Site icon Vistara News

Vinay Kulkarni: ಶಾಸಕ ವಿನಯ್​ ಕುಲಕರ್ಣಿಗೆ ಮತ್ತೆ ಹಿನ್ನಡೆ; ದೋಷಾರೋಪ ಕೈಬಿಡಲು ಹೈಕೋರ್ಟ್‌ ನಕಾರ

Vinay Kulkarni

ಬೆಂಗಳೂರು: ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯ ಯೋಗೀಶ್‌ಗೌಡ ಕೊಲೆ ಪ್ರಕರಣದಲ್ಲಿ ಧಾರವಾಡ ಕಾಂಗ್ರೆಸ್ ಶಾಸಕ ವಿನಯ್​ ಕುಲಕರ್ಣಿಗೆ ಮತ್ತೆ ಹಿನ್ನಡೆಯಾಗಿದೆ. ಜನಪ್ರತಿನಿಧಿಗಳ ವಿಶೇಷ ಸೆಷನ್ಸ್ ನ್ಯಾಯಾಲಯ ನಿಗದಿಪಡಿಸಿರುವ ದೋಷಾರೋಪ ಕೈಬಿಡುವಂತೆ ಕೋರಿ ಶಾಸಕ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ತಮ್ಮ ವಿರುದ್ಧ ಹೊರಿಸಲಾಗಿರುವ ದೋಷಾರೋಪ ಮತ್ತು ವಿಶೇಷ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ವಿನಯ್‌ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ನ್ಯಾಯಪೀಠ, ಇದೀಗ ಶಾಸಕ ವಿನಯ್​ ಕುಲಕರ್ಣಿ ವಿರುದ್ಧ ಚಾರ್ಜ್‌ಶೀಟ್‌ ಕೈಬಿಡಲು ನಿರಾಕರಿಸಿದೆ.

ಇದನ್ನೂ ಓದಿ | Lok Sabha Election 2024: ಪಕ್ಷೇತರ ಸ್ಪರ್ಧೆ ಎಂದ ಜಿ.ಬಿ. ವಿನಯ್ ಕುಮಾರ್; ದಾವಣಗೆರೆ ಕಾಂಗ್ರೆಸ್‌ಗೆ ಬಂಡಾಯ ಬಿಸಿ

ಈ ಹಿಂದೆ ಅರ್ಜಿಗೆ ಸಂಬಂಧಿಸಿದಂತೆ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೋಷಾರೋಪ ಪಟ್ಟಿಯಲ್ಲಿನ ಎಲ್ಲಾ ದಾಖಲೆಗಳನ್ನು ಆರೋಪಿಗೆ ಒದಗಿಸಿಲ್ಲ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್, ಶಸ್ತ್ರಾಸ್ತ್ರ ಕಾಯ್ದೆ 1959ರ ಪ್ರಕಾರ ಮೊದಲ ಆರೋಪಿ ಬಸವರಾಜ ಮುತ್ತಗಿ ಮೇಲೆ ಮಾತ್ರವೇ ಪೂರ್ವಾನುಮತಿ ಪಡೆದಿದೆ. ವಿನಯ್​ ಕುಲಕರ್ಣಿ ಮೇಲೆ ಪಡೆದಿಲ್ಲ. ವಿನಯ್ ಕುಲಕರ್ಣಿ ವಿರುದ್ಧ ವಿಶೇಷ ನ್ಯಾಯಾಲಯ ದೋಷಾರೋಪ ನಿಗದಿಪಡಿಸುವಾಗ ಶಸ್ತ್ರಾಸ್ತ್ರ ಕಾಯ್ದೆಯನ್ನೂ ಅಡಕಗೊಳಿಸಿರುವುದು ತಪ್ಪು ಮತ್ತು ಕಾನೂನಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದರು.

ಸಿಬಿಐ ಪರ ವಕೀಲರು, ಪ್ರಕರಣದಲ್ಲಿ ಅರ್ಜಿದಾರರ ಕೈವಾಡ ಇರುವುದು ಸಾಕ್ಷ್ಯಾಧಾರಗಳಿಂದ ತಿಳಿದು ಬಂದಿದೆ. ಆದ್ದರಿಂದ ಅರ್ಜಿ ವಜಾಗೊಳಿಸಿ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ಮುಂದುವರಿಯಲು ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದರು. ವಾದ-ಪ್ರತಿವಾದ ಆಲಿಸಿದ್ದ ಪೀಠ, ತೀರ್ಪು ಕಾಯ್ದಿರಿಸಿತ್ತು.

ಏನಿದು ಪ್ರಕರಣ?

ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2016ರ ಜೂನ್ 15ರಂದು ಯೋಗೀಶ್‌ಗೌಡ ಅವರ ಕೊಲೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ 2020ರ ನವೆಂಬರ್‌ನಲ್ಲಿ ವಿನಯ್‌ ಕುಲಕರ್ಣಿ ಅವರ ಬಂಧನವಾಗಿತ್ತು. ಅವರು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಒಂಬತ್ತು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು.

ಇದನ್ನೂ ಓದಿ | Lok Sabha Election 2024: ಎಚ್‌ಡಿಕೆ ಕಾಣೆಯಾಗಿದ್ದಾರೆ! ಇನ್ನು ಜನರಿಗೆ ಸಿಗ್ತಾರಾ; ಏನಿದು ಪೋಸ್ಟರ್?

ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ಒಟ್ಟು 21 ಆರೋಪಿಗಳ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಪ್ರಕರಣದ ಆರೋಪಿ, ಶಾಸಕ ವಿನಯ್‌ ಕುಲಕರ್ಣಿ ಅವರು ದೋಷಾರೋಪ ನಿಗದಿ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Exit mobile version