ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ 200ಕ್ಕೂ ಅಧಿಕ ಹಳ್ಳಿಗಳ ಜಾತ್ರೆಯಲ್ಲಿ (Village festival) ದೇವರ ಹೆಸರಿನಲ್ಲಿ ನೂರಾರು ಕೋಣ ಮತ್ತು ಕುರಿಗಳನ್ನು ಬಲಿ (Animal Sacrifice) ನೀಡುವ ಪದ್ಧತಿ ಇನ್ನೂ ಜೀವಂತವಾಗಿದೆ. ಡಿಸೆಂಬರ್ 18ರಂದು ದೇವಿಕೇರಾ ಜಾತ್ರೆಯ (Devikera Jatre) ಮೂಲಕ ಈ ಅನಿಷ್ಟ ಪದ್ಧತಿ ಆರಂಭವಾಗಿ ಫೆಬ್ರವರಿವರೆಗೂ ನಡೆಯುತ್ತದೆ. ಸಾಲದ್ದಕ್ಕೆ ಕೋಣದ ಮಾಂಸ ತಿನ್ನಲು ನಿರಾಕರಿಸುವ ದಲಿತರಿಗೆ ಗ್ರಾಮದಿಂದಲೇ ಬಹಿಷ್ಕರಿಸುವ ಎಚ್ಚರಿಕೆಯನ್ನೂ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರಾ ಜಾತ್ರೆಯಲ್ಲಿ ಈ ಅನಿಷ್ಟ ಪದ್ಧತಿ ಜಾರಿಯಲ್ಲಿದೆ. ದೇವರಿಗೆ ಬಲಿ ಕೊಟ್ಟ ಕೋಣ ಮಾಂಸ ತಿನ್ನಲು ನಿರಾಕರಿಸಿದರೆ, ದೇವರ ಬಲಿಯನ್ನು ವಿರೋಧಿಸಿದ್ರೆ ಗ್ರಾಮಕ್ಕೆ ಪ್ರವೇಶ ನಿರಾಕರಿಸುವ ಅಲಿಖಿತ ನಿಯಮ ಜಾರಿಯಲ್ಲಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಪೊಲೀಸರ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಡಿ.18ರಂದು ದೇವಿಕೇರಾ ಗ್ರಾಮದಲ್ಲಿ ಎರಡು ದಿನ ಗ್ರಾಮದೇವತೆ ಜಾತ್ರೆ ನಡೆಯುತ್ತಿದೆ. ಇಲ್ಲಿ ದ್ಯಾಮವ್ವ, ಮರೆಮ್ಮ, ಪಾಲ್ಕಮ್ಮ ಜಾತ್ರೆ ಜಾತ್ರೆ ಅದ್ಧೂರಿಯಾಗಿ ನೆರವೇರುತ್ತದೆ. ಇಲ್ಲಿ ನಡೆಯುವ ಪ್ರಾಣಿ ಬಲಿಗೆ ದಲಿತ ಸಮುದಾಯವು ಆಕ್ಷೇಪಿಸಿದೆ.
ರಾಜ್ಯ ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ ಬಣ) ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಡಿಸಿ, ಎಸ್ಪಿಗೆ ದೂರು ನೀಡಿದ್ದಾರೆ. ʻʻದೇವಿಕೇರಾ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿಪರೀತ ಕೋಣ ಬಲಿ ನಡೆಯುತ್ತವೆ, ಜೊತೆಗೆ ಸುರಪುರ, ಹುಣಸಗಿ ತಾಲೂಕಿನಲ್ಲಿ ಡಿಸೆಂಬರ್ ನಿಂದ ಫೆಬ್ರವರಿ ವರೆಗೆ ಹೆಚ್ಚು ಜಾತ್ರೆಗಳು ನಡೆಯುತ್ತವೆ. ಈ ಜಾತ್ರೆಗಳಲ್ಲಿ ದೇವರ ಹೆಸರಿನಲ್ಲಿ ನೂರಾರು ಪ್ರಾಣಿಗಳನ್ನು ಬಲಿ ಕೊಡ್ತಾರೆ. ಈ ತರಹದ ಮೂಢನಂಬಿಕೆ ಹೆಚ್ಚಾಗ್ತಿದೆ. ಹೀಗಾಗಿ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಪ್ರಾಣಿ ಬಲಿ ತಡೆಯಬೇಕು, ದಲಿತರಿಗೆ ಆಗುತ್ತಿರುವ ತೊಂದರೆಯನ್ನೂ ನಿವಾರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Murder Case : ಶಾಲೆಗೆ ಬಿಯರ್ ಬಾಟಲ್ ಎಸೆದ ಪುಂಡರು; ಪ್ರಶ್ನಿಸಿದ್ದಕ್ಕೆ ಯುವಕನನ್ನೇ ಕೊಂದರು
ದೇವರ ಹೆಸರಲ್ಲಿ ಪ್ರಾಣಿ ಬಲಿ ಬಗ್ಗೆ ಡಂಗುರ ಸಾರಿಸಲಾಗಿದೆ. ದೇವಿಕೇರಾ ಗ್ರಾಮದಲ್ಲಿ ಪ್ರಾಣಿ ಬಲಿಗಾಗಿ ಪ್ರತಿ ಮನೆಯಿಂದ ಚಂದಾ ವಸೂಲಿಯ ಆರೋಪ ಕೇಳಿಬಂದಿದೆ. ಚಂದಾ ಎತ್ತುವ ಬಗ್ಗೆ ಗೌಪ್ಯವಾಗಿರಬೇಕೆಂದು ಗ್ರಾಮದಲ್ಲಿ ಎಚ್ಚರಿಕೆ ಕೂಡಾ ನೀಡಲಾಗಿದೆ ಎನ್ನಲಾಗಿದೆ.
ಎರಡು ವರ್ಷದ ಹಿಂದೆ ಇಲ್ಲಿ ಬೇರೆ ಬೇರೆ ಜಾತಿಗಳ ನಡುವೆ ಜಗಳವಾಗಿ ಒಂದು ಕೊಲೆ ನಡೆದಿತ್ತು. ಇದೀಗ ಕೊಲೆಯಾದವನ ಕುಟುಂಬಿಕರು ಕೊಲೆ ಮಾಡಿದವನ ಕುಟುಂಬವನ್ನು ಸರ್ವನಾಶ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಜಾತ್ರೆಯಲ್ಲಿ ಕೋಣನ ಬದಲು ಇವರ ತಲೆ ಕಡೆಯುವುದಾಗಿ ಬೆದರಿಸಿದ್ದಾರೆ. ಇದನ್ನೂ ಗಮನಿಸಬೇಕು ಎಂದು ಮನವಿ ಮಾಡಲಾಗಿದೆ.
ದೇವಿಕೇರಾ ಜಾತ್ರೆಯಲ್ಲಿ ಕುರಿಕೋಣ ಬಲಿ ತಡೆದರೆ ಮುಂದಿನ ಜಾತ್ರೆಯಲ್ಲಿಯೂ ಇದನ್ನು ಅನುಸರಿಸಲು ಸಾಧ್ಯವಾಗುತ್ತದೆ ಎಂದು ಮನವಿಯಲ್ಲಿ ಸಲಹೆ ನೀಡಲಾಗಿದೆ.