Site icon Vistara News

Vinaya Kulkarni : 30 ದಿನ ಧಾರವಾಡದಲ್ಲಿರಲು ಬಿಡಿ, ಕೋರ್ಟ್‌ಗೆ ವಿನಯ ಕುಲಕರ್ಣಿ ಮನವಿ, ನಾಳೆ ತೀರ್ಮಾನ ಸಾಧ್ಯತೆ

vinaya kulkarni

#image_title

ಹುಬ್ಬಳ್ಳಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ವಿನಯ ಕುಲಕರ್ಣಿ (Vinaya Kulkarni) ಅವರು ಚುನಾವಣೆಯ ಸಮಯದಲ್ಲಿ ಮೂವತ್ತು ದಿನವಾದರೂ ಧಾರವಾಡದಲ್ಲಿರಲು ಅವಕಾಶ ಕೊಡಿ ಎಂದು ಕೋರಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಕೋರ್ಟ್‌ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಧಾರವಾಡ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ ಗೌಡ ಅವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನಯ ಕುಲಕರ್ಣಿ ಅವರಿಗೆ ಕೋರ್ಟ್‌ ಅನುಮತಿ ಇಲ್ಲದೆ ಧಾರವಾಡ ಜಿಲ್ಲೆ ಪ್ರವೇಶಿಸುವಂತಿಲ್ಲ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿತ್ತು. ಆದರೆ, ಚುನಾವಣೆ ಸಮಯದಲ್ಲಾದರೂ ಅಲ್ಲಿರುವಂತೆ ಅವಕಾಶ ಕೊಡಿ ಎಂದು ವಿನಯ ಕುಲಕರ್ಣಿ ಕೋರಿದ್ದಾರೆ.

ವಿನಯ ಕುಲಕರ್ಣಿ ಅವರ ಅರ್ಜಿಯನ್ನು ಸ್ವೀಕರಿಸಿದ ಹೈಕೋರ್ಟ್‌ನ ನ್ಯಾ. ನಟರಾಜನ್ ಅವರನ್ನೊಳಗೊಂಡ ಪೀಠವು ಈ ಸಂಬಂಧ ಸಿಬಿಐಗೆ ನೋಟಿಸ್‌ ನೀಡಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.

ಧಾರವಾಡ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ ಗೌಡ ಅವರ ಹತ್ಯೆ ಪ್ರಕರಣದ (Yogesh gowda murder case) ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ವಿನಯ ಕುಲಕರ್ಣಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇತ್ತೀಚೆಗೆ ನಡೆದು ತೀರ್ಪನ್ನು ಏಪ್ರಿಲ್‌ 18ಕ್ಕೆ ಕಾಯ್ದಿರಿಸಲಾಗಿತ್ತು. ಮಂಗಳವಾರ ಜನಪ್ರತಿನಿಧಿಗಳ ನ್ಯಾಯಾಲಯವು ಈ ಅರ್ಜಿಯನ್ನು ವಜಾಗೊಳಿಸುವ ಮೂಲಕ ಅನುಮತಿಯನ್ನು ನಿರಾಕರಿಸಿತ್ತು.

ವಿನಯ್‌ ಕುಲಕರ್ಣಿ ಅವರು ಜಿ.ಪಂ.ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದರು. ಈ ನಡುವೆ, ಜಾಮೀನು ನೀಡುವಾಗ ಧಾರವಾಡ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ಷರತ್ತು ವಿಧಿಸಿತ್ತು.

ಇದನ್ನು ಪ್ರಶ್ನಿಸಿ ವಿನಯ ಕುಲಕರ್ಣಿ ಅವರು ಜನಪ್ರತಿನಿಧಿಗಳ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಆದರೆ, ಯಾವ ಕಾರಣಕ್ಕೂ ನಿರ್ಬಂಧ ಹಿಂಪಡೆಯಬಾರದು ಎಂದು ಸಿಬಿಐ ವಾದಿಸಿತ್ತು. ʻʻ120 ಸಾಕ್ಷಿಗಳಲ್ಲಿ 90 ಮಂದಿ ಧಾರವಾಡದವರೇ ಆಗಿದ್ದಾರೆ. ಕ್ಷೇತ್ರಕ್ಕೆ ಪ್ರವೇಶ ಆದರೆ ಆದೇಶ ದುರುಪಯೋಗ ಆಗಬಹುದು. ಮುಂದಿನ ಹಂತದಲ್ಲಿ ಕೇಸ್ ಗೆ ಸಮಸ್ಯೆ ಆಗಬಹುದು. ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆ ಇದೆʼʼ ಎಂದು ಸಿಬಿಐ ವಾದಿಸಿತ್ತು. ಸಿಬಿಐ ವಾದ ಪುರಸ್ಕರಿಸಿ ವಿನಯ್ ಕುಲಕರ್ಣಿ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತ್ತು. ಇದೀಗ ವಿನಯ ಕುಲಕರ್ಣಿ ಅವರು ಮತ್ತೆ ಚುನಾವಣೆಗಾಗಿಯಾದರೂ 30 ದಿನ ಕಾಲ ಧಾರವಾಡದಲ್ಲಿರಲು ಅವಕಾಶ ಕೊಡಿ ಎಂದು ಕೇಳಿದ್ದಾರೆ.

ಈ ನಡುವೆ ವಿನಯ ಕುಲಕರ್ಣಿ ಅವರ ಪರವಾಗಿ ಪತ್ನಿ ಶಿವಲೀಲಾ ಕುಲಕರ್ಣಿ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ : Karnataka Elections 2023 : ಸಿದ್ದರಾಮಯ್ಯ ಮುಸ್ಲಿಮರ ನಾಯಕ, ಡಿಕೆಶಿ ಕ್ರಿಮಿನಲ್‌ಗಳ ನೇತಾರ ಎಂದ ಶೋಭಾ ಕರಂದ್ಲಾಜೆ

Exit mobile version