ವಿಜಯಪುರ: ವಿದೇಶದಲ್ಲಿ ಕೆಲಸ ಕೊಡಿಸುತ್ತೇವೆ, ಅದರಲ್ಲೂ ದುಬೈನಲ್ಲಿ ಎಂಬ ಏಜೆಂಟ್ ಮಾತಿಗೆ ಮರುಳಾಗಿ ಹಿಂದು ಮುಂದು ನೋಡದೇ ದುಡ್ಡುಕೊಟ್ಟು ಯುವಕರು ಮೋಸ ಹೋಗಿದ್ದಾರೆ. ವಿದೇಶದಲ್ಲಿನ ಕೆಲಸದ ಆಸೆ ತೋರಿಸಿ ಪಂಗನಾಮ ಹಾಕಿ ವಂಚಿಸುವ ಜಾಲ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಬರಟಗಿ ತಾಂಡಾದ ರಮೇಶ್ ರಾಠೋಡ್ ಹಾಗೂ ಸಾಗರ್ ರಾಠೋಡ್ ಮೋಸ ಹೋದವರು. ಮಕ್ತುಮ್ ಮುಜಾವರ್ ಮೋಸ ಮಾಡಿದ ವ್ಯಕ್ತಿ. ದುಬೈನಲ್ಲಿ ಕೆಲಸ ಸಿಕ್ಕರೆ ಲಕ್ಷ ಲಕ್ಷ ಹಣ ಸಂಪಾದಿಸಬಹುದು ಎಂದು ಇಬ್ಬರು ಯುವಕರು ಸಾಕಷ್ಟು ಕನಸು ಕಂಡಿದ್ದರು. ಆದರೆ ಈಗ ಏಜೆಂಟರಿಂದ ಮೋಸ ಹೋಗಿದ್ದಲ್ಲದೇ, ಕಳೆದುಕೊಂಡಿರುವ ಹಣವನ್ನು ವಾಪಸ್ ಕೊಡಿಸಿ ಎಂದು ಪೊಲೀಸರ ಮೊರೆ ಹೋಗಿದ್ದಾರೆ.
ರಮೇಶ್ ರಾಠೋಡ್ ವಿಜಯಪುರದ ಬರಟಗಿ ತಾಂಡಾ 1ರ ನಿವಾಸಿ, ಸಾಗರ್ ರಾಠೋಡ್ ತಿಕೋಟಾದವನು. ಇವರಿಬ್ಬರಿಗೂ ಮಕ್ತುಮ್ ಮುಜಾವರ್ ಎಂಬಾತ ದುಬೈನಲ್ಲಿ ಹೆಲ್ಪರ್ ಉದ್ಯೋಗವಿದೆ, ಪ್ರತಿ ತಿಂಗಳು 45 ಸಾವಿರ ರೂ. ಸಂಬಳ ಬರುತ್ತದೆ ಎಂಬ ಆಸೆ ತೋರಿಸಿದ್ದ. ಇಬ್ಬರಿಂದ ತಲಾ ಒಂದೂವರೆ ಲಕ್ಷ ರೂ. ಪಡೆದಿದ್ದಾನೆ. ಆದರೆ ಮುಜಾವರ್ ಮಾತು ನಂಬಿ ದುಬೈನಲ್ಲಿ ಉದ್ಯೋಗದ ಕನಸು ಕಂಡಿದ್ದ ಇಬ್ಬರು ಯುವಕರು ಇದೀಗ ಕಂಗಾಲಾಗಿದ್ದಾರೆ.
ಇದನ್ನೂ ಓದಿ | ಬಿಸಿಲ ನಾಡಿನಲ್ಲಿ ಕಾಶ್ಮೀರ ಫಲ, ಚೀನೀ ಫಲ, ದುಬೈ ಫಲ ಬೆಳೆದ ರೈತ !
ಉದ್ಯೋಗ ವೀಸಾ ಅಲ್ಲ, ಪ್ರವಾಸಿ ವೀಸಾ
ಇವರು ಕಳೆದ ನಾಲ್ಕು ತಿಂಗಳ ಹಿಂದೆ ವಿಜಯಪುರದಿಂದ ಮುಂಬೈ ಮಾರ್ಗವಾಗಿ ವಿಮಾನ ಮೂಲಕ ದುಬೈಯ ಶಾರ್ಜಾಗೆ ಹೋಗಿದ್ದಾರೆ. ಅಲ್ಲಿ ಕಂಪನಿಯವರು ನಿಮ್ಮನ್ನು ಕರೆದುಕೊಂಡು ಹೋಗಿ ಉದ್ಯೋಗ ಕೊಡುತ್ತಾರೆ ಎಂದು ಮುಜಾವರ್ ಹೇಳಿ ಕಳುಹಿಸಿದ್ದ. ಅಲ್ಲಿಗೆ ಹೋದಾಗ ವ್ಯಕ್ತಿಯೊಬ್ಬರು ಕರೆದುಕೊಂಡು ಹೋಗಿ ರೂಮ್ ಕೊಟ್ಟರು. ಆದರೆ ಅಲ್ಲಿ ಹೋದಕೂಡಲೆ ಇವರಿಗೆ ಕೊಟ್ಟಿರುವುದು ಉದ್ಯೋಗದ ವೀಸಾ ಅಲ್ಲ, ಟೂರಿಸ್ಟ್ ವೀಸಾ ಎಂಬುವುದು ಗೊತ್ತಾಗಿದೆ.
