ವಿಜಯಪುರ: ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಯ (Ayodhya Rama Mandir) ಸಂದರ್ಭದಲ್ಲಿ ರಾಜ್ಯದಲ್ಲಿ ಗೋಧ್ರಾ ಮಾದರಿಯ ಘಟನೆ (Godhra like Incident) ಮರುಕಳಿಸಬಹುದು ಎಂಬ ಹಿರಿಯ ಕಾಂಗ್ರೆಸ್ ನಾಯಕ, ಮೇಲ್ಮನೆ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿಕೆಯನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Pejavara matt Sri Vishwaprasanna theertha swamiji) ಅವರು ಖಂಡಿಸಿದ್ದಾರೆ. ಮಾತ್ರವಲ್ಲ, ಇಂಥ ಭಯ ಹುಟ್ಟಿಸುವ ಹೇಳಿಕೆ ನೀಡುತ್ತಿರುವ ಬಿ.ಕೆ. ಹರಿಪ್ರಸಾದ್ (BK Hariprasad) ಅವರೇ ಭಯೋತ್ಪಾದಕ ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ʻʻಈ ರೀತಿ ಹೇಳಿಕೆ ನೀಡುವವರು ಭಯೋತ್ಪಾದಕರು. ಹೇಳಿಕೆಗಳ ಮೂಲಕ ಭಯೋತ್ಪಾದನೆ ಮಾಡಬಾರದು. ಅವರು ಹೇಳಿಕೆಗಳನ್ನು ನೀಡಿ ಭಯ ಹುಟ್ಟಿಸುತ್ತಿದ್ದಾರೆʼʼ ಎಂದು ಪೇಜಾವರ ಶ್ರೀ ವಾಗ್ದಾಳಿ ನಡೆಸಿದರು. ವಿಜಯಪುರದ ರಾಣಿ ಬಗೀಚ್ ಏರಿಯಾದ ದಲಿತರ ಮನೆಗಳಿಗೆ ಭೇಟಿ ನೀಡಿ ರಾಮ ಮಂದಿರದ ಮಂತ್ರಾಕ್ಷತೆ ವಿತರಿಸಿದ ಬಳಿಕ ಅವರು ಮಾತನಾಡಿದರು. ವಿಜಯಪುರದ ಮಾಜಿ ಉಪಮೇಯರ್ ಗೋಪಾಲ್ ಘಟಕಾಂಬಳೆ ಎಂಬವರ ಮನೆಯಲ್ಲಿ ಅವರು ಪಾದಪೂಜೆ ಸ್ವೀಕರಿಸಿದರು.
ಗೋಧ್ರಾ ಮಾದರಿಯ ಘಟನೆ ನಡೆಯಲಿದೆ ಎಂಬ ಮಾಹಿತಿ ಸ್ಪಷ್ಟವಾಗಿ ಇದ್ದರೆ ಅವರು ಯಾಕೆ ನೇರವಾಗಿ ಇಲಾಖೆಗಳಿಗೆ ಹೋಗಿ ಮಾಹಿತಿ ನೀಡಿಲ್ಲ? ಹಾಗಿದ್ದರೆ ಇವರು ಯಾರನ್ನು ರಕ್ಷಣೆ ಮಾಡ್ತಿದ್ದಾರೆ? ಕೇಳಿದ್ರೆ ಹೇಳ್ತೀವಿ ಅನ್ನೋದು ವಿಧ್ವಂಸಕ ಕೃತ್ಯ ನಡೆಯಲಿ ಎಂದು ಹೇಳಿದ ಹಾಗಾಯಿತಲ್ಲ? ಹಾಗಿದ್ದರೆ ಇವರು ವಿಧ್ವಂಸಕ ಕೃತ್ಯ ನಡೆಸುವವರನ್ನು ರಕ್ಷಣೆ ಮಾಡ್ತಿದ್ದಾರಾ?ʼʼ ಎಂದು ಪೇಜಾವರ ಶ್ರೀ ಪ್ರಶ್ನಿಸಿದರು.
