ತುಮಕೂರು: ಗಂಡಸರು ತಮ್ಮ ಹೆಂಡತಿಯರನ್ನು ಒಲಿಸಿಕೊಳ್ಳಲು ತಂತ್ರಗಳನ್ನು ಮಾಡುವಂತೆಯೇ ಅಂಕೆಯಲ್ಲಿಟ್ಟುಕೊಳ್ಳಲು ಸಾಕಷ್ಟು ಕುತಂತ್ರಗಳನ್ನೂ ಮಾಡುತ್ತಾರೆ. ಕೆಲವೊಮ್ಮೆ ಬೆದರಿಕೆಯನ್ನೂ ಹಾಕುತ್ತಾರೆ. ಇನ್ನು ಕೆಲವರು ತಾವೇ ಸಾಯ್ತೀವಿ ಅಂತ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಾರೆ! ಇಲ್ಲೊಬ್ಬ ಕುಡುಕ ಗಂಡ ಮನೆ ಪ್ರವೇಶಿಸಲು ಬಾಗಿಲು ತೆರೆಯದ ಹೆಂಡತಿಯನ್ನು ಒಲಿಸಿಕೊಳ್ಳಲು ಪೆಟ್ರೋಲ್ ಸುರಿದುಕೊಳ್ಳುವ ನಾಟಕ ಮಾಡಲು (Viral News) ಹೋಗಿ ಕೊನೆಗೆ ತಾವೇ ಬೆಂಕಿಯ ಬಲೆಗೆ ಬಿದ್ದಿದ್ದಾನೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ತಂಗನಹಳ್ಳಿಯ ವಿನೋದ್‌ಗೆ ಕುಡಿತದ ಚಟ ಜೋರು. ಪ್ರತಿ ದಿನವೂ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುವುದು ಸಾಮಾನ್ಯ ಎಂಬಂತಾಗಿತ್ತು. ಈ ಬಗ್ಗೆ ಆಗಾಗ ಮನೆಯಲ್ಲಿ ಗಲಾಟೆ, ಕಣ್ಣೀರು. ಅದೆಷ್ಟೋ ಬಾರಿ ಮನೆ ಪಂಚಾಯಿತಿಕೆ, ಕುಟುಂಬದ ಪಂಚಾಯಿತಿಕೆ ಮತ್ತು ಊರಿನ ಪಂಚಾಯಿತಿಕೆಯೂ ನಡೆದು ಇನ್ನು ಕುಡಿಯುವುದಿಲ್ಲ ಎನ್ನುವಲ್ಲಿಗೆ ಮುಕ್ತಾಯವಾಗುತ್ತಿತ್ತು. ಪ್ರತಿ ಬಾರಿ ಪ್ರತಿಜ್ಞೆ ಮುರಿಯುವುದು, ಕುಡಿಯವುದು, ಮನೆಗೆ ಬಂದು ಜಗಳ ಮಾಡುವುದು ಯಥಾಪ್ರಕಾರ ಮುಂದುವರಿದಿತ್ತು.
ಮಂಗಳವಾರ ರಾತ್ರಿಯೂ ಆಗಿದ್ದು ಹೀಗೇ..
ಮನೆಯಿಂದ ಹೊರಗೆ ಹೊರಟ ಗಂಡನಿಗೆ ಹೆಂಡತಿ, ಕುಡಿದುಬಂದರೆ ಬಾಗಿಲು ತೆರೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಳು. ಆದರೆ, ಹೊರಗೆ ಹೋದ ವಿನೋದನಿಗೆ ಕುಡಿಯದೆ ಇರಲು ಆಗಲೇ ಇಲ್ಲ. ಅದರಲ್ಲೂ ಆ ಭಾಗದಲ್ಲಿ ಮದ್ಯಕ್ಕಾಗಿ ತುಂಬ ಕಷ್ಟಪಡಬೇಕಾಗಿಲ್ಲ. ಕಂಡ ಕಂಡಲ್ಲಿ ಸಿಗುತ್ತದೆ. ಹೀಗಾಗಿ ಹೊರಗೆ ಹೋದವನು ಕುಡಿದೇ ಬಂದಿದ್ದ.
ಹಾಗೆ ಕುಡಿದು ತೂರಾಡುತ್ತಾ ಮನೆಗೆ ಬಂದವನಿಗೆ ಮುಚ್ಚಿದ ಬಾಗಿಲು ಎದುರಾಗಿತ್ತು. ಬಾಗಿಲು ತೆಗಿ ಎಂದು ಹೇಳಿದರೆ ಆಕೆ ಒಪ್ಪಲಿಲ್ಲ. ಹೀಗಾಗಿ ಸ್ವಲ್ಪ ಹೊತ್ತು ಬೆದರಿಕೆ ಹಾಕಿದ ಆತ ಬಳಿಕ ಅನುಕಂಪ ಪಡೆಯುವ ತಂತ್ರವನ್ನು ಅನುಸರಿಸಲು ಮುಂದಾದ.
