Site icon Vistara News

Vims Bellary | ರೋಗಿಗಳ ಸಾವು ಪ್ರಕರಣ; ವಿಮ್ಸ್‌ಗೆ ಡಾ.ಸ್ಮಿತಾ ನೇತೃತ್ವದ ತನಿಖಾ ತಂಡ ಆಗಮನ

vims bellary

ಬಳ್ಳಾರಿ: ವಿಮ್ಸ್‌ನಲ್ಲಿ ಕೇಬಲ್ ಬ್ಲಾಸ್ಟ್ ಆಗಿರುವ ಹಿನ್ನೆಲೆಯಲ್ಲಿ (Vims Bellary) ಐಸಿಯುನಲ್ಲಿರುವ ರೋಗಿಗಳು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಡಾ. ಸ್ಮಿತಾ ನೇತೃತ್ವದಲ್ಲಿ ನೇಮಿಸಿರುವ ತನಿಖಾ ಸಮಿತಿಯು ವಿಮ್ಸ್‌ಗೆ ಆಗಮಿಸಿದ್ದು, ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಕಲೆಹಾಕುತ್ತಿದೆ.

೧೧.೪೫ಕ್ಕೆ ವಿಮ್ಸ್‌ಗೆ ಆಗಮಿಸಿರುವ ತಂಡವು ನೇರವಾಗಿ ವಿಮ್ಸ್ ನಿರ್ದೇಶಕರ ಚೇಂಬರ್‌ಗೆ ತೆರಳಿದ್ದು, ದಾಖಲೆ ಸಮೇತ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ವಿದ್ಯುತ್ ಸಮಸ್ಯೆಯಿಂದಾಗಿ ಐವರು ರೋಗಿಗಳು ಮೃತಪಟ್ಟಿದ್ದಾರೆಂಬ ಆರೋಪ ಇರುವುದರಿಂದ ರೋಗಿಗಳು ವೈದ್ಯಕೀಯ ಪರೀಕ್ಷೆ ವರದಿಯನ್ನು ಪರಿಶೀಲಿಸಲಾಗುತ್ತಿದೆ. ಸಾಧ್ಯವಾದರೆ ರೋಗಿಗಳ ಸಂಬಂಧಿಗಳನ್ನು ಭೇಟಿಯಾಗಿ ವರದಿ ಸಂಗ್ರಹಿಸುವ ಸಾಧ್ಯತೆ ಇದೆ ಎಂಬ ಮಾಹಿತಿಯು ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯದಿಂದಾಗಿ ವೆಂಟಿಲೇಟರ್ ಸಮಸ್ಯೆಯಿಂದಾಗಿ ರೋಗಿಗಳು ಮೃತಪಟ್ಟಿದ್ದಾರೆಂದು ಮೃತರ ಸಂಬಂಧಿಗಳು ಆರೋಪಿಸುತ್ತಿದ್ದಾರೆ. ಆದರೆ, ರೋಗಿಗಳಿಗೆ ನೀಡಿರುವ ಚಿಕಿತ್ಸೆ ಆಧಾರದ ಮೇಲೆ ವಾಸ್ತವತೆ ಏನು ಎಂಬುದನ್ನು ಕಂಡುಕೊಳ್ಳಲು ತನಿಖಾ ತಂಡ ಮುಂದಾಗಿದೆ. ಅಲ್ಲದೆ, ಐಸಿಯುಗೆ ವಿದ್ಯುತ್ ಸಂಪರ್ಕದಿಂದ ತೊಂದರೆಯಾಗಿದೆಯೇ? ವಿದ್ಯುತ್ ಸರಬರಾಜಿಗೆ ಪರ್ಯಾಯ ವ್ಯವಸ್ಥೆ ಇದೆಯಾ? ಅಲ್ಲಿ ನಿಯಮಗಳು ಪಾಲನೆಯಾಗಿವೆಯೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ತನಿಖಾ ತಂಡವು ಮಾಹಿತಿ ಸಂಗ್ರಹಿಸಲು ಮುಂದಾಗಿದೆ.

ತನಿಖಾ ತಂಡದಲ್ಲಿ ಬೆಂಗಳೂರಿನ ಬಿಎಂಸಿಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕರಾದ ಡಾ. ಸ್ಮಿತಾ, ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಡಾ.ಸಿದ್ದಿಕಿ ಅಹಮದ್, ಬಿಎಂಸಿಯ ಜನರಲ್ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕರಾದ ಡಾ.ದಿವಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಯೋಗೇಶ್, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಉಮಾ ಕೆ.ಎ. ಅವರನ್ನೊಳಗೊಂಡಿದ್ದು, ತಂಡವು ವಿಮ್ಸ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ | VIMS problem | ಕೇಬಲ್‌ ಬ್ಲಾಸ್ಟ್‌ನಿಂದ ವಿದ್ಯುತ್‌ ವ್ಯತ್ಯಯ ಆಗಿದ್ದು ನಿಜವೆಂದ ಜಿಲ್ಲಾಧಿಕಾರಿ, ಆದರೆ,,,

Exit mobile version