ಇದನ್ನೂ ಓದಿ : Ram Mandir: ರಾಮಮಂದಿರ ಲೋಕಾರ್ಪಣೆ ವೇಳೆ ರಾಜ್ಯದಲ್ಲಿ ಗೋದ್ರಾ ಮಾದರಿ ದಾಳಿ ಸಾಧ್ಯತೆ: ಬಿ.ಕೆ. ಹರಿಪ್ರಸಾದ್
ದೇಶವನ್ನೇ ಹೆದರಿಸುತ್ತಿರುವ ಬಿ.ಕೆ ಹರಿಪ್ರಸಾದ್
ʻʻಜವಾಬ್ದಾರಿ ಸ್ಥಾನದಲ್ಲಿ ಇರುವವರು ಈ ರೀತಿ ಮಾತನಾಡಬಾರದು. ಈಗ ಅವರ ಹೇಳಿಕೆಯಿಂದ ಭಯ ಹುಟ್ಟಿದೆ> ಹಾಗಿದ್ದರೆ ಈಗ ಭಯೋತ್ಪಾದಕರು ಯಾರು? ಯಾರು ಹೇಳ್ತಿದ್ದಾರೋ ಅವರು ಸ್ವತಃ ಭಯೋತ್ಪಾದಕರು. ರಾಮ ಭಕ್ತರನ್ನು ಹೆದರಿಸುವ ನೆಪದಲ್ಲಿ, ಇಡೀ ದೇಶವನ್ನೇ ಹೆದರಿಸುತ್ತಿದ್ದಾರೆ. ಒಂದು ವೇಳೆ ಅವರು ಹೇಳಿದಂತೆ ಕೃತ್ಯ ನಡೆದರೆ ರಾಮಭಕ್ತರ ಮೇಲೆ ಅಷ್ಟೇ ಅಲ್ಲಾ, ಎಲ್ಲರ ಮೇಲೆ ಪರಿಣಾಮ ಬೀರುತ್ತದೆʼʼ ಎಂದು ಪೇಜಾವರ ಶ್ರೀ ಹೇಳಿದರು.
ಬಿ.ಕೆ. ಹರಿಪ್ರಸಾದ್ ಅವರು ತಮಗೆ ಮಾಹಿತಿ ಇದ್ದರೆ ಅದನ್ನು ಬಹಿರಂಗ ಪಡೆಸಬೇಕು. ಸಂಬಂಧಪಟ್ಟವರಿಗೆ ಹೋಗಿ ಮಾಹಿತಿ ಕೊಡಬೇಕು. ಅದನ್ನು ಬಿಟ್ಟು ಹೀಗೆ ಆಗುತ್ತೆ ಎಂದು ಭಯ ಹುಟ್ಟಿಸೋದು ಅಲ್ಲ. ಹೀಗೆ ಮಾಡುವ ಮೂಲಕ ಅವರು ಯಾರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ? ರಾಮಭಕ್ತರಿಗೋ ದುಷ್ಕರ್ಮಿಗಳಿಗೋ ಎಂದು ಆಕ್ರೋಶ ಹೊರಹಾಕಿದರು.
ಹುಬ್ಬಳ್ಳಿ ಪ್ರಕರಣದಲ್ಲಿ ಸರ್ಕಾರದ ನಡೆ ಸರಿ ಇಲ್ಲ ಎಂದ ಪೇಜಾವರ ಶ್ರೀ
ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂದಿಸಿ 31 ವರ್ಷಗಳ ಬಳಿಕ ಕರಸೇವಕ ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿರುವುದು ತಪ್ಪು ಸಂದೇಶವನು ನೀಡುತ್ತಿದೆ ಎಂದು ಶ್ರೀಗಳು ಹೇಳಿದರು.
ʻʻತಪ್ಪು ಮಾಡಿದ್ರೆ ತಪ್ಪಿತಸ್ಥರಿದ್ದರೆ ಶಿಕ್ಷೆ ಕೊಡುವುದು ಸರಿ. ಆದರೆ ರಾಮ ಮಂದಿರ ಲೋಕಾರ್ಪಣೆಯ ಸಂದರ್ಭದಲ್ಲಿ ಈ ಘಟನೆ ನಡೆಯುತ್ತಿರುವಂತಹದು ಸರಿಯಲ್ಲ. ಇದು ತಪ್ಪು ಸಂದೇಶ ನೀಡುತ್ತಿದೆ. ಹಾಗಾಗಿ ಈ ಬಗ್ಗೆ ಸರಕಾರ ಜಾಗೃತವಾಗಿ ಇರಬೇಕು ಎಂಬುದು ನನ್ನ ಸಲಹೆʼʼ ಎಂದರು.
