ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ (Road Accident) ಮಿನಿ ಟ್ರಕ್ ವಾಹನ ಪಲ್ಟಿಯಾಗಿದ್ದು, 30ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮನ್ನಾಪುರ ಗ್ರಾಮದಲ್ಲಿ ಅಪಘಾತ ನಡೆದಿದೆ.
ಗೋಲಗೇರಿ ಗ್ರಾಮದ ಗೊಲ್ಲಾಳೇಶ್ವರನ ದೇವರ ಬಳಿ ಮಗುವಿನ ಜವಳ ತೆಗೆಯುವ ಕಾರ್ಯಕ್ರಮಕ್ಕೆ ಹಿಕ್ಕಣಗುತ್ತಿಯಿಂದ ಗೋಲಗೇರಿಗೆ ಹೊರಟಿದ್ದರು. ಈ ವೇಳೆ ಮನ್ನಾಪುರ ಬಳಿ ಅಪಘಾತ ಸಂಭವಿಸಿದೆ. ಗಾಯಾಳುಗಳಿಗೆ ಸಿಂದಗಿ ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. 10ಕ್ಕೂ ಅಧಿಕ ಜನರಿಗೆ ಗಂಭೀರವಾಗಿದೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಲಿಸುತ್ತಿದ್ದ ಬಸ್‌ನಿಂದು ಬಿದ್ದ ವಿದ್ಯಾರ್ಥಿ
ಚಲಿಸುತ್ತಿದ್ದ ಬಸ್‌ನಿಂದ ಬಿದ್ದ ವಿದ್ಯಾರ್ಥಿ ಹಿಂಬದಿ ಚಕ್ರಕ್ಕೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದಾನೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬನ್ನಿಹಟ್ಟಿ ಪಿ ಎ ಗ್ರಾಮದಲ್ಲಿ ಘಟನೆ ನಡೆದಿದೆ. ಸರ್ಕಾರಿ ಬಸ್ ಮೂಲಕ ಶಾಲೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಸಿಂದಗಿ ಪಟ್ಟಣದ ಎಚ್‌ಜಿ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಸಂದೀಪ ಶಿವಪ್ಪ ಗಿಡ್ಡನಗೋಳ ಎಂಬಾತ ಗಂಭೀರ ಗಾಯಗೊಂಡವರು. ಸಂದೀಪ್‌ನನ್ನು ಸಿಂದಗಿ ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಈ ಘಟನೆ ಖಂಡಿಸಿ ಬನ್ನಿಹಟ್ಟಿ ಪಿ ಎ ಹಾಗೂ ಸಿಂದಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ಇದನ್ನೂ ಓದಿ: Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ
ಬೆಂಗಳೂರಿನಲ್ಲಿ ಕಸದ ಲಾರಿಯ ಆರ್ಭಟಕ್ಕೆ ಇಬ್ಬರು ಟೆಕ್ಕಿಗಳು ಬಲಿ
ಬೆಂಗಳೂರು: ರಾಜಧಾನಿಯಲ್ಲಿ ಬಿಬಿಎಂಪಿ ಕಸದ ಲಾರಿ (BBMP Lorry) ಮತ್ತೆರಡು ಬಲಿ (Road Accident) ಪಡೆದುಕೊಂಡಿದೆ. ನಗರದ ಹೃದಯ ಭಾಗದ ಕೆಆರ್ ಸರ್ಕಲ್ (KR Circle) ಬಳಿ ಈ ದುರ್ಘಟನೆ ನಡೆದಿದೆ. ಮೃತರಿಬ್ಬರೂ ಟೆಕ್ಕಿಗಳಾಗಿದ್ದು, ಟಿಸಿಎಸ್‌ನಲ್ಲಿ (TCS) ಕೆಲಸ ಮಾಡುತ್ತಿದ್ದರು.