ಉದ್ಯೋಗ ಈಗ ಕೊಡುತ್ತೇವೆ ಆಗ ಕೊಡುತ್ತೇವೆ ಎಂದು ಊಟವನ್ನೂ ಕೊಡದೇ ಸತಾಯಿಸಿದ್ದಾರೆ. ಕೈಯಲ್ಲಿದ್ದ ಹಣ ಖಾಲಿಯಾದ ಮೇಲೆ ಯುವಕರು ಮತ್ತೆ ಊರಿನಿಂದ ಹಣ ಹಾಕಿಸಿಕೊಂಡಿದ್ದಾರೆ. ಹದಿನೈದು ದಿನ ನರಕಯಾತನೆ ಅನುಭವಿಸಿ, ವಾಪಸ್ ಸ್ವದೇಶಕ್ಕೆ ಬಂದರು. ವಿದೇಶದಲ್ಲಿ ಉದ್ಯೋಗದ ಹೆಸರಿನಲ್ಲಿ ಮೋಸ ಹೋಗಿದ್ದೇವೆ. ಮಕ್ತುಮ್ ಮುಜಾವರ್ ಹಲವು ಜನರಿಗೆ ವಂಚಿಸಿದ್ದಾನೆ. ದುಬೈನಿಂದ ಏಳೆಂಟು ಜನ ವಾಪಸ್ ಬಂದಿದ್ದೇವೆ. ಮಕ್ತುಮ್ ಮುಜಾವರ್ ಹಾಗೂ ಮುಂಬೈ ಏಜೆಂಟ್ ಲಿಂಕ್‌ನೊಂದಿಗೆ ಮೋಸ ಮಾಡಲಾಗುತ್ತಿದೆ ಎಂದು ಯುವಕರು ಆರೋಪಿಸಿದ್ದಾರೆ. ವಿಜಯಪುರಕ್ಕೆ ಬಂದಮೇಲೆ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರೂ ದೂರು ನೀಡಿದ್ದಾರೆ.
ಚಾಲಾಕಿ ಆರೋಪಿ ಪರಾರಿ
ಪೊಲೀಸರು ಮಕ್ತುಮ್ ಮುಜಾವರ್ ಕರೆಯಿಸಿ ವಿಚಾರಣೆ ನಡೆಸಿ, ಏಜೆಂಟ್ ಕಚೇರಿ ವಿವರ, ಎಷ್ಟು ಜನಕ್ಕೆ ವಿದೇಶಕ್ಕೆಕಳುಹಿದ್ದೆ ಎಂಬ ಮಾಹಿತಿ ಪಡಯಲು ಮುಂದಾಗಿದ್ದಾರೆ. ಚಾಲಾಕಿ ಮಕ್ತುಮ್ ಮುಜಾವರ್ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಅಮಾಯಕ ಯುವಕರಿಗೆ ದುಬೈನಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ವಂಚಿಸುವ ಜಾಲದ ಬಗ್ಗೆ ಎಚ್ಚರವಿರಬೇಕು, ಮೋಸಹೋಗಬಾರದು, ಹಲವಾರು ರೀತಿಯ ವಂಚನೆಯ ಜಾಲ ಮತ್ತು ತಂಡಗಳಿವೆ ಎಂದು ವಿಜಯಪುರದ ಎಸ್ಪಿ ಎಚ್.ಡಿ.ಆನಂದ ಕುಮಾರ್ ಹೇಳಿದ್ದಾರೆ. ಇದೀಗ ಆರೋಪಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.
ಇದನ್ನೂ ಓದಿ | ನಕಲಿ ಸಿಮ್ ಕಾರ್ಡ್, ಬ್ಯಾಂಕ್ ಅಕೌಂಟ್ ಬಳಸಿ ವಂಚಿಸುತ್ತಿದ್ದ ವಿದೇಶಿಗರ ಬಂಧನ