Site icon Vistara News

Vims Bellary | ವಿಮ್ಸ್ ದುರಂತ; ಸುಧಾಕರ್‌ ಮೇಲೆ ರೆಡ್ಡಿ ಕಿಡಿ, ಕಾಂಗ್ರೆಸ್‌ ಸಿಡಿಮಿಡಿ, ಡೈರೆಕ್ಟರ್‌ ದೂರು ಕೊಡಲು ರೆಡಿ

ವಿಮ್ಸ್‌

ಬಳ್ಳಾರಿ: ವಿಮ್ಸ್ ಪ್ರಕರಣವು (Vims Bellary) ಜನಪ್ರತಿನಿಧಿಗಳ ಹೇಳಿಕೆ, ರಾಜಕೀಯ ಪ್ರತಿಷ್ಠೆ, ಸ್ವಹಿತಾಸಕ್ತಿಯಿಂದ ಬೇರೆ ಬೇರೆ ತಿರುವು ಪಡೆದುಕೊಂಡಿದೆ. ಪ್ರಕರಣದ ಹಿನ್ನೆಲೆಯಲ್ಲಿ ಶನಿವಾರ ಇಬ್ಬರು ಶಾಸಕರು ಹೇಳಿಕೆ, ವಿಮ್ಸ್ ನಿರ್ದೇಶಕರು ಹೇಳಿಕೆಗಳು ಇಡೀ ಪ್ರಕರಣ ದಿಕ್ಕು ದೆಸೆಯನ್ನು ಬದಲಾಯಿಸುವ ಲಕ್ಷಣಗಳು ಗೋಚರಿಸುತ್ತಿದೆ.

ಈ ಡೈರೆಕ್ಟರ್ ಬೇಡವೆಂದು ಹೇಳಿದರೂ, ನಮ್ಮ ಮಾತನ್ನು ಕೇಳದೆ, ಗಂಗಾಧರಗೌಡ ಅವರನ್ನು ಮಾಡಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ. ಈಗಿನವರಿಗಿಂತ ಒಳ್ಳೆಯ ವೈದ್ಯರು ವಿಮ್ಸ್‌ನಲ್ಲಿ ಇದ್ದಾರೆ, 27 ವರ್ಷ ಸರ್ವಿಸ್ ಇರುವ ವೈದ್ಯರು ಇದ್ದಾರೆ ಎಂದು ಬಳ್ಳಾರಿ ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ತಮ್ಮದೇ ಸರ್ಕಾರದ ಸಚಿವರ ಆಯ್ಕೆ ಬಗ್ಗೆ ಅಸಮಾಧಾನವನ್ನು ಹೊರಹಾಕಿದರು.

ಕಾಂಗ್ರೆಸ್‌ನಿಂದ ಪ್ರತಿಭಟನೆ ರಾಜೀನಾಮೆಗೆ ಆಗ್ರಹ
ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವಿವೇಕಿ, ಬಿಜೆಪಿ ಕೊಲೆಗಡುಕ ಸರ್ಕಾರ ಎಂದು ಶಾಸಕ ನಾಗೇಂದ್ರ ಕಿಡಿಕಾರಿ, ಕೂಡಲೇ ಮುಖ್ಯಮಂತ್ರಿಗಳು, ವೈದ್ಯಕೀಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ನಂತರದಲ್ಲಿ ವಿಮ್ಸ್ಗೆ ತೆರಳಿ ವಿಮ್ಸ್ ನಿರ್ದೇಶಕರು ಹತ್ತಿರ ಹೋಗಿ, ಘಟನೆಯ ಬಗ್ಗೆ ಮಾಹಿತಿ ಪಡೆದು, ನಿರ್ದೇಶಕರನ್ನು ಶಾಸಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಸಮಿತಿಯೊಂದು ಬರುತ್ತದೆ. ಎಲ್ಲ ಮಾಹಿತಿ ನೀಡಬೇಕೆಂದು ಶಾಸಕರು ನಿರ್ದೇಶಕರಿಗೆ ತಿಳಿಸಿದ್ದಾರೆ.

ನಮ್ಮ ವಿರುದ್ಧ ಷಡ್ಯಂತ್ರ- ನಿರ್ದೇಶಕ
ತಾವು ವಿಮ್ಸ್ ನಿರ್ದೇಶಕರಾಗಿರುವುದರಿಂದ ಕೆಲವೊಬ್ಬರು ಸಹಿಸದೆ ವಿಷಯವನ್ನು ವೈಭವೀಕರಣ ಮಾಡುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಕೆಲವೊಂದು ದಾಖಲೆಗಳು ಲಭ್ಯವಾಗಿದ್ದು, ಆಡಿಯೊಗಳು ಇವೆ. ಸಂಪೂರ್ಣವಾಗಿ ದಾಖಲೆಗಳು ಲಭ್ಯವಾದ ನಂತರ ಜಿಲ್ಲಾಧಿಕಾರಿ ಜತೆ ಚರ್ಚಿಸಿ, ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಲಾಗುತ್ತದೆ. ಮಾಹಿತಿ ಮತ್ತು ದಾಖಲೆಗಳನ್ನು ಸಿಕ್ಕ ನಂತರ ಬಹಿರಂಗಪಡಿಸುವುದಾಗಿ ನಿರ್ದೇಶಕ ಡಾ. ಗಂಗಾಧರಗೌಡ ಹೇಳಿಕೆಯು ಚರ್ಚೆಗೆ ಕಾರಣವಾಗಿದೆ.

ವೈದ್ಯಕೀಯ ಸಚಿವರ ಭೇಟಿ
ಪ್ರಕರಣದ ಹಿನ್ನಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಸುಧಾಕರ್ ಭಾನುವಾರ ಬಳ್ಳಾರಿಗೆ ಆಗಮಿಸಿ ವಿಮ್ಸ್‌ಗೆ ಭೇಟಿ ನೀಡಲಿದ್ದಾರೆ. ವಿಧಾನಸಭೆಯಲ್ಲಿ ವಿಮ್ಸ್ ವಿಷಯವು ಚರ್ಚೆಗೆ ಕಾರಣವಾಗಿದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸ್ತವತೆಯನ್ನು ಅರಿತುಕೊಳ್ಳಲು ವಿಮ್ಸ್‌ಗೆ ಆಗಮಿಸಲಿದ್ದಾರೆ. ಶುಕ್ರವಾರ ಆಗಮಿಸಿದ ತನಿಖಾ ತಂಡವು ರಾತ್ರಿ 9 ಗಂಟೆವರೆಗೆ ವಿಮ್ಸ್‌ನಲಿ ಮಾಹಿತಿ ಸಂಗ್ರಹಿಸಿ, ನಿನ್ನೆ ರಾತ್ರಿಯೇ ಬೆಂಗಳೂರಿಗೆ ತೆರಳಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | Vims Bellary | ವಿಮ್ಸ್‌ ಐಸಿಯು ಪವರ್‌ ಕಟ್‌; ತನಿಖೆ ಚುರುಕು, ಸರ್ಕಾರಕ್ಕೆ ಶೀಘ್ರ ವರದಿ?

Exit mobile version