ಹುಬ್ಬಳ್ಳಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಿನಯ ಕುಲಕರ್ಣಿ (Vinaya Kulkarni) ಅವರಿಗೆ ಧಾರವಾಡ ಜಿಲ್ಲೆ ಪ್ರವೇಶಿಸಲು ಜನಪ್ರತಿನಿಧಿಗಳ ನ್ಯಾಯಾಲಯ ಅನುಮತಿ ನಿರಾಕರಿಸಿದೆ. ಹೀಗಾಗಿ ಅವರು ಚುನಾವಣೆಯ ಸ್ಪರ್ಧಿ ಆದರೂ ಹೊರಗೇ ನಿಂತು ಸೆಣಸಾಡಬೇಕಾಗಿದೆ.
ಧಾರವಾಡ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ ಗೌಡ ಅವರ ಹತ್ಯೆ ಪ್ರಕರಣದ (Yogesh gowda murder case) ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ವಿನಯ ಕುಲಕರ್ಣಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇತ್ತೀಚೆಗೆ ನಡೆದು ತೀರ್ಪನ್ನು ಏಪ್ರಿಲ್ 18ಕ್ಕೆ ಕಾಯ್ದಿರಿಸಲಾಗಿತ್ತು. ಮಂಗಳವಾರ ಜನಪ್ರತಿನಿಧಿಗಳ ನ್ಯಾಯಾಲಯವು ಈ ಅರ್ಜಿಯನ್ನು ವಜಾಗೊಳಿಸುವ ಮೂಲಕ ಅನುಮತಿಯನ್ನು ನಿರಾಕರಿಸಿದೆ.
ವಿನಯ್ ಕುಲಕರ್ಣಿ ಅವರು ಜಿ.ಪಂ.ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಈ ನಡುವೆ, ಜಾಮೀನು ನೀಡುವಾಗ ಧಾರವಾಡ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ಷರತ್ತು ವಿಧಿಸಿತ್ತು.
ಇದನ್ನು ಪ್ರಶ್ನಿಸಿ ವಿನಯ ಕುಲಕರ್ಣಿ ಅವರು ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಆದರೆ, ಯಾವ ಕಾರಣಕ್ಕೂ ನಿರ್ಬಂಧ ಹಿಂಪಡೆಯಬಾರದು ಎಂದು ಸಿಬಿಐ ವಾದಿಸಿತ್ತು. ʻʻ120 ಸಾಕ್ಷಿಗಳಲ್ಲಿ 90 ಮಂದಿ ಧಾರವಾಡದವರೇ ಆಗಿದ್ದಾರೆ. ಕ್ಷೇತ್ರಕ್ಕೆ ಪ್ರವೇಶ ಆದರೆ ಆದೇಶ ದುರುಪಯೋಗ ಆಗಬಹುದು. ಮುಂದಿನ ಹಂತದಲ್ಲಿ ಕೇಸ್ ಗೆ ಸಮಸ್ಯೆ ಆಗಬಹುದು. ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆʼʼ ಎಂದು ಸಿಬಿಐ ವಾದಿಸಿತ್ತು. ಸಿಬಿಐ ವಾದ ಪುರಸ್ಕರಿಸಿ ವಿನಯ್ ಕುಲಕರ್ಣಿ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
ವಿನಯ ಕುಲಕರ್ಣಿ ಅವರಿಗೆ ಕಾಂಗ್ರೆಸ್ ಪಕ್ಷ ಧಾರವಾಡ ಗ್ರಾಮೀಣ ಕ್ಷೇತ್ರದ ಟಿಕೆಟ್ ನೀಡಿದೆ. ಹೀಗಾಗಿ ಚುನಾವಣೆ ಸ್ಪರ್ಧೆ ಕಾರಣದಿಂದ ಷರತ್ತು ಸಡಿಲಿಸಲು ಅವಕಾಶ ಕೋರಲಾಗಿತ್ತು. ಆದರೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ.ಜಯಂತ್ ಕುಮಾರ್ ಇದನ್ನು ಒಪ್ಪಿಲ್ಲ.
ನಿಜವೆಂದರೆ, ಕಾಂಗ್ರೆಸ್ ವಿನಯ ಕುಲಕರ್ಣಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಶಿಗ್ಗಾಂವಿಯಿಂದ ಕಣಕ್ಕಿಳಿಸಲು ಬಯಸಿತ್ತು. ಹಾಗೆ ಮಾಡಿದರೆ ಧಾರವಾಡ ಪ್ರವೇಶದ ಕುರಿತು ಇರುವ ಗೊಂದಲವು ಪರಿಹಾರವಾಗುತ್ತದೆ, ಸಿಎಂ ವಿರುದ್ಧ ಒಬ್ಬ ಪ್ರಬಲ ಅಭ್ಯರ್ಥಿಯೂ ಸಿಕ್ಕಂತಾಗುತ್ತದೆ ಎನ್ನುವುದು ಲೆಕ್ಕಾಚಾರ ಆಗಿತ್ತು. ಆದರೆ, ವಿನಯ ಕುಲಕರ್ಣಿ ಅವರು ಅಳೆದೂ ತೂಗಿ ಧಾರವಾಡದಿಂದಲೇ ಕಣಕ್ಕಿಳಿಯುವುದಾಗಿ ಹಠ ಹಿಡಿದಿದ್ದರು. ಅವರ ಪತ್ನಿಯಂತೂ ಯಾವ ಕಾರಣಕ್ಕೂ ವಿನಯ ಕುಲಕರ್ಣಿ ಅವರು ಶಿಗ್ಗಾಂವಿಯಲ್ಲಿ ನಿಲ್ಲುವುದಿಲ್ಲ ಎಂದಿದ್ದರು.
ಇದೀಗ ಧಾರವಾಡ ಗ್ರಾಮೀಣ ಕ್ಷೇತ್ರದ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಅವರ ಪತ್ನಿಯೇ ಮುಂಚೂಣಿಯಲ್ಲಿ ನಿಂತು ನಡೆಸಬೇಕಾಗಿದೆ.
ಇದನ್ನೂ ಓದಿ : Inside Story: ಸಿಎಂ ಬೊಮ್ಮಾಯಿ ಚೆಕ್‌ಮೇಟ್‌ಗೆ ವಿನಯ್ ಕುಲಕರ್ಣಿ ಗಲಿಬಿಲಿ: ಬಿಸಿ ತುಪ್ಪವಾಯಿತು ಶಿಗ್ಗಾಂವಿ ಟಿಕೆಟ್