Site icon Vistara News

Vijaypur Election Result 2024: ವಿಜಯಪುರದಲ್ಲಿ ರಮೇಶ್‌ ಜಿಗಜಿಣಗಿಗೆ ಗೆಲುವು; 5ನೇ ಬಾರಿ ಜಯಭೇರಿ

Sukhoi Fighter jet

Vijaypur Election Result 2024: Ramesh Jigajinagi Wins Against Raju Alagur

ವಿಜಯಪುರ: ಗುಮ್ಮಟಗಳಿಗೆ ಪ್ರಸಿದ್ಧವಾದ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ (Vijaypur Election Result 2024) ಐದನೇ ಬಾರಿಗೆ ಬಿಜೆಪಿಯ ರಮೇಶ್‌ ಜಿಗಜಿಗಣಗಿ (Ramesh Jigajinagi) ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಪ್ರೊ.ರಾಜು ಆಲಗೂರ (Raju Alagur) ಅವರ ವಿರುದ್ಧ ರಮೇಶ್‌ ಜಿಗಜಿಣಗಿ ಅವರು ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇದರೊಂದಿಗೆ ವಿಜಯಪುರ ಲೋಕಸಭೆ ಕ್ಷೇತ್ರವು ಬಿಜೆಪಿ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಯಾರಿಗೆ ಎಷ್ಟು ಮತ?

ರಮೇಶ್ ಜಿಗಜಿಣಗಿ (ಬಿಜೆಪಿ): 6,72,781

ರಾಜು ಆಲಗೂರ (ಕಾಂಗ್ರೆಸ್)‌: 5,95,552

ಗೆಲುವಿನ ಅಂತರ: 77,229

ರಮೇಶ್‌ ಜಿಗಜಿಣಗಿ ಅವರು ಕಳೆದ ಮೂರು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿ ವಿಜಯಪುರ ಕ್ಷೇತ್ರದ ಜನರ ನಾಡಿಮಿಡಿತವನ್ನು ಅರಿತಿದ್ದರು. ಸುಮಾರು 1 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ ಎಂಬುದಾಗಿ ಹೇಳುತ್ತ ಪ್ರಚಾರ ಮಾಡಿರುವ ಅವರಿಗೆ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದವರ ಮತಗಳ ಬೆಂಬಲ ಇತ್ತು. ನರೇಂದ್ರ ಮೋದಿ ಅವರ ಅಲೆ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರೊಂದಿಗಿನ ಮುನಿಸು ಶಮನವಾಗಿರುವುದು ರಮೇಶ್‌ ಜಿಗಜಿಣಗಿ ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿತ್ತು. ಅದೇ ಅವರ ಗೆಲುವಿಗೂ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ಫಲ ಕೊಡುವುದೇ ಕಾಂಗ್ರೆಸ್‌ ಪ್ರಯೋಗ?

ಕಳೆದ ಮೂರು ಚುನಾವಣೆಗಳಲ್ಲೂ ಬಂಜಾರ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಿದ್ದ ಕಾಂಗ್ರೆಸ್‌ ಈ ಬಾರಿ ಬಲಗೈ ಸಮಾಜದ ಪ್ರೊ. ರಾಜು ಆಲಗೂರ ಅವರಿಗೆ ಟಿಕೆಟ್‌ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿತ್ತು. ಕ್ಷೇತ್ರದಲ್ಲಿರುವ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡಿರುವ ರಾಜು ಆಲಗೂರ ಅವರಿಗೆ ಸಚಿವ ಎಂ.ಬಿ.ಪಾಟೀಲ್‌ ಅವರ ಬೆಂಬಲ, ಸಹಕಾರ ಇತ್ತು. ಗ್ಯಾರಂಟಿ ಯೋಜನೆಗಳನ್ನೂ ಕ್ಷೇತ್ರದ ಜನ ಮೆಚ್ಚಿಕೊಂಡಿದ್ದಾರೆ. ಹಾಗಾಗಿ, ಚುನಾವಣೆ ಫಲಿತಾಂಶವು ಹೆಚ್ಚಿನ ಕುತೂಹಲ ಕೆರಳಿಸಿತ್ತು. ಆದರೂ, ರಾಜು ಆಲಗೂರ ಅವರು ಗೆಲುವಿನ ದಡ ಸೇರುವಲ್ಲಿ ವಿಫಲರಾಗಿದ್ದಾರೆ.

2019, 2014ರ ಫಲಿತಾಂಶ

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ರಮೇಶ್‌ ಜಿಗಜಿಣಗಿ ಅವರು ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಇವರು ತಮ್ಮ ಪ್ರತಿಸ್ಪರ್ಧಿ ಸುನೀತಾ ದೇವಾನಂದ ಚೌಹಾಣ್‌ ಅವರ ವಿರುದ್ಧ 2.58 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2014ರ ಲೋಕಸಭೆ ಚುನಾವಣೆಯು ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಆದರೂ, ರಮೇಶ್‌ ಜಿಗಜಿಣಗಿ ಅವರು ಕಾಂಗ್ರೆಸ್‌ನ ಪ್ರಕಾಶ್‌ ರಾಥೋಡ್‌ ಅವರ ವಿರುದ್ಧ 69 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: Bidar Election Results 2024: ಬೀದರ್‌ನಲ್ಲಿ ಸಾಗರ್‌ ಖಂಡ್ರೆಗೆ ಜಯ; ಭಗವಂತ್‌ ಖೂಬಾಗೆ ಮುಖಭಂಗ

Exit mobile version