ವಿಜಯಪುರ: ಫೈರ್ ಬ್ರಾಂಡ್ ಬಿಜೆಪಿ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Pateel Yatnal) ಮಾಲೀಕತ್ವದ ಸಿದ್ಧಶ್ರೀ ಸಕ್ಕರೆ ಕಾರ್ಖಾನೆಯನ್ನು (Siddhasri Sugar Factory) ಮುಚ್ಚಲು ಆದೇಶ ನೀಡಲಾಗಿದೆ. ಇದು ಯತ್ನಾಳ್ ಅವರ ಪಾಲಿಗೆ ದೊಡ್ಡ ಹೊಡೆತ ಎಂದು ವ್ಯಾಖ್ಯಾನಿಸಲಾಗಿದೆ. ಸಕ್ಕರೆ ಕಾರ್ಖಾನೆಯು (Sugar Factory) ಕಳೆದ ಒಂದು ವರ್ಷದಿಂದಲೂ ಪರಿಸರ ನಿಯಮಾವಳಿ (Environment Pollution) ಉಲ್ಲಂಘನೆ ಮಾಡಿರುವುದರಿಂದ ಕಾರ್ಖಾನೆ ಮುಚ್ಚುವಂತೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ( Karnataka state Pollution Control Board-KSPCB) ಆದೇಶ ನೀಡಿದೆ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಮ್ಮಾಯಿದಲಾಯಿ ಗ್ರಾಮದ ಬಳಿ ಯತ್ನಾಳ್ ಒಡೆತನದ ಸಿದ್ಧಶ್ರೀ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆ ಇದೆ. ಕಾರ್ಖಾನೆಯಲ್ಲಿ ಎಥೆನಾಲ್ ಉತ್ಪಾದಿಸುವ ಘಟಕವೂ ಇದೆ. ಕಾರ್ಖಾನೆಯ ಕೊಳಚೆ ನೀರನ್ನು ನೇರವಾಗಿ ಮುಲ್ಲಾಮಾರಿ ಜಲಾಶಯಕ್ಕೆ ಹರಿಸಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.
ಮಂಡಳಿಯ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕಾರ್ಖಾನೆಯ ಅವೈಜ್ಞಾನಿಕ ನಿರ್ವಹಣೆ ಹಾಗೂ ಹಲವಾರು ಲೋಪಗಳು ಕಂಡುಬಂದಿದ್ದವು. ಹೀಗಾಗಿ, ಕಾರ್ಖಾನೆಯನ್ನು ಮುಚ್ಚಲು ಮಂಡಳಿ ಆದೇಶಿಸಿದೆ. ಕಾರ್ಖಾನೆಯನ್ನು ಮುಚ್ಚಬೇಕು. ಕಾರ್ಖಾನೆಗೆ ಒದಗಿಸುತ್ತಿದ್ದ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸಬೇಕು ಎಂದು ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಅಲ್ಲದೆ, ಇತ್ತೀಚೆಗೆ, ಹುಮ್ನಾಬಾದ್‌ನ ಪ್ರಸನ್ನ ಪ್ರಿ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಿಂದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದರು. ಆ ಕಾರ್ಖಾನೆಯನ್ನೂ ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: BJP Karnataka : ಲೋಕಸಭೆ ಗೆಲ್ಲುವವರೆಗೆ ವಿಶ್ರಾಂತಿ ಪ್ರಶ್ನೆಯೇ ಇಲ್ಲ; ಬಿವೈ ವಿಜಯೇಂದ್ರ
ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಕೆಎಸ್‌ಪಿಸಿಬಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕಾರ್ಖಾನೆಯನ್ನು ಮುಚ್ಚುವಂತೆ ನೋಟಿಸ್ ಕಳುಹಿಸಲಾಗಿದೆ. ರಾಜ್ಯದಲ್ಲಿ ನಿಯಮ ಉಲ್ಲಂಘಿಸುತ್ತಿರುವ ಕಾರ್ಖಾನೆಗಳು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.
Sugar Factory: ಕಾನೂನು ಹೋರಾಟ ಮಾಡುವುದಾಗಿ ಹೇಳಿದ ಯತ್ನಾಳ್
‘ಕೈ’ಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ ಎಂಬುದು ಗೊತ್ತಿರುವ ವಿಷಯವೇ. ಬಡವರಿಗೆ, ದೀನ-ದಲಿತರಿಗೆ, ಪಕ್ಷದ ಕಾರ್ಯಕರ್ತರಿಗೆ ಸಹಾನೂಭೂತಿಯಿಂದ ಕಾಣುತ್ತ ಬಂದಿರುವ ನಾನು, ನನ್ನ ಮಿತಿಯಲ್ಲಿ ನನ್ನದೇ ಕಾರ್ಖಾನೆಗಳಲ್ಲಿ ನೂರಾರು ಜನರಿಗೆ ಉದ್ಯೋಗ ಸೃಷ್ಟಿಸಿದ್ದೇನೆ. ಜಿಲ್ಲೆಯ ಆರ್ಥಿಕತೆಯನ್ನು ಸುಧಾರಿಸಲು ನನ್ನ ಅಳಿಲು ಸೇವೆಯೂ ಇದೆ.
ರಾಜಕೀಯ ಒತ್ತಡಕ್ಕೆ ಮಣಿದು ನನ್ನ ಕಾರ್ಖಾನೆಯನ್ನು ಮುಚ್ಚಿಸುವುದರಿಂದ ಇವರು ಏನನ್ನೂ ಕೂಡ ಸಾಧಿಸಲು ಸಾಧ್ಯವಿಲ್ಲ. ಕಾರ್ಖಾನೆ ಮತ್ತೆ ತೆರೆಯುವುದು ನಿಶ್ಚಿತ, ಈ ನಿಟ್ಟಿನಲ್ಲಿ ಕಾನೂನು ಹೋರಾಟವನ್ನು ನಾನು ಮಾಡುತ್ತೇನೆ.
— Basanagouda R Patil (Yatnal) (@BasanagoudaBJP) January 27, 2024
ರಾಜಕೀಯ ಒತ್ತಡಕ್ಕೆ ಮಣಿದು ನನ್ನ ಕಾರ್ಖಾನೆಯನ್ನು ಮುಚ್ಚಿಸುವುದರಿಂದ ಇವರು ಏನನ್ನೂ ಕೂಡ ಸಾಧಿಸಲು ಸಾಧ್ಯವಿಲ್ಲ. ಕಾರ್ಖಾನೆ ಮತ್ತೆ ತೆರೆಯುವುದು ನಿಶ್ಚಿತ, ಈ ನಿಟ್ಟಿನಲ್ಲಿ ಕಾನೂನು ಹೋರಾಟವನ್ನು ನಾನು ಮಾಡುತ್ತೇನೆ.