ಹಾಸನ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಇತ್ತೀಚಿನ ದಿನಗಳಲ್ಲಿ ಪರೋಕ್ಷ ಸಂದೇಶಗಳನ್ನು ನೀಡುವುದರಲ್ಲಿ ನಿಪುಣತೆ ಗಳಿಸುತ್ತಿದ್ದಾರೆ. ತಮಗೆ ಎಂಎಲ್‌ಸಿ ಟಿಕೆಟ್ ಕೈತಪ್ಪಿದ ನಂತರ ಕಾರ್ಯಕರ್ತರಿಗೆ ಪತ್ರವೊಂದನ್ನು ಬರೆದು ʼತಮಗೆ ಸಾಮರ್ಥ್ಯ ಇದೆʼ ಎಂದು ವರಿಷ್ಠರಿಗೆ ಪರೋಕ್ಷ ಸಂದೇಶ ನೀಡಿದ್ದ ವಿಜಯೇಂದ್ರ ಇದೀಗ ತಮ್ಮ ತಂದೆ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕುರಿತು ಅಂತಹದ್ದೇ ಸಂದೇಶ ನೀಡಿದ್ದಾರೆ. ಬೋನಿನಲ್ಲಿ ಕೂಡಿಹಾಕಿದರೂ ಹುಲಿ, ಹುಲಿಯೇ ಆಗಿರುತ್ತದೆಯೇ ವಿನಃ ಹುಲ್ಲು ತಿನ್ನುವುದಿಲ್ಲ ಎಂದಿದ್ದಾರೆ.
ಹೊಳೆನರಸೀಪುರ ಪಟ್ಟಣದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಡಾ. ಶಿವಕುಮಾರ ಸ್ವಾಮೀಜಿ ಜಯಂತಿಯಲ್ಲಿ ಭಾಗಿಯಾಗಿ ಮಾತನಾಡಿದ ವಿಜೆಯೇಂದ್ರ, ಯಡಿಯೂರಪ್ಪನವರ ಹಿರಿಮೆಯನ್ನು ಕೊಂಡಾಡಿದ್ದಾರೆ. ಯಡಿಯೂರಪ್ಪ ಅವರು ಎಲ್ಲ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ನಾಯಕ. 108ಕ್ಕೆ ಕರೆ ಮಾಡಿದ ಕೂಡಲೇ ಒಬ್ಬ ಬಡವನ ಮನೆ ಬಾಗಿಲಿಗೆ ಆಂಬುಲೆನ್ಸ್ ಹೋಗಿ ನಿಲ್ಲುತ್ತದೆ ಎಂದರೆ ಅದಕ್ಕೆ ಯಡಿಯೂರಪ್ಪ ಕಾರಣ ಎಂದಿದ್ದಾರೆ.
ಇದನ್ನೂ ಓದಿ | ನನಗೆ ಸಾಮರ್ಥ್ಯ ಇದೆ: BJP ಹೈಕಮಾಂಡ್‌ಗೆ ಪರೋಕ್ಷ ಸಂದೇಶ ನೀಡಿದ ವಿಜಯೇಂದ್ರ ?
ಈ ಹಿಂದೆ ಯಡಿಯೂರಪ್ಪನವರು ಅನೇಕ ಅವಮಾನಗಳನ್ನು ಎದುರಿಸಿದ್ದಾರೆ ಎಂದ ವಿಜಯೇಂದ್ರ, ದೊಡ್ಡ ನಾಯಕನಾಗಿ ಬೆಳೆದು ಬಿಡ್ತಾರೆ ಎಂದು ಅವರ ಕಾರಿಗೆ ಎಲ್ಲರೂ ಕಲ್ಲು ಕೂಡ ಹೊಡೆದಿದ್ದರು. ಆದರೆ ಯಡಿಯೂರಪ್ಪ ಅದೇ ಕಲ್ಲುಗಳನ್ನು ಮೆಟ್ಟಿ, ಅದನ್ನು ತಮ್ಮ ತಳಪಾಯ ಮಾಡಿಕೊಂಡು ಬೆಳೆದಿದ್ದಾರೆ.