ಲೋಕಾರ್ಪಣೆಗೆ ಆಹ್ವಾನ ಇಲ್ಲ ಎನ್ನುವುದು ಸರಿಯಲ್ಲ
ರಾಮಮಂದಿರ ಉದ್ಘಾಟನೆಗೆ ನಮಗೆ ಆಹ್ವಾನ ಇಲ್ಲ ಎಂಬ ವಿರೋಧ ಪಕ್ಷಗಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ʻʻಇಂಥ ನಡವಳಿಕೆ ಸರಿಯಲ್ಲ. ರಾಮ ರಾಜಕೀಯ ವಸ್ತುವಾಗಿಲ್ಲ. ಶ್ರೀರಾಮ ಮಂದಿರ ವ್ಯಾಜ್ಯ ಹುಟ್ಟಿಕೊಂಡಿದ್ದು 500 ವರ್ಷಗಳ ಹಿಂದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾಯಿತು. ದೇಶದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಸರ್ಕಾರ ಮಾಡಿದ್ದು ಯಾರು? ಶ್ರೀರಾಮ ಮಂದಿರ ಮಾಡಿಕೊಡಿ ಎಂದು ಅವರ ಬಳಿ ಹಲವಾರು ಬಾರಿ ಕೇಳಲಾಗಿತ್ತು. ತಾವು ಮಾಡಲ್ಲ ಯಾರಾದರೂ ಮಾಡಿದರೆ ಅದಕ್ಕೂ ಅಡ್ಡಗಾಲು ಹಾಕುತ್ತಾರೆʼʼ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಪೇಜಾವರ ಶ್ರೀಗಳು ಗುಡುಗಿದರು.
ವಿವಾದಿತ ಸ್ಥಳದಲ್ಲಿ ಶ್ರೀರಾಮನ ಪೂಜೆಗೆ ಅವಕಾಶ ಕೊಟ್ಟಿದ್ದೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂಬ ಕಾಂಗ್ರೆಸ್ಸಿಗರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಅದರಿಂದ ಏನು ಈವಾಗ ಎಂದು ಕೇಳಿದರು.
ಪಾಕಿಸ್ತಾನ ಮಾಡಲು ಯತೀಂದ್ರ ಸಿದ್ದರಾಮಯ್ಯ ಸಿದ್ಧತೆ?
ʻʻಬಿಜೆಪಿ ಹಾಗೂ ಆರ್ ಎಸ್ ಎಸ್ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುತ್ತಿದ್ದಾರೆ. ಹೀಗೆ ಮಾಡಿದರೆ ಭಾರತ ಮತ್ತೊಂದು ಪಾಕಿಸ್ತಾನವಾಗಲಿದೆʼʼ ಎಂಬ ಸಿಎಂ ಸಿದ್ದರಾಮಯ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻಭಾರತವನ್ನು ಹಿಂದೂರಾಷ್ಟ್ರ ಮಾಡಿದರೆ ಪಾಕಿಸ್ತಾನ ಮಾಡಲು ಅವರು ಸಿದ್ದತೆ ನಡೆಸುತ್ತಿದ್ದಾರೋ ಏನೋ? ಅಂತಹ ಸಿದ್ಧತೆ ಇಲ್ಲಿ ನಡೆಯುತ್ತಿದೆ ಎಂಬುದರ ಮುನ್ಸೂಚನೆ ಕೊಡುತ್ತಿದ್ದಾರೆ ಅವರು. ಅವರ ಹೇಳಿಕೆ ಸರಿಯಲ್ಲ ಎಂದʼʼ ಎಂದರು.
ದೊಡ್ಡ ಮೊತ್ತದ ದೇಣಿಕೆ ಕೊಟ್ಟವರಿಗೇ ಆಹ್ವಾನ ಕೊಟ್ಟಿಲ್ಲ ಎಂದ ಶ್ರೀಗಳು
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಲಕ್ಷ ಲಕ್ಷ ದೇಣಿಗೆ ಕೊಟ್ಟ ಸಚಿವರು ಶಾಸಕರುಗಳಿಗೆ ಗಣ್ಯರಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನವಿಲ್ಲ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೊಡ್ಡ ಮಟ್ಟದ ದೇಣಿಗೆ ನೀಡಿದವರು ತುಂಬಾ ಜನರಿದ್ದಾರೆ. ಎಲ್ಲರನ್ನು ಕರೆದು ಕೂಡಿಸುವ ವ್ಯವಸ್ಥೆ ಹೇಗೆ? ಪ್ರತಿನಿಧಿಗಳಾಗಿ ಕೆಲವರನ್ನು ಕರೆದಾಗ ಕಾರ್ಯಕ್ರಮ ನಡೆಸಲು ಸಾಧ್ಯ. ಆ ದಿನ ಬರಲಾಗಲ್ಲ ಆದರೆ
ಮುಂದಿನ ದಿನಗಳಲ್ಲಿ ಎಲ್ಲರೂ ಬರಬಹುದು. ವಿಶ್ವಹಿಂದೂ ಪರಿಷತ್ ನ ಹಿರಿಯ ಸದಸ್ಯರಿಗೂ ಕೂಡಾ ಈಗ ಬರಬೇಡಿ ಎಂಬ ಸಂದೇಶ ಹೋಗಿದೆ ಎಂದು ಪೇಜಾವರ ಶ್ರೀಗಳು ಹೇಳಿದರು.