ವಿಜಯಪುರ: ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ (Road Accident) ಗುದ್ದಿದೆ. ಪರಿಣಾಮ ಸ್ಥಳದಲ್ಲೆ ಇಬ್ಬರು ಮೃತಪಟ್ಟಿದ್ದಾರೆ. ಮಲ್ಲು ಡೋಲಗೊಂಡ (32), ಪರಶು ಮಿಣಜಿಗಿ(26) ಸ್ಥಳದಲ್ಲೆ ಮೃತಪಟ್ಟ ದುರ್ದೈವಿಗಳು. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಇಂಗಳೇಶ್ವರ ಮಾರ್ಗ ಮಧ್ಯದಲ್ಲಿ ಅಪಘಾತ ನಡೆದಿದೆ.
ತಡರಾತ್ರಿ ಶಿಫ್ಟ್ ಕಾರಿನಲ್ಲಿ ಬರುವಾಗ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಐವರ ಪೈಕಿ ಮುಂದೆ ಕುಳಿತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಸ್ಥಿತಿ ಗಂಭೀರವಾಗಿದೆ. ಇವರೆಲ್ಲೂ ಮೂಲತಃ ಇಂಗಳೇಶ್ವರ ಗ್ರಾಮದವರು ಎನ್ನಲಾಗಿದೆ.
ರೇವಣಸಿದ್ದ ಶೇಕಣ್ಣಿ (27) ಎಂಬುವವರ ಸ್ಥಿತಿ ಗಂಭೀರವಾಗಿದ್ದು, ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಛಿದ್ರ ಛಿದ್ರಗೊಂಡಿದೆ. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಶಿವಮೊಗ್ಗದಲ್ಲಿ ಹಳ್ಳಕ್ಕೆ ಪಲ್ಟಿ ಹೊಡೆದ ಕಾರು
ಶಿವಮೊಗ್ಗ ತಾಲೂಕಿನ ಆಯನೂರು ಬಳಿ ಕಾರೊಂದು ಪಲ್ಟಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಆಯನೂರು ಬಳಿ ಸೇತುವೆ ಪಕ್ಕದ ಹಳ್ಳಕ್ಕೆ ಪಲ್ಟಿಯಾಗಿದೆ. ಕಾರಿನಲ್ಲಿದ್ದ ಮೂವರು ಮಹಿಳೆಯರು ಮತ್ತು ಓರ್ವ ಬಾಲಕನಿಗೆ ಗಾಯವಾಗಿದ್ದು, ಶಿವಮೊಗ್ಗ ಮಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿತ್ರದುರ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಅಪಘಾತಕ್ಕೀಡಾಗಿದೆ. ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರನ್ನು ಮೇಲಕ್ಕೆತ್ತಿದ್ದಾರೆ.
ಇದನ್ನೂ ಓದಿ: Road Accident: ಜನ್ಮದಿನದಂದೇ ಯುವತಿಯ ಜೀವ ತೆಗೆದ ಜವರಾಯ; ಕಾರು ಚಾಲಕ ಪರಾರಿ
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್
ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಮೊಗ್ಗ ತಾಲೂಕಿನ ಪಿಳ್ಳಂಗೆರೆಯಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಖಾಸಗಿ ಬಸ್ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ, ನಿಯಂತ್ರಣ ತಪ್ಪಿ ವಿದ್ಯುತ್ ಕಂಬ ಡಿಕ್ಕಿ ಹೊಡೆದ ನಂತರ ಓಮ್ನಿ ಕಾರಿಗೂ ಗುದ್ದಿದೆ. ಬಸ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ.
ಎಲ್ಲರನ್ನೂ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಹೊಡೆಯುತ್ತಿದ್ದಂತೆ ವಿದ್ಯುತ್ ತಂತಿ ಬಸ್ ಮೇಲೆ ಬಿದ್ದಿದೆ. ತಂತಿಯಲ್ಲಿ ಇನ್ನೂ ವಿದ್ಯುತ್ ಪ್ರವಹಿಸುತ್ತಿತ್ತು. ದಾರಿಯಲ್ಲಿ ತೆರಳುತ್ತಿದ್ದ ವಾಹನ ಸವಾರು ಕೂಡಲೆ ರಕ್ಷಣೆಗೆ ಧಾವಿಸಿದ್ದಾರೆ. ವಿದ್ಯುತ್ ಪ್ರವಹಿಸುತ್ತಿರುವುದನ್ನು ಗಮನಿಸಿ ಕೂಡಲೆ ಮೆಸ್ಕಾಂಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಇದರಿಂದಾಗಿ ದೊಡ್ಡದೊಂದು ಅನಾಹುತ ತಪ್ಪಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತಿರುಪತಿಗೆ ತರಕಾರಿ ಸಾಗಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿ
ತಿರುಪತಿಗೆ ತರಕಾರಿ ಸಾಗಿಸುತ್ತಿದ್ದ ಗೂಡ್ಸ್ ವಾಹನವೊಂದು ಪಲ್ಟಿ ಹೊಡೆದಿದೆ. ಚಿಕ್ಕಬಳ್ಳಾಪುರದಿಂದ ತಿರುಪತಿ ದೇವಸ್ಥಾನಕ್ಕೆ ತರಕಾರಿ ಸಾಗಿಸುತ್ತಿದ್ದಾಗ ಈ ಅಪಘಾತ ನಡೆದಿದೆ. ಚಿಂತಾಮಣಿ ನಗರದ ತಿಮ್ಮಸಂದ್ರ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಗೂಡ್ಸ್ ಗಾಡಿ ಚಾಲಕ ಹಾಗು ಕ್ಲೀನರ್‌ಗೆ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಘಟನೆ ನಡೆದಿದೆ.
ನಿಂತಿದ್ದ ಆಟೋಗೆ ಬಸ್ ಡಿಕ್ಕಿ; ಇಬ್ಬರು ಗಂಭೀರ
ನಿಂತಿದ್ದ ಆಟೋಗೆ ಬಸ್ ಡಿಕ್ಕಿ ಹೊಡೆದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಯಾದಗಿರಿ ಯೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯಾದಗಿರಿ ತಾಲೂಕಿನ ಯರಗೋಳ ಗ್ರಾಮದ ಹೊರಭಾಗದ ಚೆಕ್ ಪೋಸ್ಟ್ ಹತ್ತಿರ ಅಪಘಾತ ಸಂಭವಿಸಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದಆಟೋಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಗುದ್ದಿದೆ. ಕಲಬುರಗಿಯಿಂದ ಯಾದಗಿರಿ ಕಡೆ ಬರುತ್ತಿದ್ದ ಬಸ್ ಚಾಲಕನ ನಿರ್ಲಕ್ಷ್ಯದಿಂದಲೇ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