ಅಲ್ಲೇ ಇದ್ದ ತನ್ನ ವಾಹನದಿಂದ ಪೆಟ್ರೋಲ್ ತೆಗೆದು ಕೈಯಲ್ಲಿ ಹಿಡಿದುಕೊಂಡು ʻಬಾಗಿಲು ತೆಗೆಯದಿದ್ದರೆ ಪೆಟ್ರೋಲ್ ಸುರಿದುಕೊಂಡು ಸಾಯುತ್ತೇನೆʼʼ ಎಂದು ಬೆದರಿಕೆ ಹಾಕತೊಡಗಿದ. ಆದರೆ ಆಕೆಗೆ ಇನ್ನೊಂದು ಹೆದರಿಕೆ. ಕೈಯಲ್ಲಿ ಪೆಟ್ರೋಲ್ ಹಿಡಿದುಕೊಂಡಿರುವ ಆತ ಕುಡಿದ ಮತ್ತಿನಲ್ಲಿ ತನ್ನ ಮೇಲೆಯೇ ಪೆಟ್ರೋಲ್ ಹಾಕಿದರೆ ಎನ್ನುವ ಭಯ.
ಹಾಗಾಗಿ ಆಕೆ ಬಾಗಿಲು ತೆಗೆಯಲಿಲ್ಲ. ಸ್ವಲ್ಪ ಹೊತ್ತು ಬಾಗಿಲು ತೆರೆಯದೆ ಇದ್ದುದನ್ನು ಕಂಡ ವಿನೋದ್ ಮೈ ಮೇಲೆ ಪೆಟ್ರೋಲನ್ನು ಸುರಿದುಕೊಂಡೇ ಬಿಟ್ಟ. ಆಗಲೂ ಆಕೆ ಬಾಗಿಲು ತೆರೆಯಲಿಲ್ಲ.
ವಿನೋದ್ ನೋಡು ಬೆಂಕಿ ಹಚ್ಚಿಕೊಳ್ತೇನೆ, ಹಚ್ಚಿಕೊಳ್ತೇನೆ ಎಂದು ಜೋರಾಗಿ ಹೇಳತೊಡಗಿದ. ಆದರೆ, ಹಾಗೆ ಮಾಡಲಿಕ್ಕಿಲ್ಲ ಎನ್ನುವ ಭಂಡ ಧೈರ್ಯದಲ್ಲಿ ಆಕೆ ಒಳಗೇ ಇದ್ದಳು. ಮತ್ತು ಇಳಿದ ಮೇಲೆ ಎಲ್ಲವೂ ಸರಿಯಾದೀತು ಎಂದು ಭಾವಿಸಿದ್ದಳು.
ಈ ನಡುವೆ ಹೊರಗಡೆ ವಿನೋದ್‌ನ ನಾಟಕ ಮುಂದುವರಿದಿತ್ತು. ಆತ ಪೆಟ್ರೋಲ್ ಸುರಿದುಕೊಂಡು ಒದ್ದೆಯಾದ ಮೈಯಲ್ಲಿ ಲೈಟರ್ ಹಿಡಿದುಕೊಂಡು ʻಈಗ ಲೈಟರ್ ಆನ್ ಮಾಡ್ತೀನಿ ನೋಡುʼ ಎಂದು ಬೆದರಿಕೆ ಹಾಕಿದ. ಹೀಗೆ ತೂರಾಡುವ, ಮಾತನಾಡುವ ಭರದಲ್ಲಿ ಲೈಟರ್ ಆನ್ ಆಗಿಯೇ ಬಿಟ್ಟಿದೆ.
ಕೂಡಲೇ ಬೆಂಕಿ ಆತನ ಮೈಗೆ ಬೆಂಕಿ ಹತ್ತಿಕೊಂಡುಬಿಟ್ಟಿದೆ. ಆಗ ಅವನಿಗೆ ಕುಡಿದ ಮತ್ತು ಇಳಿದು ಜೋರಾಗಿ ಅರಚಿಕೊಳ್ಳಲು ಆರಂಭಿಸಿದ್ದಾನೆ. ಆಗ ಅಕ್ಕಪಕ್ಕದವರೆಲ್ಲ ಬಂದು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟು ಹೊತ್ತಿಗೆ ಪತ್ನಿಯೂ ಓಡಿ ಬಂದಿದ್ದಾಳೆ.
ಪತ್ನಿಯನ್ನು ಹೆದರಿಸಲು ಹೋಗಿ ಆಕಸ್ಮಿಕವಾಗಿ ನನ್ನ ಮೈಯನ್ನು ತಾನೇ ಸುಟ್ಟುಕೊಂಡ ಈ ಭೂಪನಿಗೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವು ಬದುಕಿನ ಜೋತೆ ನರಳಾಡುತ್ತಿರುವ ವಿನೋದ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೋಳಾಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಡಿತದ ಮತ್ತಿನಲ್ಲಿ ಏನೇನು ದುರಂತ ಆಗುತ್ತದೆ ಎನ್ನುವುದಕ್ಕೆ ಇದೊಂದು ಸ್ಯಾಂಪಲ್ ಅಷ್ಟೆ.
ಇದನ್ನೂ ಓದಿ: Viral News : ಫೈವ್ ಸ್ಟಾರ್ ಹೋಟೆಲ್‌ನಲ್ಲಿ 2 ವರ್ಷ ಇದ್ದು, ಒಂದೇ ಒಂದು ರೂ. ಬಿಲ್ ಕಟ್ಟದೆ ಹೋಗಲೂ ಸಾಧ್ಯ!