ವಿಜಯಪುರ: ಅವಳು ಹಿಂದೂ ಹುಡುಗಿ. ಅವನು ಮುಸ್ಲಿಂ ಹುಡುಗ. ಪ್ರೀತಿಸಿ ಮದುವೆಯಾದ (Interreligion Love Marriage) ಅವರಿಗೆ ಸಮಾಜವೇನೂ ಲವ್ ಜಿಹಾದ್ (Love jihad) ಪಟ್ಟ ಕೊಟ್ಟಿಲ್ಲ. ಆದರೆ, ಈಗ ವಿಲನ್ ಆಗಿರುವುದು ಹುಡುಗಿ ತಾಯಿ (Mother is Villain). ಆಕೆ ರೌಡಿಗಳನ್ನು ಬಿಟ್ಟು 50 ಲಕ್ಷ ರೂ.ಗೆ ಡಿಮ್ಯಾಂಡ್ ಮಾಡಿದ್ದಾಳಂತೆ (Demand for Money). ಇಂಥಹುದೊಂದು ಘಟನೆ ನಡೆದಿರುವುದು (Threat to Lovers) ವಿಜಯಪುರ ಜಿಲ್ಲೆಯ (Vijayapura News) ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ.
ಇಂಡಿ ತಾಲೂಕಿನ ಹಂಜಗಿ ಗ್ರಾಮದ ಮುಸ್ಲಿಂ ಯುವಕ ಯಾಸೀನ್ ಜಮಾದಾರ್ ಹಾಗೂ ಎಸ್ಸಿ ಸಮುದಾಯದ ಅಶ್ವಿನಿ ಭಂಡಾರಿ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಮನೆಯವರಿಗೆ ತಿಳಿದಾಗ ವಿರೋಧ ವ್ಯಕ್ತವಾಗಿತ್ತು. ಆಗ ಅವರು ಮನೆ ಬಿಟ್ಟು ಓಡಿ ಮದುವೆಯಾಗಿದ್ದರು. ಈಗ ಅಶ್ವಿನಿ ಮೂರು ತಿಂಗಳ ಗರ್ಭಿಣಿ.
ಯಾಸೀನ್ ಮತ್ತು ಅಶ್ವನಿ ಯಾರ ತಂಟೆಗೂ ಹೋಗದೆ ತಮ್ಮ ಪಾಡಿಗೆ ತಾವು ಬೇರೆ ಕಡೆ ವಾಸವಾಗಿದ್ದಾರೆ. ಆದರೆ, ತಮ್ಮ ಮನೆ ಮಗಳನ್ನು ಬಿಟ್ಟುಕೊಡಲು ಒಪ್ಪದ ಅಶ್ವಿನಿ ಮನೆಯವರು ಬೇರೆ ಬೇರೆ ರೀತಿಯಲ್ಲಿ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆಪಾದಿಸಲಾಗಿದೆ. ನೀನು ಅವನನ್ನು ಬಿಟ್ಟು ಬಾ, ಗರ್ಭಪಾತ ಮಾಡಿಸಿ ಬೇರೆ ಮದುವೆ ಮಾಡುತ್ತೇವೆ ಎನ್ನುವುದು ಒಂದಾದರೆ, ಇನ್ನೊಂದು ಕಡೆ ರೌಡಿ ಶೀಟರ್ ಮೂಲಕ ಕೊಲೆ ಬೆದರಿಕೆ ಹಾಕಿಸುತ್ತಿದ್ದಾರೆ, ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರಾಮದ ರೌಡಿ ಶೀಟರ್ ಆಗಿರುವ ಹುಚ್ಚಪ್ಪಾ ಕಾಲೇಬಾಗ್, ಕೊಲೆಯೊಂದರ ಆರೋಪಿ ಮುತ್ತಪ್ಪ ಎಂಬವರು ಬಂದು ಆಗಲೇ ಕೊಲೆ ಬೆದರಿಕೆ ಒಡ್ಡಿ ಒಂದು ಲಕ್ಷ ರೂ. ವಸೂಲಿ ಮಾಡಿದ್ದಾರಂತೆ. ಹುಚ್ಚಪ್ಪ ಕಾಲೇಬಾಗ ಬಂದು ʻʻನಮ್ಮ ಸಮಾಜದ ಯುವತಿಯನ್ನು ಮದುವೆಯಾಗಿದ್ದೀಯಾ. ಒಂದು ಲಕ್ಷ ಹಣ ಕೊಡದಿದ್ದರೆ ಕೊಲೆ ಮಾಡ್ತೀನಿʼ ಎಂದು ಬೆದರಿಕೆ ಹಾಕಿದ್ದನಂತೆ. ಜೀವ ಭಯದಲ್ಲಿದ್ದ ಯಾಸೀನ್ ಒಂದು ಲಕ್ಷ ರೂಪಾಯಿ ನೀಡಿದ್ದಾನೆ. ಈ ಹಣವನ್ನು ಹುಚ್ಚಪ್ಪ ಕಾಲೇಬಾಗ್, ಮುತ್ತಪ್ಪ ಹಾಗೂ ಅಶ್ವಿನಿಯ ತಾಯಿ ಹಂಚಿಕೊಂಡಿದ್ದಾರಂತೆ!
ಈಗ ಬೆದರಿಕೆ ಹೆಚ್ಚಾಗಿದ್ದು, ಬೇಡಿಕೆಯ ಮೊತ್ತವೂ 50 ಪಕ್ಷ ರೂ.ಗಳಿಗೆ ಏರಿದೆಯಂತೆ. 50 ಲಕ್ಷ ರೂಪಾಯಿ ಹಣ ನೀಡಿದರೆ ಮಾತ್ರ ಜೀವನ ನಡೆಸಲು ಬಿಡುತ್ತೇವೆ. ಇಲ್ಲದಿದ್ದರೆ ಜೀವ ಸಹಿತ ಬಿಡಲ್ಲ ಎಂದು ಹುಚ್ಚಪ್ಪ ಹಾಗೂ ಮುತ್ತಪ್ಪ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಆಶ್ವಿನಿಯ ತಾಯಿಯೂ ಸಾಥ್ ನೀಡಿದ್ದಾರಂತೆ.
ಇತ್ತ ಯಾಸಿನ್ ಅಷ್ಟೊಂದು ಹಣ ನಾನೆಲ್ಲಿಂದ ತರಲಿ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದರೆ, ಆತನ ತಂದೆ ತಾಯಿಯ ಮೇಲೆ ಕೂಡಾ ಸುಳ್ಳು ಕೇಸು ದಾಖಲಿಸಿ ಚಿತ್ರ ಹಿಂಸೆ ನೀಡಲಾಗುತ್ತಿದೆಯಂತೆ. ಈ ಎಲ್ಲ ವಿದ್ಯಮಾನಗಳಿಂದ ಭಯಗೊಂಡ ಯಾಸೀನ್ ಹಾಗೂ ಅಶ್ವಿನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ.
ಇದನ್ನೂ ಓದಿ : Love Case: ಪ್ರೀತಿಸಿದವಳು ದೂರಾದಳೆಂದು ಮನನೊಂದ; ಕತ್ತರಿಯಿಂದ ತಿವಿದುಕೊಂಡು ಯುವಕ ಸಾವು
ಜಿಲ್ಲಾ ಪೊಲೀಸರು ಅಶ್ವಿನಿ ಹಾಗೂ ಯಾಸೀನ್ ದೂರನ್ನು ಸ್ವೀಕಾರ ಮಾಡಿ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಕಳುಹಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ನವ ವಿವಾಹಿತ ಜೋಡಿಗೆ ಜಿಲ್ಲಾ ಅಪರ ಪೊಲೀಸ್ ವರಿಷ್ಟಾಧಿಕಾರಿಗಳು ಕಾನೂನು ನೆರವು ಹಾಗೂ ರಕ್ಷಣೆ ನೀಡೋದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.