Site icon Vistara News

BJP Social Media | ಜಾಲತಾಣ ಕಾರ್ಯಕ್ಕೆ ಹೊಸ ಜೀವ ನೀಡಲು ಮುಂದಾದ ಬಿಜೆಪಿ: ರಾಜ್ಯ ಸಂಚಾಲಕರ ಬದಲಾವಣೆ

vikas-puttur-appinted-as-karnataka-bjp-social-media-incharge

ಬೆಂಗಳೂರು: ಕಾಂಗ್ರೆಸ್‌ ನಿರಂತರವಾಗಿ ದಾಳಿ ಮಾಡುತ್ತಲೇ ಇದ್ದರೂ ಅತ್ಯಂತ ಯಾಂತ್ರಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ಸಾಮಾಜಿಕ ಜಾಲತಾಣ (BJP Social Media) ಪ್ರಕೋಷ್ಠಕ್ಕೆ ಮರುಜೀವ ನೀಡಲು ಬಿಜೆಪಿ ಮುಂದಾಗಿದೆ. ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸಂಚಾಲಕರಾಗಿ ವಿಕಾಸ್‌ ಪುತ್ತೂರು ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇಮಕ ಮಾಡಿದ್ದಾರೆ.

ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ಹಾಗೂ ಸಂವಹನ ವಿಭಾಗವನ್ನು ಶಾಸಕ ಪ್ರಿಯಾಂಕ್‌ ಖರ್ಗೆ, ಮಾಜಿ ಐಎಎಸ್‌ ಅಧಿಕಾರಿ ಶಶಿಕಾಂತ್‌ ಸೆಂಥಿಲ್‌ ನಿರ್ವಹಿಸುತ್ತಿದ್ದಾರೆ.

ಪೇಸಿಎಂ, 40% ಸರ್ಕಾರ, ಸಿಎಂ ಅಂಕಲ್‌, ದಿನಕ್ಕೊಂದು ಪ್ರಶ್ನೆ ಸೇರಿ ಸರ್ಕಾರದ ವಿರುದ್ಧ ಅನೇಕ ಗಮನ ಸೆಳೆಯುವ ಅಭಿಯಾನಗಳನ್ನು ಕಾಂಗ್ರೆಸ್‌ ನಡೆಸುತ್ತಿದೆ. ಆದರೆ ಬಿಜೆಪಿ ವತಿಯಿಂದ ಅಧಿಕೃತ ಮಾಹಿತಿ ನೀಡುವುದನ್ನು ಹೊರತುಪಡಿಸಿ ಹಾಗೂ ಆಗಾಗ್ಗೆ ಕಾಂಗ್ರೆಸ್‌ಗೆ ಪ್ರತಿಕ್ರಿಯೆ ನೀಡುವುದು ಬಿಟ್ಟರೆ ಹೊಸ ಅಭಿಯಾನವನ್ನು ರೂಪಿಸಿರಲಿಲ್ಲ.

ಬೃಹತ್‌ ಪ್ರಮಾಣದ ಕಾರ್ಯಕರ್ತರ ಬೆಂಬಲವನ್ನು ಹೊಂದಿದ್ದರೂ ಸಂಘಟನೆಯನ್ನು ಸಾಮಾಜಿಕ ಜಾಲತಾಣಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಬಾಟ್‌ಗಳನ್ನು ಬಳಸಿಕೊಂಡು ರಿ ಟ್ವೀಟ್‌ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಬಿಜೆಪಿ ವಲಯದಲ್ಲಿ ಅನೇಕ ದಿನಗಳಿಂದ ಈ ಕುರಿತು ಅಸಮಾಧಾನ ವ್ಯಕ್ತವಾಗುತ್ತಿತ್ತು. ಈ ಹಿಂದೆ ಸಾಮಾಜಿಕ ಜಾಲತಾಣ ಸಂಚಾಲಕರಾಗಿದ್ದ ವಿನೋದ್‌ ಅವರು ಐಟಿ ಕ್ಷೇತ್ರದ ಹಿನ್ನೆಲೆ ಹೊಂದಿರುವುದರಿಂದ ಸಂಗಟನಾತ್ಮಕ ಹಿಡಿತ ಸಿಗುತ್ತಿಲ್ಲ, ಬದಲಾವಣೆ ಮಾಡಬೇಕು ಎಂದು ರಾಜ್ಯ ನಾಯಕರ ಮೇಲೆ ಒತ್ತಡ ಹೇರಲಾಗುತ್ತಿತ್ತು.

ಇದೀಗ ದಕ್ಷಿಣ ಕನ್ನಡದ ವಿಕಾಸ್‌ ಪುತ್ತೂರು ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ, ರಾಷ್ಟ್ರೀಯ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾ ವಕ್ತಾರರಾಗಿ ವಿಕಾಸ್‌ ಪುತ್ತೂರು ಕಾರ್ಯನಿರ್ವಹಿಸಿದ್ದಾರೆ. ಸದ್ಯ ರಾಜ್ಯ ಬಿಜೆಪಿ ವಕ್ತಾರ, ಹಾಗೂ ತುಮಕೂರು ಜಿಲ್ಲೆಯಲ್ಲಿ ಮಧುಗಿರಿ ಸಂಘಟನಾತ್ಮಕ ಜಿಲ್ಲಾ ಉಸ್ತುವಾರಿಯಾಗಿಯು ಹೊಣೆ ಹೊತ್ತಿದ್ದಾರೆ.

13 ವರ್ಷದಿಂದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ವಿಕಾಸ್‌ ಪುತ್ತೂರು ನೇಮಕ ಮಾಡಿರುವುದರಿಂದ ಸಂಘಟನಾತ್ಮಕವಾಗಿ ಸಾಮಾಜಿಕ ಜಾಲತಾಣ ಕೆಲಸ ಮಾಡುತ್ತದೆ ಎಂಬ ಆಶಾ ಭಾವನೆಯನ್ನು ಬಿಜೆಪಿ ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ | Election 2023 | ರಮೇಶ್‌ ಜಾರಕಿಹೊಳಿ ಬಿಜೆಪಿ ಬಿಡಲ್ಲ, ಮುಂದೆ ಮಂತ್ರಿ ಮಾಡುವಾಗ ಅವರ ಹೆಸರೇ ಮೊದಲಿರಲಿದೆ; ಯತ್ನಾಳ್‌

Exit mobile version