Site icon Vistara News

Karnataka Election 2023: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಜಿ.ಟಿ.ದೇವೇಗೌಡ ಪತ್ನಿ ವಿರುದ್ಧ ಎಫ್‌ಐಆರ್

#image_title

ಮೈಸೂರು: ಚುನಾವಣಾ ನೀತಿ ಸಂಹಿತೆ (Karnataka Election 2023) ಉಲ್ಲಂಘನೆ ಆರೋಪದಡಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರ ಪತ್ನಿ ಲಲಿತಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಿಂದ ದೂರು ದಾಖಲಾದ ಹಿನ್ನೆಲೆಯಲ್ಲಿ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಹುಣಸೂರಿನ ಹನಗೋಡು ಹೋಬಳಿ ಕರ್ಣಕುಪ್ಪೆ ಗ್ರಾಮದಲ್ಲಿ ಏಪ್ರಿಲ್ 6ರಂದು ಕಾಮಗಾರಿಯೊಂದಕ್ಕೆ ಗುದ್ದಲಿಪೂಜೆ ಕಾರ್ಯಕ್ರಮ ನಡೆದಿತ್ತು. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಜಿಟಿಡಿ ಪತ್ನಿ, ಹುಣಸೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹರೀಶ್ ಗೌಡ ತಾಯಿ ಲಲಿತಾ ಗುದ್ದಲಿ ಪೂಜೆ ಸಲ್ಲಿಸಿದ್ದರು.

ನಿಯಮಾನುಸಾರ ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೆ ಗುದ್ದಲಿ ಪೂಜೆ ನಡೆಸಿರುವುದು ಹಾಗೂ ಗ್ರಾಮಸ್ಥರು ಜೆಡಿಎಸ್‌ ನಾಯಕರ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಸುಬ್ರಹ್ಮಣ್ಯ ಎಂಬುವವರು ಕ್ರಮ ಕೈಗೊಳ್ಳುವಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ | Road Accident: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ; 60ಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿದ್ದೇ ಪವಾಡ

ಲಕ್ಷ್ಮೇಶ್ವರದಲ್ಲಿ ಬಿಜೆಪಿ ಶಾಸಕ, ವಿಧಾನಪರಿಷತ್ ಸದಸ್ಯ ಸೇರಿ ಹಲವರ ವಿರುದ್ಧ ಎಫ್‌ಐಆರ್

ಗದಗ: ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಬಿಜೆಪಿ ಶಾಸಕ, ವಿಧಾನಪರಿಷತ್ ಸದಸ್ಯ ಸೇರಿ ಹಲವರ ವಿರುದ್ಧ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೇವಸ್ಥಾನಗಳಲ್ಲಿ ಚುನಾವಣಾ ಚಟುವಟಕೆಗೆ ಅವಕಾಶವಿಲ್ಲದಿದ್ದರೂ ಬಳಕೆ ಮಾಡಿಕೊಂಡಿದ್ದರಿಂದ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಗದಗ ಬೇಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್ ಸೇರಿದಂತೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ವಿಜಯ ಕಂಕಣ ಕಾರ್ಯಕ್ರಮಕ್ಕೆ ದೇವಸ್ಥಾನ ಬಳಕೆ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ 3 ಲಕ್ಷ ರೂಪಾಯಿ ವಶಕ್ಕೆ

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ರಮ್ಮನಹಳ್ಳಿ ಚೆಕ್ ಪೋಸ್ಟ್‌ನಲ್ಲಿ 3 ಲಕ್ಷ ರೂ.ಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೈಕ್‌ನಲ್ಲಿ ಯಾವುದೇ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದಾಗ ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ | Karnataka Election 2023: ರಾಜ್ಯದ ವಿವಿಧೆಡೆ ನಗದು, ಕುಕ್ಕರ್‌, ಸೀರೆ ಸೇರಿ 7.64 ಕೋಟಿ ರೂ. ಮೌಲ್ಯದ ವಸ್ತುಗಳ ಜಪ್ತಿ

1.57 ಕೋಟಿ ರೂ. ಮೌಲ್ಯದ ಕುಕ್ಕರ್, ತವಾಗಳ ವಶ

ಬೆಂಗಳೂರು: ನಗರದ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತದಾರರಿಗೆ ಹಂಚಿಕೆ ಮಾಡಲು ದಾಸ್ತಾನು ಮಾಡಿದ್ದ 1.57 ಕೋಟಿ ರೂಪಾಯಿ ಮೌಲ್ಯದ ಕುಕ್ಕರ್ ಹಾಗೂ ತವಾಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ದಾಳಿಯಲ್ಲಿ 4533 ಕುಕ್ಕರ್, 10964 ತವಾಗಳು ಪತ್ತೆಯಾಗಿವೆ. ಆದರೆ, ಕುಕ್ಕರ್ ಮತ್ತು ತವಾಗಳು ಯಾವ ಪಕ್ಷದ ಅಭ್ಯರ್ಥಿಗೆ ಸೇರಿದ್ದು, ಎಲ್ಲಿಗೆ ಸಾಗಿಸಲು ದಾಸ್ತಾನು ಮಾಡಲಾಗಿತ್ತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಎಲ್ಲ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Exit mobile version