Site icon Vistara News

Elephant attack : ಕಡಬ ಬಳಿ ಕಾಡಾನೆ ಹಿಡಿದ ಅರಣ್ಯಾಧಿಕಾರಿಗಳ ಮೇಲೆ ಗ್ರಾಮಸ್ಥರಿಂದ ಹಲ್ಲೆ ಯತ್ನ, ಕಲ್ಲು ತೂರಾಟ

#image_title

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಹು ಸಾಹಸದಿಂದ ಗುರುವಾರ ಸೆರೆ (Elephant attack) ಹಿಡಿದಿದ್ದಾರೆ. ಆದರೆ ದುರಂತವೆಂದರೆ ಆನೆಗಳನ್ನು ಹಿಡಿದು ಅದೇ ಸಿಬ್ಬಂದಿಗಳ ಮೇಲೆ ಗ್ರಾಮಸ್ಥರು ಹಲ್ಲೆಗೆ ಮುಂದಾಗಿದ್ದು, ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ.

ಫೆ.20 ಬೆಳಿಗ್ಗೆ ಕಾಡಾನೆ ದಾಳಿಯಿಂದ ಸ್ಥಳೀಯ ನಿವಾಸಿಗಳಾದ ರಂಜಿತಾ (21) ಮತ್ತು ರಮೇಶ್ ರೈ (52 ವ) ಮೃತಪಟ್ಟಿದ್ದರು. ಅಂದು ರಾತ್ರಿಯೇ ಮೈಸೂರು ದುಬಾರೆಯಿಂದ 5 ಆನೆಗಳನ್ನು ತರಲಾಗಿತ್ತು. ಫೆ.21ರಂದು ಕಾರ್ಯಾಚರಣೆ ಆರಂಭಿಸಲಾಗಿತ್ತು. ಡ್ರೋನ್ ಕ್ಯಾಮೆರಾವನ್ನು ಬಳಸಿ ನರಹಂತಕ ಆನೆಯನ್ನು ಪತ್ತೆ ಹಚ್ಚಿದ್ದು, ಫೆ. ೨೩ (ಗುರುವಾರ) ಪುಂಡ ಕಾಡಾನೆಯನ್ನು ಹಿಡಿಯಲಾಗಿತ್ತು. ಕಡಬ ಬಳಿಯ ಮೂಜೂರು ರಕ್ಷಿತಾರಣ್ಯದ ಕೊಂಬಾರು(ಮಂಡೆಕರ) ಎಂಬಲ್ಲಿ ಆನೆಯನ್ನು ಪತ್ತೆ ಹಚ್ಚಿ ಗನ್ ಮೂಲಕ ಆನೆಗೆ ಅರಿವಳಿಕೆ ನೀಡಿ ಸೆರೆ ಹಿಡಿಯಲಾಗಿತ್ತು.

ಕಲ್ಲು ತೂರಾಟ ಯಾಕೆ?

ಈ ನಡುವೆ ಒಂದು ಆನೆ ಸಿಕ್ಕಿದ ಸಂಭ್ರಮದಲ್ಲಿದ್ದ ಸಿಬ್ಬಂದಿ ಪ್ಯಾಕಪ್‌ ಮಾಡಿದರು. ಇದು ಗ್ರಾಮಸ್ಥರನ್ನು ಕೆರಳಿಸಿತ್ತು. ನಮ್ಮ ಗ್ರಾಮದ ಕಾಡಿನ ಭಾಗದಲ್ಲಿ ಒಂದಲ್ಲ, ಇಂಥ ಹಲವು ಆನೆಗಳಿವೆ. ಅವೆಲ್ಲವನ್ನೂ ಸೆರೆ ಹಿಡಿಯಬೇಕು ಎಂದು ಅವರು ಅಗ್ರಹಿಸಿದರು. ಅರಣ್ಯ ಸಿಬ್ಬಂದಿ ಒಂದು ಕಾಡಾನೆ ಸಿಕ್ಕಿದ ಕೂಡಲೇ ಇಲ್ಲಿಂದ ಹೊರಡುತ್ತಾರೆ ಎಂದು ಭಾವಿಸಿ ಅವರು ಆಕ್ಷೇಪಿಸಿದರು.

ಒಂದು ಆನೆಯನ್ನಷ್ಟೇ ಹಿಡಿದಿದ್ದೀರಿ, ಇನ್ನಷ್ಟು ಆನೆಗಳನ್ನು ಹಿಡಿಯಿರಿ ಎಂದು ಬೇಡಿಕೆ ಇಟ್ಟ ನಾಗರಿಕರು ಇಲಾಖಾ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಕಾಡಾನೆ ಪತ್ತೆ ಕಾರ್ಯಾಚರಣೆಯಲ್ಲಿದ್ದ ಅರಣ್ಯಾಧಿಕಾರಿಗಳು, ಪೋಲೀಸರ ಮೇಲೆ ಹಲ್ಲೆಗೆ ಯತ್ನ ನಡೆಸಿದರು.

ಕಾರ್ಯಾಚರಣೆ ನಿಲ್ಲಿಸಿಲ್ಲ, ನಾಳೆ ಬರುತ್ತೇವೆ ಎಂದು ಹೇಳಿದರೂ ಕೇಳದೇ ಕಲ್ಲು ತೂರಾಟ ನಡೆಸಲಾಗಿದೆ. ಗ್ರಾಮಸ್ಥರ ಆಕ್ರೋಶದಿಂಧ ಎರಡು ಪೊಲೀಸ್ ಜೀಪ್, ಅರಣ್ಯ ಇಲಾಖೆಯ ಒಂದು ಜೀಪ್, ರೇಂಜರ್ ಒಬ್ಬರ ಬ್ರೀಝಾ ಗಾಡಿಗಳು ಜಖಂಗೊಂಡಿವೆ. ಡಿವೈಎಸ್ಪಿ ಅವರದೂ ಸೇರಿ ಅರಣ್ಯ ಇಲಾಖೆಗೆ ಸೇರಿದ ವಾಹನಗಳ ಗಾಜು ಪುಡಿ ಪುಡಿಯಾಗಿವೆ.

ಇದನ್ನೂ ಓದಿ : Operation Elephant: ಕಡಬದಲ್ಲಿ ಇಬ್ಬರನ್ನು ಬಲಿ ಪಡೆದ ಪುಂಡ ಕಾಡಾನೆ ಕೊನೆಗೂ ಸೆರೆ; ಹೇಗಿತ್ತು ಆಪರೇಷನ್‌ ಎಲಿಫೆಂಟ್‌?

Exit mobile version