ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧೆಗೆ ಹಿಂದೇಟು ಹಾಕುತ್ತಿಲ್ಲ. ಶಿಗ್ಗಾಂವಿ 100 ಪರ್ಸೆಂಟ್ ಕಾಂಗ್ರೆಸ್ ಗೆಲ್ಲುವ ಕ್ಷೇತ್ರ (Karnataka Election), ಯಾವುದೇ ಕಾರಣಕ್ಕೂ ನಾನು ಹಿಂದೇಟು ಹಾಕುವ ಪ್ರಶ್ನೆ ಇಲ್ಲ. ನಾನು ರಾಜಕಾರಣ ಮಾಡಲು ಬಂದಿದ್ದೇನೆ. ಇರುವುದು ಒಂದು ದಿನ, ಸಾಯುವುದು ಒಂದು ದಿನ. ಸ್ಪರ್ಧೆ ಮಾಡುವಂತೆ ಹೈಕಮಾಂಡ್ ಕೇಳಿತ್ತು. ಇಲ್ಲಿ 13, 14 ಮಂದಿ ಆಕಾಂಕ್ಷಿಗಳಿದ್ದಾರೆ, ಅವರಿಗೆ ಕೊಡಿ ಅವರು ಗೆಲ್ಲುತ್ತಾರೆ ಎಂದು ಹೇಳಿರುವುದಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಬಗ್ಗೆ ಸವಣೂರಿನ ದೊಡ್ಡ ಹುಣಸೆಮಠಕ್ಕೆ ಸೋಮವಾರ ಭೇಟಿ ನೀಡಿದ್ದ ವೇಳೆ ಪ್ರತಿಕ್ರಿಯಿಸಿದ ಅವರು, ನನಗೆ ನಮ್ಮ ಕ್ಷೇತ್ರವಿದೆ (ಧಾರವಾಡ ಗ್ರಾಮೀಣ), ಕಳೆದ ಮೂರು ಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರದಲ್ಲಿ ಅಜ್ಜಂಪೀರ್ ಖಾದ್ರಿಯವರ ಮೇಲೆ ಷಡ್ಯಂತ್ರ ನಡೆದಿದೆ. ರಾಜಕಾರಣದಲ್ಲಿ ನೇರಾ ನೇರಾ ಸ್ಪರ್ಧೆ ಇರಬೇಕು. ಹಿಂದಿನಿಂದ ಷಡ್ಯಂತ್ರ ಮಾಡಿ ಗೆಲ್ಲುವುದು ಗೆಲುವಲ್ಲ. ನೇರವಾಗಿ ಜನರಿಂದ ನಾವು ಗೆಲ್ಲಬೇಕು, ಯಾರನ್ನೋ ಮೋಸ ಮಾಡಿ ಗೆಲ್ಲುವಂಥದ್ದು ದೊಡ್ಡ ಗೆಲುವಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದರು.
ಧಾರವಾಡಕ್ಕೆ ಹೋಗಲು ನನಗೆ ಸಾಕಷ್ಟು ಅಡ್ಡಿಪಡಿಸಿದ್ದಾರೆ. ಯಾವುದೇ ತಪ್ಪು ಮಾಡದೆಯೇ ಹಲವಾರು ತಪ್ಪುಗಳನ್ನು ಹಾಕುತ್ತಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆ ದಮನ ಆಗುವುದನ್ನು ನೋಡುತ್ತಿದ್ದೇನೆ. ರಾಹುಲ್ ಗಾಂಧಿಯವರ ಪ್ರಕರಣ ನೋಡಿದರೆ ರಾಜಕಾರಣವೇ ಮಾಡಬಾರದು ಎನ್ನಿಸುತ್ತಿದೆ. ನಮ್ಮ ಜನರಿಗಾಗಿ ನಾವು ರಾಜಕಾರಣ ಮಾಡಬೇಕಿದೆ ಎಂದು ಹೇಳಿದರು.
ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಎಲ್ಲರಿಗೂ 3ಡಿ ಸಿನಿಮಾ ತೋರಿಸಿದ್ದಾರೆ. ಯಾವ ಒಬಿಸಿ 2ಡಿ, ಅದನ್ನು ಯಾರೂ ಕೇಳಿಲ್ಲ. ಇನ್ನೊಂದು ಸಮಾಜ ಮೀಸಲಾತಿ ಕಿತ್ತು ಕೊಡುವಂತಹ ಹೊಲಸು ರಾಜಕಾರಣ ಮತ್ತೊಂದಿಲ್ಲ. ಚುನಾವಣೆ ಹೊತ್ತಲ್ಲಿ ಸಮಾಜ-ಸಮಾಜದ ನಡುವೆ ಬೆಂಕಿ ಹಚ್ಚುವ ಕೆಲಸ ಅವರು ಮಾಡಿದ್ದಾರೆ. ಇದು ಅವೈಜ್ಞಾನಿಕವಾಗಿದೆ, ರಾಜಕೀಯ ದುರುದ್ದೇಶದಿಂದ ಮೀಸಲಾತಿ ಪರಿಷ್ಕರಣೆ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ | SC ST Reservation: ಬೋವಿ, ಲಂಬಾಣಿ, ಕೊರಮ, ಕೊರಚ ಜನಾಂಗದವರೂ ಎಸ್‌ಸಿ ಪಟ್ಟಿಯಲ್ಲೇ ಇರುತ್ತಾರೆ: ಸಿಎಂ ಬೊಮ್ಮಾಯಿ
ಬೊಮ್ಮಾಯಿ ಅವರು ಜೇನು ಗೂಡಿಗೆ ಕೈ ಹಾಕಿಲ್ಲ. ಜೇನು ನೊಣಗಳನ್ನು ಎಬ್ಬಿಸಿ ಎಲ್ಲರನ್ನೂ ಕಡಿಯಲು ಬಿಟ್ಟಿದ್ದಾರೆ. ಅವರು ಜೇನುಗೂಡಿಗೆ ಕೈ ಹಾಕಲ್ಲ. ಜನರ ಕಡೆ ಹಾಕಿಸುತ್ತಾರೆ. ಇದು ಇಂದು ನೆನ್ನೆಯದಲ್ಲ, ಅರವಿಂದ ಬೆಲ್ಲದ್ ಅವರು ಐದಾರು ತಿಂಗಳ ಹಿಂದೆಯೇ ಹೇಳಿದ್ದಾರೆ. ಇದು ಪ್ರೀ ಪ್ಲ್ಯಾನ್ ಆಗಿದ್ದು, ನಾನು ಇದನ್ನು ಖಂಡಿಸುತ್ತೇನೆ ಎಂದು ತಿಳಿಸಿದರು.
ವಿನಯ್ ಕುಲಕರ್ಣಿಗೆ ಸಿಗುವುದೇ ಶಿಗ್ಗಾಂವಿ ಟಿಕೆಟ್?
ಮಾ.25ರಂದು ಕಾಂಗ್ರೆಸ್‌ನಿಂದ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆದರೆ, ಈ ಪಟ್ಟಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಯಾರೆಂದು ಕುತೂಹಲ ಮೂಡಿದೆ. ಲಿಂಗಾಯತ ಸಮುದಾಯದವರೇ ಆದ ವಿನಯ್ ಕುಲಕರ್ಣಿಗೆ ಟಿಕೆಟ್ ನೀಡಿದರೆ ಕ್ಷೇತ್ರದಲ್ಲಿ ಪೈಪೋಟಿ ಉಂಟಾಗಲಿದೆ. ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ತವರು ಕ್ಷೇತ್ರದ ಕಡೆಗೆ ಹೆಚ್ಚು ಗಮನ ಹರಿಸುವಂತಹ ಸನ್ನಿವೇಶ ಸೃಷ್ಟಿಸಿ ಬೊಮ್ಮಾಯಿ ಅವರನ್ನು ಶಿಗ್ಗಾಂವಿಯಲ್ಲೇ ಕಟ್ಟಿಹಾಕುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ಅನುಸರಿಸಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಧಾರವಾಡ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೊಳಗಾಗಿ ಹೊರಬಂದಿರುವ ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲೆಗೆ ಪ್ರವೇಶಕ್ಕೆ ಕೋರ್ಟ್ ನಿರ್ಬಂಧವಿದೆ. ಹೀಗಾಗಿ ಧಾರವಾಡ ಗ್ರಾಮೀಣ ಕ್ಷೇತ್ರದ ಬದಲಿಗೆ ಶಿಗ್ಗಾಂವಿಯಿಂದಲೇ ವಿನಯ್ ಕುಲಕರ್ಣಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗೆಯೇ ಶಿಗ್ಗಾವಿಯಲ್ಲಿ ಪಂಚಮಸಾಲಿ ಮತಗಳನ್ನು ಸೆಳೆಯಲು ವಿನಯ್ ಕುಲಕರ್ಣಿಗೆ ಕಾಂಗ್ರೆಸ್ ಮಣೆ ಹಾಕುವ ಸಾಧ್ಯತೆಯೂ ಹೆಚ್ಚಾಗಿದೆ ಎನ್ನಲಾಗಿದೆ.