ರಾತ್ರಿ 8.45ರ ಸುಮಾರಿಗೆ ಈ ಭೀಕರ ಅಪಘಾತ ನಡೆದಿದೆ. ಪ್ರಶಾಂತ್ (25), ಬಯನ್ನಗಾರಿ ಶಿಲ್ಪ (27) ಮೃತ ದುರ್ದೈವಿಗಳು. ಪ್ರಶಾಂತ್ ಮೂಲತಃ ಬೆಂಗಳೂರಿನ ಬಾಣಸವಾಡಿಯ ಯುವಕ. ಶಿಲ್ಪ ಆಂಧ್ರ ಮೂಲದವಳು. ಪ್ರಶಾಂತ್ ಮತ್ತು ಯುವತಿ ಇಬ್ಬರು ಸಹೋದ್ಯೋಗಿಗಳಾಗಿದ್ದು, ಐಟಿಪಿಎಲ್ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪಿಜಿಯಲ್ಲಿ ವಾಸ ಮಾಡುತ್ತಿದ್ದ ಯುವತಿ ಶಿಲ್ಪ, ಊಟಕ್ಕೆ ಎಂದು ಹೊರಗೆ ಬಂದಾಗ ಅಪಘಾತವಾಗಿದೆ.
ಮೆಜೆಸ್ಟಿಕ್‌ದ ಕೆಆರ್ ಸರ್ಕಲ್ ಮಾರ್ಗವಾಗಿ ಇವರಿಬ್ಬರೂ ಬೈಕ್‌ನಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಸಿಐಡಿ ಸಿಗ್ನಲ್ ಮಾರ್ಗದಿಂದ ಕೆಆರ್ ಸರ್ಕಲ್ ಕಡೆ ಕಸದ ಲಾರಿ ತೀವ್ರ ವೇಗದಿಂದ ಬಂದಿದೆ. ತಿರುವು ಇದ್ದ ಮಾರ್ಗದಲ್ಲಿ ಲಾರಿ ವೇಗವಾಗಿ ಬಂದ ಕಾರಣ ಕಸದ ಲಾರಿಯ ವೇಗದಿಂದ ತಪ್ಪಿಸಿಕೊಳ್ಳಲಾಗದೇ ಬೈಕ್ ಲಾರಿ ಕೆಳಗೆ ಸಿಲುಕಿಕೊಂಡಿದೆ.
ಮೃತರ ಮೇಲೆ ಹರಿದ ಕಸದ ಲಾರಿ ಸುಮಾರು 10 ಮೀಟರ್‌ನಷ್ಟು ದೂರ ದೇಹಗಳನ್ನು ಎಳೆದೊಯ್ದಿದೆ. ರಸ್ತೆ ಮೇಲೆ ರಕ್ತ ಚೆಲ್ಲಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ಅಪಘಾತದ ಬಳಿಕ ಕಸದ ಲಾರಿ ಚಾಲಕ ಪರಾರಿಯಾಗಿದ್ದಾನೆ. ಕೂಡಲೇ ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗದಲ್ಲಿಯೇ ಇಬ್ಬರೂ ಮೃತ ಪಟ್ಟರು. ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ಒಯ್ಯಲಾಗಿದೆ.
ಸ್ಥಳಕ್ಕೆ ಹಲಸೂರು ಗೇಟ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗನನ್ನು ಕಳೆದುಕೊಂಡು ತಂದೆ ತಾಯಿ ಕಣ್ಣೀರು ಹಾಕಿದ್ದು, ಆಸ್ಪತ್ರೆಯಲ್ಲಿ ಪ್ರಶಾಂತ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. “ಬಿಬಿಎಂಪಿ ವಾಹನ ಅಪಘಾತ ಆಗಿದೆ. ನನ್ನ ಮಗ ಹಾಗೂ ಯುವತಿ ಸಾವನ್ನಪ್ಪಿದ್ದಾರೆ. ಮೊದಲು ಪೊಲೀಸರು ಸರಿಯಾಗಿ ರೆಸ್ಪಾನ್ಸ್ ಕೂಡ ಮಾಡಿಲ್ಲ. ನಮಗೆ ನ್ಯಾಯ ಬೇಕಾಗಿದೆ. ಅಪಘಾತ ಮಾಡಿದ ಚಾಲಕನ ಬಂಧನ ಆಗಬೇಕು. ನ್ಯಾಯ ಸಿಗದಿದ್ದರೆ ನಾನು ನನ್ನ ಪತ್ನಿ ಮತ್ತು ಮಗಳು ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ತೇವೆ. ನನ್ನ ಮಗ ಮಾರ್ಥಾಸ್ ಆಸ್ಪತ್ರೆಯಲ್ಲಿಯೇ ಜನಿಸಿದ್ದ. ಇದೇ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ” ಎಂದು ಮೃತ ಪ್ರಶಾಂತ್ ತಂದೆ ಲೋಕೇಶ್ ಹೇಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