ರಾಜ್ಯಕ್ಕೆ ಬಿಎಸ್‌ವೈ ಅಪಾರ ಕೊಡುಗೆ ನೀಡಿದ್ದಾರೆ. ಮಠಗಳು ಸರಕಾರಕ್ಕಿಂತ ಹೆಚ್ಚಿನ ಕೆಲಸ ಮಾಡುತ್ತವೆ, ಹಾಗಾಗಿ ಮಠ ಮಾನ್ಯಗಳಿಗೆ ಶಕ್ತಿಕೊಡಲು ಅನುದಾನ ಕೊಟ್ಟರು. ದೇಶದಲ್ಲಿ ಯಾರೂ ಮಾಡಿರದಂತಹ, ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದರು. ಎಲ್ಲ ಸಮುದಾಯದ ಏಳಿಗೆಗಾಗಿ ಯಡಿಯೂರಪ್ಪ ಶ್ರಮಿಸಿದರು ಎಂದು ವಿಜಯೇಂದ್ರ ಕೊಂಡಾಡಿದರು.
ಇಡೀ ರಾಜ್ಯದಲ್ಲಿ ಶಿಕಾರಿಪುರದಂತೆ ಅಭಿವೃದ್ಧಿ ಹೊಂದಿರುವ ಮತ್ತೊಂದು ತಾಲ್ಲೂಕು ಇಲ್ಲ. ಯಡಿಯೂರಪ್ಪನವರು ತಮ್ಮ ನಾಲ್ಕು ದಶಕದ ರಾಜಕೀಯ ಹೋರಾಟದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ರಾಜಕೀಯ ವಿರೋಧಗಳನ್ನೆಲ್ಲಾ ಎದರಿಸಿ ಪ್ರಾಮಾಣಿಕತೆಯಿಂದ ದುಡಿಯುವ ಯಡಿಯೂರಪ್ಪನವರ ಛಲ ನಮಗೆಲ್ಲ ಮಾದರಿಯಾಗಬೇಕು. ಸಾಮಾಜಿಕ ನ್ಯಾಯವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಆದರ್ಶವನ್ನು ಪಾಲನೆ ಮಾಡಿದ್ದಾರೆ. ಯಡಿಯೂರಪ್ಪನವರಿಗೆ ಪ್ರೇರಣೆ ಕೊಟ್ಟಿದ್ದು ಬಸವಣ್ಣನವರ ವಿಚಾರಗಳು.
ವೇದಿಕೆ ಮೇಲಿರುವ ಮುಖಂಡರಿಗೆ ಒಂದು ಕಿವಿಮಾತು ಹೇಳಿದ ವಿಜಯೇಂದ್ರ, ಕಾಡಿನಲ್ಲಿ ಬೇಟೆಯಾಡುವ ಹುಲಿಯನ್ನು ಬೋನ್‌ನಲ್ಲಿ ಕೂಡಿ ಹಾಕಿದ್ದರೂ ಅದು ಎಂದಿಗೂ ಹುಲಿಯೆ. ಅದು ಹುಲ್ಲು ತಿನ್ನಲ್ಲ ಎಂದು ಹೆಳಿದರು. ಈ ಮೂಲಕ ಸೂಚ್ಯವಾಗಿ ಯಡಿಯೂರಪ್ಪ ಅವರ ಶಕ್ತಿ ಇನ್ನೂ ಕುಂದಿಲ್ಲ ಎನ್ನುವ ಸಂದೇಶವನ್ನು ಕೊಟ್ಟರು.
ಇದನ್ನೂ ಓದಿ | ಯಡಿಯೂರಪ್ಪ ಸರ್ಜಿಕಲ್ ಸ್ಟ್ರೈಕ್ ಫೇಲ್: ಬಿಜೆಪಿಯಲ್ಲಿ ಸಂತೋಷ್ ಮೇಲುಗೈ