Site icon Vistara News

Contaminated Water : ಚಿತ್ರದುರ್ಗದ ಕಲುಷಿತ ನೀರ ಹನಿ ಹಿಂದಿದ್ಯಾ ಲವ್‌ ಕಹಾನಿ?; ಬಲಿಯಾಯ್ತು 2ನೇ ಜೀವ

Contaminated water

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ (Chitradurga News) ಕವಾಡಿಗರ ಹಟ್ಟಿಯಲ್ಲಿ ಸಂಭವಿಸಿದ ಕಲುಷಿತ ನೀರು (Contaminated Water) ದುರಂತದಲ್ಲಿ ಎರಡನೇ ಜೀವಹಾನಿ (Second death) ಸಂಭವಿಸಿದೆ. ಭಾನುವಾರ ರಾತ್ರಿ ಇಲ್ಲಿ ನೀರು ಸೇವಿಸಿದ ಸುಮಾರು 40 ಮಂದಿ ವಾಂತಿ ಮತ್ತು ಅತಿಸಾರ ಸಮಸ್ಯೆಗೆ ಗುರಿಯಾಗಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಮಂಜುಳಾ ಎಂಬ 27 ವರ್ಷದ ಯುವತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಉಳಿದ 40ಕ್ಕೂ ಅಧಿಕ ಮಂದಿ (40 people fall sick) ಚಿತ್ರದುರ್ಗ ಮತ್ತು ದಾವಣಗೆರೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಇಲ್ಲಿ ನೀರು ಕುಡಿದು ಬೆಂಗಳೂರು ಬಸ್‌ ಹತ್ತಿದ್ದ ರಘು ಎಂಬವರು ಅಲ್ಲಿ ಅಸ್ವಸ್ಥಗೊಂಡು ಪ್ರಾಣ ಕಳೆದುಕೊಂಡಿದ್ದಾರೆ.

ಕವಾಡಿಗರ ಹಟ್ಟಿಯ ರಘು (26) ಅವರು ಸೋಮವಾರ ರಾತ್ರಿ ಊಟ ಮಾಡಿ‌, ನೀರು ಕುಡಿದು ಬೆಂಗಳೂರಿಗೆ ಹೊರಟಿದ್ದರು. ಅವರು ಬಸ್ಸಿನಲ್ಲಿ ಬೆಳಗ್ಗೆ ಬೆಂಗಳೂರು ತಲುಪಿದ್ದರು. ಯಾವುದೋ ಕೆಲಸದ ನಿಮಿತ್ತ ಅವರು ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿದ್ದರು.

ಬೆಳಗ್ಗೆ ಬೆಂಗಳೂರಿನಲ್ಲಿ ಇಳಿಯುತ್ತಿದ್ದಂತೆಯೇ ಅವರಿಗೆ ವಾಂತಿ, ಹೊಟ್ಟೆನೋವು, ಅತಿಸಾರ ಕಾಣಿಸಿಕೊಂಡಿದೆ. ಈ ನಡುವೆ ಊರಿನಲ್ಲಿ ಹಲವರಿಗೆ ಅಸ್ವಸ್ಥತೆ ಕಾಡಿದ ಹಿನ್ನೆಲೆಯಲ್ಲಿ ಮನೆಯವರು ರಘು ಅವರ ಆರೋಗ್ಯ ವಿಚಾರಿಸಿದ್ದರು. ಈ ನಡುವೆ ಅವರಿಗೂ ಸಮಸ್ಯೆಗಳು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮನೆಯವರ ಸಲಹೆಯಂತೆ ಕೂಡಲೇ ಆಸ್ಪತ್ರೆಗೆ ಹೋದರು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾದ ರಘು ಅವರು ಸಂಜೆಯ ಹೊತ್ತಿಗೆ ಪ್ರಾಣವನ್ನೇ ಕಳೆದುಕೊಂಡರು. ಹೀಗೆ ಬೆಳಗ್ಗೆ ಮಂಜುಳಾ ಮತ್ತು ಸಂಜೆಯ ಹೊತ್ತು ರಘು ಮೃತಪಟ್ಟಿದ್ದಾರೆ.

ಇನ್ನೂ ಹಲವರ ಆರೋಗ್ಯ ಸ್ಥಿತಿ ಅಪಾಯದಲ್ಲಿ

ನೀರು ಕುಡಿದ ಬಳಿಕ ಹಲವರಿಗೆ ಅನಾರೋಗ್ಯ ಕಾಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥರಾಗಿ ಆಸ್ಪತ್ರೆ ಸೇರಿದವರಲ್ಲಿ ಎಂಟು ಮಂದಿ 18 ವರ್ಷದೊಳಗಿನ ಮಕ್ಕಳಿದ್ದಾರೆ. ಇವರ ಪೈಕಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ನಾಲ್ವರು ಅಸ್ವಸ್ಥರಿಗೆ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರನ್ನು ದಾವಣಗೆರೆ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ.

