Site icon Vistara News

Murder Case : ಮನೆಯಲ್ಲಿರಲ್ಲ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ತಿಲ್ಲ ಎಂದು ಪತ್ನಿ, ಅತ್ತೆಯನ್ನೇ ಹೊಡೆದು ಕೊಂದ ಧೂರ್ತ

Man kills wife in Vijayapura

ವಿಜಯಪುರ: ಕೌಟುಂಬಿಕ ಕಲಹದ (Familiy dispute) ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ‌ ಹಾಗೂ ಪತ್ನಿಯ ತಾಯಿಯನ್ನು ಕೊಲೆ‌ (Man kills wife and Mother in law) ಮಾಡಿದ್ದಾನೆ. ವಿಜಯಪುರ ನಗರದ ನವಬಾಗ್ ಪ್ರದೇಶದಲ್ಲಿ ಘಟನೆ ನಡೆದಿದ್ದು, ಮಲ್ಲಿಕಾರ್ಜುನ ಮೇತ್ರಿ ಎಂಬಾತನೇ ಕೊಲೆಗಾರ (Murder case). ಅವನು ತನ್ನ ಪತ್ನಿ ರೂಪಾ ಮೇತ್ರಿ (32) ಹಾಗೂ ಅತ್ತೆ ಕಲ್ಲವ್ವ (55) ಅವರನ್ನು ಕೊಲೆ ಮಾಡಿದ್ದಾನೆ.

ಪತ್ನಿಯು ಸಾಮಾಜಿಕ ಚಟುವಟಿಕೆಗಳಲ್ಲೇ ವ್ಯಸ್ತಳಾಗಿರುತ್ತಾಳೆ, ಮನೆ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿರುವ ಕಾರಣ. ಆದರೆ, ಇದಕ್ಕೆ ಬೇರೆ ಬೇರೆ ಕಾರಣವೂ ಇರಬಹುದು ಎಂದು ಹೇಳಲಾಗುತ್ತಿದೆ.

ಮಲ್ಲಿಕಾರ್ಜುನ ನವಭಾಗ್ ಪ್ರದೇಶದ ಭಗವಾನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ಇದ್ದ. ಕಳೆದ ಆರು ತಿಂಗಳುಗಳ ಹಿಂದಷ್ಟೇ ನವಭಾಗ್ ಪ್ರದೇಶಕ್ಕೆ ಈ ಕುಟುಂಬ ಬಂದಿದೆ. ಮನೆಯಲ್ಲಿ ಮಲ್ಲಿಕಾರ್ಜುನ, ಆತನ ಪತ್ನಿ ರೂಪಾ ಮತ್ತು ಅತ್ತೆ ಕಲ್ಲವ್ವ ಇದ್ದರು. ದಂಪತಿಗೆ ಮೂರು ಜನ ಮಕ್ಕಳು. ಶಾಲೆಗೆ ಹೋಗುತ್ತಿದ್ದಾರೆ.

Murder at Vijayapura

ರೂಪಾ ಮಹಿಳಾ ಸೇರಿದಂತೆ ನಾನಾ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು, ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಆದರೆ, ಇದುವೇ ಅವರಿಗೆ ಮುಳುವಾಗಿದೆ. ಪತ್ನಿಯ ಸಾಮಾಜಿಕ ಚಟುವಟಿಕೆಗಳನ್ನು ಮಲ್ಲಿಕಾರ್ಜುನ ಸಹಿಸುತ್ತಿರಲಿಲ್ಲ. ಈ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳ ಆಗುತ್ತಿತ್ತು ಎನ್ನಲಾಗಿದೆ.

ಆಕೆಯ ಸಾಮಾಜಿಕ ಚಟುವಟಿಕೆಗಳನ್ನು ನಿಲ್ಲಿಸಬೇಕು ಎಂಬ ಅಭಿಪ್ರಾಯ ಹೊಂದಿದ್ದ ಆತ ನೀನು ಸರಿಯಾಗಿ ಮನೆ ನಡೆಸುತ್ತಿಲ್ಲ. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ, ಮನೆಯಲ್ಲಿ ಯಾವ ಕೆಲಸವನ್ನೂ ಮಾಡುತ್ತಿಲ್ಲ ಎಂದು ದೂರುತ್ತಿದ್ದ. ಇದಕ್ಕೆ ಪೂರಕವಾಗಿ ಮಹಿಳಾ ಹಾಗೂ ವಿವಿಧ ಸಂಘಟನೆ‌ಗಳ ಕೆಲಸದ ಕಾರಣ ಸದಾ ಮನೆಯಾಚೆ ಇರುತ್ತಿದ್ದರು ರೂಪಾ. ಇದರಿಂದ ರೋಸಿ ಹೋಗಿದ್ದ ಮಲ್ಲಿಕಾರ್ಜುನ ಈ ಅತಿರೇಕದ ಕ್ರಮಕ್ಕೆ ಮುಂದಾಗಿದ್ದಾನೆ.

ಭಾನುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಮಲ್ಲಿಕಾರ್ಜುನ ಕಟ್ಟಿಗೆಯಿಂದ ತಲೆಗೆ ಹೊಡೆದು ಪತ್ನಿ ಹಾಗೂ ಅತ್ತೆಯನ್ನು ಕೊಲೆ ಮಾಡಿದ್ದಾನೆ. ಕೊಲೆಗೈದ ಬಳಿಕ ಗಾಂಧಿಚೌಕ್ ಪೊಲೀಸ್ ಠಾಣೆಗೆ ತೆರಳಿ ಶರಣಾದ ಮಲ್ಲಿಕಾರ್ಜುನನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : Murder Case : ಪರ ಪುರುಷನ ಮೋಹಿಸಿದವಳ ಕತ್ತು ಸೀಳಿದ ಪತಿ!

ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ತಾಯಿಯನ್ನು ಕಳೆದುಕೊಂಡ ಮಕ್ಕಳ ರೋದನ ಮುಗಿಲು ಮುಟ್ಟಿದೆ. ಇದುವರೆಗೆ ರೂಪಾ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಸಿಟ್ಟು ಕಾರಿಕೊಂಡಿರುತ್ತಿದ್ದ ಈ ಧೂರ್ತ ಇನ್ನು ಈ ಮಕ್ಕಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾನೆ ನೋಡಬೇಕು ಎಂದು ಅಕ್ಕಪಕ್ಕದ ಮನೆಯವರು ಹೇಳುತ್ತಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಮನೆಯ ಗೇಟಿನಲ್ಲಿರುವ ಮಕ್ಕಳ ಸ್ಕೂಲ್‌ ಬ್ಯಾಗ್‌ಗಳು ತಾಯಿಯನ್ನು ಕಳೆದುಕೊಂಡ ಮಕ್ಕಳ ಅನಾಥ ಸ್ಥಿತಿಯನ್ನು ತೋರಿಸುತ್ತಿವೆ.

Exit mobile version