ವಿಜಯಪುರ: ಕಾರು ಪಲ್ಟಿಯಾಗಿ, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಡವಳಗಿ ಬಳಿ ಅಪಘಾತ (Road Accident) ನಡೆದಿದೆ. ದೊಡ್ಡಯ್ಯ ಪುರಾಣಿಕಮಠ (37), ಪುಷ್ಪಾವತಿ (55) ಮೃತ ದುರ್ದೈವಿ.
ಮೂಲತಃ ವಿಜಯಪುರ ಜಿಲ್ಲೆಯ ಕರಭಂಟನಾಳದ ದೊಡ್ಡಯ್ಯ ಪುರಾಣಿಕಮಠ ಅವರು ಕಳೆದ ನಾಲ್ಕು ದಿನಗಳ ಹಿಂದಷ್ಟೇ ಸೇನೆಯಿಂದ ನಿವೃತ್ತಿ ಹೊಂದಿದ್ದರು. ಪತ್ನಿ, ಇಬ್ಬರು ಮಕ್ಕಳ ಹಾಗೂ ಅತ್ತೆ ಜತೆಗೆ ಡವಳಗಿಯಿಂದ ಮುದ್ದೇಬಿಹಾಳಕ್ಕೆ ಹೋಗುತ್ತಿದ್ದರು. ಕತ್ತಲಿಲ್ಲ ಚಾಲಕನ ನಿಯಂತ್ರಣ ತಪ್ಪಿದ್ದು, ಏಕಾಏಕಿ ಕಾರು ಪಲ್ಟಿಯಾಗಿದೆ.
ಕಾರು ಪಲ್ಟಿಯಾದ ರಭಸಕ್ಕೆ ದೊಡ್ಡಯ್ಯ ಪುರಾಣಿಕಮಠ (37), ಪುಷ್ಪಾವತಿ ಹಿರೆಮಠ (55) ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಗಾಯಾಳುಗಳಿಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: CET 2024 Exam : ಔಟ್ ಆಫ್ ಸಿಲಬಸ್ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು
ಮಾಜಿ ಸಚಿವ ಮಾಧುಸ್ವಾಮಿ ಕಾರು ಅಪಘಾತ; ಒನ್‌ವೇಯಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ!
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಹೇಮಗಿರಿ ಗೇಟ್ ಬಳಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ (Madhu Swamy) ಅವರ ಕಾರು ಅಪಘಾತಕ್ಕೀಡಾಗಿದೆ. ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ (Bengaluru Honnavar Highway) ಒನ್‌ವೇನಲ್ಲಿ ಬರುತ್ತಿದ್ದ ಗೂಡ್ಸ್ ವಾಹನ ತಪ್ಪಿಸಲು ಹೋಗಿ ಮಾಜಿ ಸಚಿವರ ಕಾರು ಮತ್ತೊಂದು ಕಾರಿಗೆ (Car Accident) ಡಿಕ್ಕಿಯಾಗಿದೆ. ಅದೃಷ್ಟವಶಾತ್, ಮಾಧುಸ್ವಾಮಿ ಹಾಗೂ ಅವರ ಕಾರು ಚಾಲಕ ಪರಾರಿಯಾಗಿದ್ದಾರೆ.
ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪರವಾಗಿ ಪ್ರಚಾರ ಮಾಡಲು ಬೀರೂರಿಗೆ ತೆರಳುತ್ತಿದ್ದರು. ಬೀರೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲು ಅವರು ಕಾರಿನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಅವರ ಕಾರು ಲಘು ಅಪಘಾತಕ್ಕೀಡಾಗಿದೆ. ಇನ್ನು, ಬೀರೂರು ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಬೃಹತ್ ಸಮಾವೇಶದಲ್ಲಿ ಬಳಿಕ ಮಾಧುಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲ ತಿಂಗಳ ಹಿಂದಷ್ಟೇ ಕಲಬುರಗಿ ಜಿಲ್ಲೆಯ ಸಣ್ಣೂರ್ ಕ್ರಾಸ್ ಬಳಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತದಲ್ಲಿ ಶಾಸಕ ಬಸವರಾಜ್ ಮತ್ತಿಮೂಡ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಗಾಯಗೊಂಡ ಅವರನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಕಲಬುರಗಿಯ ಸಣ್ಣೂರ್ ಕ್ರಾಸ್ ಬಳಿ ಬರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಪಕ್ಕದಲ್ಲಿ ಕಾರು ಪಲ್ಟಿಯಾಗಿ ಬಿದ್ದಿತ್ತು. ಹೀಗೆ ಪಲ್ಟಿಯಾಗಿದ್ದರಿಂದ ಶಾಸಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅಲ್ಲದೆ, ಚಾಲಕನಿಗೂ ಗಾಯಗಳಾಗಿದ್ದವು. ಆ ಭಾಗವಾಗಿ ಬರುತ್ತಿದ್ದ ಇತರೆ ವಾಹನಗಳ ಸವಾರರು ರಕ್ಷಣೆಗೆ ಧಾವಿಸಿದ್ದರು. ಬಳಿಕ ಚಾಲಕ ಹಾಗೂ ಶಾಸಕರನ್ನು ಕಾರಿನಿಂದ ಹೊರಕ್ಕೆ ತಂದು ಆಸ್ಪತ್ರೆಗೆ ದಾಖಲಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