ವಾಟರ್‌ ಮ್ಯಾನ್‌ ಮೇಲೆ ಸಂಶಯ ಕಣ್ಣು

ಕಲುಷಿತ ನೀರಿನ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಎಲ್ಲರಿಗೂ ಮೊದಲ ಸಂಶಯ ಬಂದಿರುವುದು ವಾಟರ್‌ಮ್ಯಾನ್‌ ಸುರೇಶ್‌ ಮೇಲೆ. ಆತ ವರ್ಷಾನುಗಟ್ಟಲೆ ಟ್ಯಾಂಕ್‌ ತೊಳೆಯದೆ ಅದಕ್ಕೇ ನೀರು ತುಂಬುತ್ತಿದ್ದ. ಹೀಗಾಗಿ ನೀರು ಕಲುಷಿತಗೊಂಡಿರಬಹುದು ಎನ್ನುವುದು ಒಂದು ಸಂಶಯವಾಗಿತ್ತು. ಆದರೆ, ಅದು ಒಮ್ಮೆಗೇ ಇಷ್ಟೊಂದು ತೀವ್ರ ತರ ಸಮಸ್ಯೆ ಸೃಷ್ಟಿಸಿರಲಾರದು ಎಂಬ ಅಭಿಪ್ರಾಯವೂ ಇತ್ತು.

ಆದರೆ, ಅದರ ಜತೆಗೇ ಬಯಲುಗೊಂಡ ಪ್ರೇಮ ಪ್ರಕರಣವೊಂದು ಸುರೇಶ್‌ ಮೇಲಿನ ಸಂಶಯಕ್ಕೆ ಪುಷ್ಟಿ ನೀಡಿದೆ. ಅದೇನೆಂದರೆ, ಸುರೇಶ್‌ ಮಗಳ ಮದುವೆ!

ಸುರೇಶ್‌ ಲಿಂಗಾಯತ ಸಮುದಾಯದವರು. ಅವರ ಮಗಳನ್ನು ಈ ಊರಿನ ಎಸ್‌ಟಿ ಸಮುದಾಯದ ಯುವಕನೊಬ್ಬ ಪ್ರೀತಿ ಮಾಡುತ್ತಿದ್ದ. ಇದನ್ನು ಸುರೇಶ್‌ ವಿರೋಧಿಸಿದ್ದರು. ಆದರೆ, ಸುರೇಶ್‌ ಅವರನ್ನು ಧಿಕ್ಕರಿಸಿ ಈ ಜೋಡಿ ಕೆಲವು ದಿನಗಳ ಹಿಂದೆ ಮದುವೆ ಮಾಡಿಕೊಂಡಿದೆ.

ಈ ಪ್ರೀತಿ ಮತ್ತು ಮದುವೆ ವಿಚಾರವಾಗಿ ಕಳೆದ ವಾರ ಸುರೇಶ್‌ ಭಾರಿ ಆಕ್ರೋಶದಿಂದ ಮಾತನಾಡಿದ್ದರು, ಜಗಳ ಮಾಡಿದ್ದರು. ಇದೇ ಜಾತಿ ವೈಷಮ್ಯದಿಂದ ಅವರು ಎಸ್‌ಟಿ ಸಮುದಾಯದವರೇ ಬಳಸುವ ನೀರಿಗೆ ಏನಾದರೂ ಬೆರೆಸಿದರಾ ಎನ್ನುವ ಸಂಶಯ ಕೆಲವರಿಗಿದೆ.

ವಾಟರ್‌ಮ್ಯಾನ್‌ ಸುರೇಶ್‌ ಮೇಲೆ ಶಂಕೆ ವ್ಯಕ್ತಪಡಿಸಿರುವ ಗ್ರಾಮಸ್ಥರು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಇದೀಗ ವಾಟರ್‌ಮ್ಯಾನ್‌ ಸುರೇಶ್‌ ಮೇಲೆ ದೂರು ದಾಖಲಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.

ಹಿಂದಿನ ಸುದ್ದಿ : Contaminated water : ಚಿತ್ರದುರ್ಗದಲ್ಲಿ ಕಲುಷಿತ ನೀರಿನ ಅನಾಹುತ; 27ರ ಯುವತಿ ಸಾವು, 40 ಜನರು ಅಸ್ವಸ್ಥ

Exit mobile version