ವಿಜಯಪುರ: ಗುಮ್ಮಟಗಳಿಗೆ ಪ್ರಸಿದ್ಧವಾದ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಎದುರಾಗಿದೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರದಲ್ಲಿ (Vijaypur Lok Sabha Constituency) ಬಿಜೆಪಿಯಿಂದ ಸತತ ನಾಲ್ಕನೇ ಬಾರಿಗೆ ರಮೇಶ್ ಜಿಗಜಿಣಗಿ (Ramesh Jigajinagi) ಕಣಕ್ಕಿಳಿದಿದ್ದರೆ, ಪ್ರಯೋಗಕ್ಕೆ ಮುಂದಾಗಿರುವ ಕಾಂಗ್ರೆಸ್, ಬಲಗೈ ಸಮಾಜದ ಪ್ರೊ.ರಾಜು ಆಲಗೂರ (Raju Algur) ಅವರನ್ನು ಕಣಕ್ಕಿಳಿಸಿದೆ. ಹಾಗಾಗಿ, ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಯಾರು ಗೆಲುವಿನ ಮಾಲೆಗೆ ಕೊರಳೊಡ್ಡಲಿದ್ದಾರೆ ಎಂಬ ಕುತೂಹಲ ಜಾಸ್ತಿಯಾಗಿದೆ.
ಜಿಗಜಿಣಗಿಗೆ ತೀವ್ರ ಪೈಪೋಟಿ
ರಮೇಶ್ ಜಿಗಜಿಣಗಿ ಅವರು ಕಳೆದ ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸಿ ವಿಜಯಪುರ ಕ್ಷೇತ್ರದ ಜನರ ನಾಡಿಮಿಡಿತವನ್ನು ಅರಿತಿದ್ದಾರೆ. ಸುಮಾರು 1 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ ಎಂಬುದಾಗಿ ಹೇಳುತ್ತ ಪ್ರಚಾರ ಮಾಡಿರುವ ಅವರಿಗೆ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದವರ ಮತಗಳ ಬೆಂಬಲ ಇದೆ. ನರೇಂದ್ರ ಮೋದಿ ಅವರ ಅಲೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೊಂದಿಗಿನ ಮುನಿಸು ಶಮನವಾಗಿರುವುದು ರಮೇಶ್ ಜಿಗಜಿಣಗಿ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ಆದರೆ, ಸತತ ಮೂರು ಬಾರಿ ಇವರೇ ಸಂಸದರಾಗಿದ್ದು, ಕ್ಷೇತ್ರದ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ ಎಂಬ ಕೊರಗು ಜನರಲ್ಲಿದೆ. ಆಡಳಿತ ವಿರೋಧಿ ಅಲೆಯೂ ತುಸು ಹೆಚ್ಚೇ ಇದೆ. ಅವರು ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿ ಅನುಕಂಪ ಗಿಟ್ಟಿಸಿಕೊಳ್ಳಲು ಮುಂದಾಗಿದ್ದು ಕೂಡ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿರುವುದೂ ಜಿಗಜಿಣಗಿ ಅವರಿಗೆ ಹಿನ್ನಡೆ ತರಲಿದೆ ಎಂದೇ ಹೇಳಲಾಗುತ್ತಿದೆ.
ಫಲ ಕೊಡುವುದೇ ಕಾಂಗ್ರೆಸ್ ಪ್ರಯೋಗ?
ಕಳೆದ ಮೂರು ಚುನಾವಣೆಗಳಲ್ಲೂ ಬಂಜಾರ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದ ಕಾಂಗ್ರೆಸ್ ಈ ಬಾರಿ ಬಲಗೈ ಸಮಾಜದ ಪ್ರೊ. ರಾಜು ಆಲಗೂರ ಅವರಿಗೆ ಟಿಕೆಟ್ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಕ್ಷೇತ್ರದಲ್ಲಿರುವ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡಿರುವ ರಾಜು ಆಲಗೂರ ಅವರಿಗೆ ಸಚಿವ ಎಂ.ಬಿ.ಪಾಟೀಲ್ ಅವರ ಬೆಂಬಲ, ಸಹಕಾರ ಇದೆ. ಗ್ಯಾರಂಟಿ ಯೋಜನೆಗಳನ್ನೂ ಕ್ಷೇತ್ರದ ಜನ ಮೆಚ್ಚಿಕೊಂಡಿದ್ದಾರೆ. ಹಾಗಾಗಿ, ಚುನಾವಣೆ ಫಲಿತಾಂಶವು ಹೆಚ್ಚಿನ ಕುತೂಹಲ ಕೆರಳಿಸಿದೆ.
2019, 2014ರ ಫಲಿತಾಂಶ
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ರಮೇಶ್ ಜಿಗಜಿಣಗಿ ಅವರು ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಇವರು ತಮ್ಮ ಪ್ರತಿಸ್ಪರ್ಧಿ ಸುನೀತಾ ದೇವಾನಂದ ಚೌಹಾಣ್ ಅವರ ವಿರುದ್ಧ 2.58 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2014ರ ಲೋಕಸಭೆ ಚುನಾವಣೆಯು ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಆದರೂ, ರಮೇಶ್ ಜಿಗಜಿಣಗಿ ಅವರು ಕಾಂಗ್ರೆಸ್‌ನ ಪ್ರಕಾಶ್ ರಾಥೋಡ್ ಅವರ ವಿರುದ್ಧ 69 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: Lok Sabha Election 2024: ಮೈಸೂರು ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಶ್ವಾನದಿಂದ ಅಚ್ಚರಿಯ ಭವಿಷ್ಯ!