ವಿಜಯಪುರ: ಇತ್ತೀಚೆಗೆ ಭಾರತೀಯರು ಜಗತ್ತಿನ ನಾನಾ ಭಾಗಗಳಲ್ಲಿ ಭಾರತೀಯ ಮೂಲದವರು (People from Indian Origin) ಅಧಿಕಾರ ಸ್ಥಾನಕ್ಕೇರುತ್ತಿದ್ದಾರೆ. ನಿರ್ಣಾಯಕ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ. ಇದೀಗ ಈ ಸಾಲಿಗೆ ವಿಜಯಪುರ ಮೂಲದ ನವೀನ್ ಹಾವಣ್ಣನವರ್ ಸೇರಿದ್ದಾರೆ. ನವೀನ್ ಹಾವಣ್ಣನವರ್ (Naveen Havannanavar) ಅವರು ಅಮೆರಿಕಾದ ನ್ಯೂಯಾರ್ಕ್‌ನ ರೋಚೆಸ್ಟರ್ ಜಿಲ್ಲೆಯ ಪೀಟ್ಸ್ ಫೋರ್ಡ್ ಪ್ರದೇಶದ ಕೌನ್ಸಿಲರ್ (American Councilor) ಆಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಕಳೆದ 14 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿರುವ ನವೀನ್ ಅವರು ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ (Democratic Party) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನವೀನ್ ಅವರಿಗೆ ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ವಿರುದ್ಧ 33 ಮತಗಳ ಗೆಲುವು ಸಿಕ್ಕಿದೆ.
ಚುನಾವಣೆಯ ಮತ ಎಣಿಕೆಯ ಅಂತ್ಯದಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಕೇಟ್ ಬೊಹ್ನೆ ಮುಂಜಿಂಗರ್ 4,233 ಮತಗಳನ್ನು ಪಡೆದಿದ್ದರೆ ಡೆಮಾಕ್ರಟಿಕ್ ಅಭ್ಯರ್ಥಿ ನವೀನ್ ಹಾವಣ್ಣನವರ 4,266 ಮತಗಳನ್ನು ಪಡೆದಿದ್ದರು. ಇಲ್ಲಿ ಇಷ್ಟು ಕಡಿಮೆ ಅಂತರ ಇರುವಾಗ ಮರು ಎಣಿಕೆ ನಡೆಯುತ್ತದೆ. ಹೀಗಾಗಿ ಮರು ಎಣಿಕೆ ನಡೆಯಿತು. ಆಗಲೂ ಅಂತ ಅಷ್ಟೇ ಇತ್ತು. ಹೀಗಾಗಿ ಪಿಟ್ಸ್‌ಫೋರ್ಡ್‌ನಲ್ಲಿ ಟೌನ್ ಬೋರ್ಡ್ ಕೌನ್ಸಿಲರ್ ಸ್ಥಾನಕ್ಕೆ ನವೀನ್ ಅವರ ಆಯ್ಕೆಯನ್ನು ಘೋಷಿಸಲಾಯಿತು. ನವೀನ್ ಅವರು ಕೌನ್ಸಿಲರ್ ಆಗಿ ಪ್ರಮಾಣವಚನ ಸ್ವೀಕರಿಸಿದರು.
ವಿಜಯಪುರದಿಂದ ಅಮೆರಿಕಕ್ಕೆ ನವೀನ್ ಪಯಣ
ತಂದೆ ಪರಪ್ಪ, ತಾಯಿ ರೇಣುಕಾ ಅವರ ಪುತ್ರನಾಗಿರುವ ನವೀನ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ವಿಜಯಪುರದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಪಡೆದಿದ್ದರು. ಹಾಸನದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯು ಶಿಕ್ಷಣ ಮುಗಿಸಿದ ಅವರು ಕಲಬುರಗಿಯ ಶರಣ ಬಸವೇಶ್ವರ ಕಾಲೇಜಿನಲ್ಲಿ ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದರು. ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದ ಬಳಿಕ ಅವರು 2009-10 ರಲ್ಲಿ ಅಮೆರಿಕಕ್ಕೆ ಹಾರಿದ್ದರು. ನವೀನ್ ಹಾವಣ್ಣನವರ್ ಅವರು ಅಮೆರಿಕದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.
ಈ ನಡುವೆ ನವೀನ್ ಅವರು ಅಮೆರಿಕದವರೆ ಆದ ಕ್ಯಾಥರಿನ್ ಅವರನ್ನು ಮದುವೆ ಮಾಡಿಕೊಂಡಿದ್ದು, ಇಬ್ಬರು ಮಕ್ಕಳೊಂದಿಗೆ ಅಲ್ಲಿನ ನಾಗರಿಕರಾಗಿದ್ದಾರೆ.
ನವೀನ್ ಅವರು ಚುನಾವಣೆಯಲ್ಲಿ ಜಯ ಸಾಧಿಸಿ ಕೌನ್ಸಿಲರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಜಯಪುರದಲ್ಲಿರುವ ಅವರ ಕುಟುಂಬದ ಸಂಭ್ರಮಕ್ಕೆ ಕಾರಣವಾಗಿದೆ. ಹಳ್ಳಿಯ ಹುಡುಗನೊಬ್ಬ ಅಮೆರಿಕದಲ್ಲಿ ಕೌನ್ಸಿಲರ್ ಆಗಿ ನೇಮಕಗೊಂಡಿದ್ದು ಭಾರಿ ದೊಡ್ಡ ಸಾಧನೆಯಾಗಿದೆ. ಅವರಿಗೆ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಕುಟುಂಬದವರು ಹಾರೈಸಿದ್ದಾರೆ.