Site icon Vistara News

Vinaya Kulkarni : ವಿನಯ ಕುಲಕರ್ಣಿಗೆ ಟಿಕೆಟ್‌ ಕೊಟ್ಟೋರಿಗೆ ಧಾರವಾಡ ಎಂಟ್ರಿ ಇಲ್ಲ ಅಂತ ಗೊತ್ತಿಲ್ವೇ?: ಹೈಕೋರ್ಟ್‌ ಪ್ರಶ್ನೆ

vinaya kulkarni

#image_title

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ (Karnataka Elections 2023) ಸ್ಪರ್ಧಿಸಿರುವುದರಿಂದ 30 ದಿನಗಳ ಕಾಲವಾದರೂ ಧಾರವಾಡ ಜಿಲ್ಲೆ ಪ್ರವೇಶಿಸಲು ಅವಕಾಶ ಕೊಡಿ ಎಂಬ ಧಾರವಾಡ ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ (Vinaya Kulkarni) ಅವರ ಮನವಿಯನ್ನು ಹೈಕೋರ್ಟ್‌ ತಳ್ಳಿಹಾಕಿದೆ. ʻಧಾರವಾಡ ಕ್ಷೇತ್ರದಿಂದ ಟಿಕೆಟ್ ನೀಡಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ವಿನಯ್‌ ಕುಲಕರ್ಣಿ ಧಾರವಾಡ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಅಂಶ ಗೊತ್ತಿಲ್ಲವೇ. ಹೇಗೆ ಟಿಕೆಟ್ ನೀಡಿದರು?” ಎಂದು ಮೌಖಿಕವಾಗಿ ಪ್ರಶ್ನೆ ಮಾಡಿದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಿನಯ್ ಕುಲಕರ್ಣಿ ಅವರು 30 ದಿನಗಳ ಕಾಲ ಧಾರವಾಡದಲ್ಲಿ ನೆಲೆಸಲು ಅನುಮತಿ ನೀಡುವಂತೆ ಕೋರಿದ್ದ ಹಾಗೂ ಸಾಕ್ಷ್ಯ ನಾಶ ಸಂಬಂಧ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ವಿನಾಯಿತಿ ಕೋರಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿತು. ಅರ್ಜಿ ವಜಾ ಮಾಡಿರುವುದಕ್ಕೆ ಸೂಕ್ತ ಕಾರಣಗಳನ್ನು ಆದೇಶದ ಪ್ರತಿಯಲ್ಲಿ ವಿವರಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಎಚ್‌ ಜಾಧವ್‌ ಅವರು “ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶ ನಿರ್ಬಂಧಿಸಲಾಗಿದೆ. ಇದೀಗ ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಕುಲಕರ್ಣಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ನ್ಯಾಯಸಮ್ಮತ ಚುನಾವಣೆಯ ದೃಷ್ಟಿಯಿಂದ ಅವರಿಗೆ ಧಾರವಾಡ ಪ್ರವೇಶಕ್ಕೆ ಅವಕಾಶ ನೀಡಬೇಕು” ಎಂದು ಕೋರಿದರು.

ಇದಕ್ಕೆ ಪೀಠವು “ಟಿಕೆಟ್ ನೀಡಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಅರ್ಜಿದಾರರು ಧಾರವಾಡ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಅಂಶ ಗೊತ್ತಿಲ್ಲವೇ? ಹೇಗೆ ಟಿಕೆಟ್ ನೀಡಿದರು” ಎಂದು ಅರ್ಜಿದಾರರ ವಕೀಲರನ್ನು ಪ್ರಶ್ನಿಸಿತು.

ಇಲ್ಲಿ ಯಾಕೆ ಪ್ರಶ್ನೆ ಮಾಡುತ್ತೀರಿ?

“ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ವಿಚಾರಣಾಧೀನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಹೀಗಿರುವಾಗ, ನೀವು ಸುಪ್ರೀಂ ಕೋರ್ಟ್‌ನಲ್ಲಿ ಇದನ್ನು ಪ್ರಶ್ನೆ ಮಾಡಬಹುದು. ಇಲ್ಲಿ ಏಕೆ ಪ್ರಶ್ನೆ ಮಾಡಿದ್ದೀರಿ?” ಎಂದು ಕೇಳಿದ ಪೀಠವು ಅರ್ಜಿಗಳನ್ನು ವಜಾಗೊಳಿಸಿತು. ಅಲ್ಲದೇ, ಅರ್ಜಿ ವಜಾಕ್ಕೆ ಕಾರಣಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗುವುದು ಎಂದು ತಿಳಿಸಿತು.

ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು “ವಿನಯ ಕುಲಕರ್ಣಿ ಅವರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ 45 ಸಾಕ್ಷಿಗಳಿದ್ದು, ಅವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಪ್ರಕರಣ ಗಂಭೀರವಾಗಿರುವುದರಿಂದ ಅವರಿಗೆ ಧಾರವಾಡ ಪ್ರವೇಶ ನಿರ್ಬಂಧಿಸಿರುವುದು ಸೇರಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ” ಎಂದರು.

ವಿನಯ ಕುಲಕರ್ಣಿ ನಿರ್ಬಂಧಕ್ಕೆ ಕಾರಣವಾದ ಯೋಗೀಶ್‌ ಗೌಡ ಕೊಲೆ ಪ್ರಕರಣ

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಕೂಡಾ ಒಬ್ಬ ಆರೋಪಿ. ನ್ಯಾಯಾಲಯದ ಅನುಮತಿ ಪಡಯದೇ ಧಾರವಾಡ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂಬುದು ಸೇರಿ ನಾಲ್ಕು ಷರತ್ತುಗಳನ್ನು ಕುಲಕರ್ಣಿ ಅವರಿಗೆ ಜಾಮೀನು ಮಂಜೂರು ಮಾಡುವಾಗ ಸುಪ್ರೀಂ ಕೋರ್ಟ್ ವಿಧಿಸಿತ್ತು. ಈಗ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಯಾಗಿರುವುದರಿಂದ ಧಾರವಾಡ ಪ್ರವೇಶಿಸಲು ವಿನಯ್ ಕುಲಕರ್ಣಿ ನ್ಯಾಯಾಲಯದ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.

ಮುಂದೇನು?

ತನಗೆ ಧಾರವಾಡ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಗೊತ್ತಿದ್ದೇ ವಿನಯ ಕುಲಕರ್ಣಿ ಅಲ್ಲಿಂದ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಒಂದೋ ಅವರು ಹೊರಗೇ ಇದ್ದು ಚುನಾವಣೆ ಫೈಟ್‌ ಮಾಡಬಹುದು. ಅವರ ಪತ್ನಿ ಶಿವಲೀಲಾ ಕುಲಕರ್ಣಿ ಚುನಾವಣೆಯ ಉಸ್ತುವಾರಿಯನ್ನು ನೋಡಿಕೊಳ್ಳಬಹುದು.

ಈ ನಡುವೆ ಒಂದು ವೇಳೆ ವಿನಯ ಕುಲಕರ್ಣಿ ಅವರು ಕ್ರಿಮಿನಲ್‌ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ತಾಂತ್ರಿಕ ಕಾರಣಗಳಿಗಾಗಿ ನಾಮಪತ್ರವನ್ನೇ ಅಸಿಂಧುಗೊಳಿಸಿದರೂ ಅವಕಾಶವೊಂದು ಬೇಕು ಎಂಬ ಕಾರಣಕ್ಕಾಗಿ ಸ್ವತಃ ಶಿವಲೀಲಾ ಅವರೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ : Vinay Kulkarni: ಡಿಕೆಶಿಯಂತೆಯೇ ವಿನಯ್‌ ಕುಲಕರ್ಣಿ ಪ್ಲ್ಯಾನ್‌; ಪತ್ನಿಯಿಂದಲೂ ಕೊನೇ ಕ್ಷಣದಲ್ಲಿ ನಾಮಪತ್ರ

Exit mobile version