ಮಂಗಳೂರು: ತುಳುನಾಡಿನ ವಿಶಿಷ್ಟ ಆಚರಣೆ ದೈವಾರಾಧನೆಗೆ ಅದರದ್ದೇ ಆದ ಮಹತ್ವವಿದೆ, ಪಾವಿತ್ರ್ಯವಿದೆ. ಆದರೆ ಇದನ್ನೆಲ್ಲ ಮರೆತು ಮಂಗಳೂರಿನಲ್ಲಿ ನಡೆದ ‘ಆಟಿದ ಕೂಟ’ ಕಾರ್ಯಕ್ರಮವೊಂದರಲ್ಲಿ ದೈವ ನೃತ್ಯವನ್ನು ಅನುಕರಣೆ ಮಾಡಿ ಕುಣಿದ ಮಹಿಳೆ ಇದೀಗ ತಪ್ಪೊಪ್ಪಿಕೊಂಡು ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ತೆರಳಿ ಮಂಜುನಾಥ ದೇವರ ಸನ್ನಿಧಿಯಲ್ಲಿ ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ. ಮಹಿಳೆ ದೈವ ನೃತ್ಯವನ್ನು ಅನುಕರಣೆ ಮಾಡುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಅವರು ದೇವರ ಸನ್ನಿದಿಗೆ ಆಗಮಿಸಿ ಕಣ್ಣೀರಿಟ್ಟು ಕ್ಷಮೆಯಾಚಿಸಿದ್ದಾರೆ (Viral News).
ಇತ್ತೀಚೆಗೆ ಮಂಗಳೂರಿನ ಯೆಯ್ಯಾಡಿಯಲ್ಲಿ ನಡೆದಿದ್ದ ‘ಆಟಿದ ಕೂಟ’ ಕಾರ್ಯಕ್ರಮದಲ್ಲಿ ಕವಿತಾ ಎನ್ನುವ ಮಹಿಳೆ ದೈವ ನರ್ತನ ಮಾಡಿದ್ದರು. ಈ ವಿಡಿಯೊ ವೈರಲ್ ಆಗಿ ಕವಿತಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಬುಧವಾರ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಆಗಮಿಸಿ ಕ್ಷಮೆಯಾಚಿಸಿದ್ದಾರೆ. ದೈವರಾಧಕ ಸಮ್ಮುಖದಲ್ಲಿ ಬಂದು ದೇವರ ಮುಂದೆ ದೇವರ ಮುಂದೆ ಕಣ್ಣೀರು ಹಾಕಿ ಕ್ಷಮಾಪಣೆ ಕೇಳಿದ್ದಾರೆ. ಜತೆಗೆ ತಪ್ಪು ಕಾಣಿಕೆ ಹಾಕಿ ರುದ್ರಾಭಿಷೇಕ ಸೇವೆ ಮಾಡಿಸಿದ್ದಾರೆ.
ದೇವರ ಮುಂದೆ ಕಣ್ಣೀರು
ʼʼನಿತ್ಯ ದೈವಗಳ ಆರಾಧನೆ, ದೇವರ ಪೂಜೆ ಮಾಡಿಕೊಂಡು ಬಂದವಳು ನಾನು. ಆದರೆ ಸಂಗೀತ ಮತ್ತು ನೃತ್ಯದಲ್ಲಿ ಅಪಾರ ಆಸಕ್ತಿಯ ಕಾರಣದಿಂದ ತಪ್ಪಾಗಿದೆ. ಮಂಜುನಾಥನ ಬಳಿ ಕ್ಷಮೆ ಕೇಳಿ ತಪ್ಪು ಕಾಣಿಕೆ ಹಾಕಿದ್ದೇನೆ. ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ. ʼವಾ ಪೊರ್ಲುಯಾʼ ತುಳು ಹಾಡು ಮೊಳಗಿದಾಗ ಮೈಮರೆತು ನರ್ತಿಸಿದ್ದೇನೆ. ನಾನು ದೈವವನ್ನು ಅಪಹಾಸ್ಯ ಮಾಡಿಲ್ಲ. ಯಾರೂ ಇದನ್ನು ಅನುಕರಿಸಬೇಡಿ. ನಾನು ತಿಳಿಯದೇ ತಪ್ಪು ಮಾಡಿದ್ದೇನೆ. ಇದಕ್ಕಾಗಿ ನನ್ನನ್ನು ಕ್ಷಮಿಸಿʼʼ ಎಂದು ಅತ್ತು ಬಿಟ್ಟಿದ್ದಾರೆ. ಕವಿತಾ ಅವರೊಂದಿಗೆ ಆಗಮಿಸಿದ ದೈವಾರಾಧಕ ದಯಾನಂದ ಕತ್ತಲ್‌ಸಾರ್, ಬುದ್ದಿಮಾತು ಹೇಳಿ ಇಂಥ ಘಟನೆ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರಿ ಆಕ್ರೋಶ
ಕರಾವಳಿಯಲ್ಲಿ ದೈವಾರಾಧನೆಗೆ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಮಹತ್ತರ ಸ್ಥಾನವಿದೆ. ಅನೇಕ ಮಂದಿ ಶ್ರದ್ಧಾ ಭಕ್ತಿಯಿಂದ ತಲೆ ತಲಾಂತರಗಳಿಂದ ದೈವವನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಆದರೆ ಕವಿತಾ ಎನ್ನುವ ಈ ಮಹಿಳೆ ʼಆಟಿದ ಕೂಟʼ ಕಾರ್ಯಕ್ರಮದಲ್ಲಿ ಅದೆಲ್ಲವನ್ನೂ ಮರೆತು ತುಳು ಹಾಡಿಗೆ ದೈವದಂತೆ ಹೆಜ್ಜೆ ಹಾಕಿದ್ದು ಅನೇಕರನ್ನು ಕೆರಳಿಸಿತ್ತು. ಆಕೆ ದೈವದಂತೆ ಹೆಜ್ಜೆ ಹಾಕುತ್ತಿದ್ದರೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡುತ್ತಿರುವುದೂ ವಿಡಿಯೊದಲ್ಲಿ ಕಂಡು ಬಂದಿತ್ತು.
ಕವಿತಾಳ ಈ ದೈವ ನರ್ತನದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ಭಕ್ತರನ್ನು ಕೆರಳಿಸಿತ್ತು. ಜತೆಗೆ ಭಾರಿ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಕಾರ್ಯಕ್ರಮ ಆಯೋಜಕರಿಗೆ ಕರೆ ಮಾಡಿ ಅನೇಕರು ತರಾಟೆಗೆ ತೆಗೆದುಕೊಂಡಿದ್ದರು. ಕವಿತಾ ದೈವದ ಎದುರು ನಿಂತು ಕ್ಷಮೆ ಯಾಚಿಸುವಂತೆ ಆಗ್ರಹಿಸಿದ್ದರು. ಅದರಂತೆ ಇದೀಗ ಅವರು ಕ್ಷಮೆಯಾಚಿಸಿದ್ದಾರೆ.
ಇದನ್ನೂ ಓದಿ: Rishab Shetty: ಕಾಂತಾರ 2ನಲ್ಲಿ ದೈವಾರಾಧನೆ ಪ್ರದರ್ಶಿಸಿದರೆ ಉಗ್ರ ಹೋರಾಟ: ರಿಷಬ್‌ಗೆ ವಾರ್ನಿಂಗ್!