನು ಮನೆಗೆ ಕರೆದು ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಮ್ಮ ಮಗನಿಗೆ ಮೊದಲು ಮೊಬೈಲ್ ಕೊಡು ಎಂದು ಕೇಳಿದ್ದಾರೆ. ಮೊಬೈಲ್ ಕೊಡದೇ ಇದ್ದಾಗ ರಾಡ್‌ನಿಂದ ತಲೆಗೆ ಹೊಡೆದು ಪೆಟ್ರೋಲ್ ಸುರಿದಿದ್ದಾರೆ ಎಂದಿದ್ದಾರೆ.
ಸದ್ಯ ಸುಟ್ಟು ಗಾಯದಿಂದ ಬಳಲುತ್ತಿರುವ ರಾಹುಲ್‌ಗೆ ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಹುಲ್ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಶೇ 70ರಷ್ಟು ದೇಹ ಸುಟ್ಟು ಹೋಗಿದೆ ಎಂದು ಹೇಳಿದ್ದಾರೆ. ಹುಡುಗಿ ತಂದೆ ಹಾಗೂ ಅವರ ಕುಟುಂಬದವರೇ ನಮ್ಮ ಅಣ್ಣನಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ರಾಹುಲ್ ಸಹೋದರ ಐಶ್ವರ್ಯ ಕುಟುಂಬದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಎರಡು ಕುಟುಂಬದವರು ಪರಸ್ಪರ ದೂರು ನೀಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಎರಡು ಕುಟುಂಬದ ಮೇಲೆ ಎಫ್‌ಐಆರ್ ದಾಖಲಾಗಿದೆ. ಇಬ್ಬರಲ್ಲಿ ತಪ್ಪು ಯಾರದು ಎಂಬುದು ಪೊಲೀಸ್ ತನಿಖೆನಿಂದ ತಿಳಿಯಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